ಶಿಕ್ಷಣ ಪ್ರಸ್ತುತ ಸಮಾಜದಲ್ಲಿ ದೊಡ್ಡ ಆಸ್ತಿ. ಈ ಹಿನ್ನಲೆ ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೇ ಉತ್ತಮ ಶಿಕ್ಷಣ ಮೂಲಕ ದೇಶದ ಆಸ್ತಿಯನ್ನಾಗಿ ಮಾಡಿ ಎಂದು ಪಪಂ ಅಧ್ಯಕ್ಷೆ ಮಂಗಳಮ್ಮ ಪೋಷಕರಿಗೆ ಕರೆ ನೀಡಿದರು.
ಗುಬ್ಬಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕ ಕಾಲದಲ್ಲಿ ಪ್ರಪಂಚದ ವೇಗಕ್ಕೆ ತಕ್ಕನಾಗಿ ನಡೆಯಲು ಶಿಕ್ಷಣ ಅತ್ಯವಶ್ಯವಾಗಿದೆ. ಮುಖ್ಯವಾಹಿನಿಗೆ ಬರಲು ಶೈಕ್ಷಣಿಕ ಪ್ರಗತಿ ಆಗಬೇಕಿದೆ. ಈ ಹಿನ್ನಲೆ ಪೋಷಕರು ಹಾಗೂ ಶಿಕ್ಷಕ ವರ್ಗ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ ಉತ್ತಮ ಸಮಾಜ ಕಟ್ಟಬೇಕು ಎಂದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಗ್ರಾಮೀಣ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣ ಮಾಡಲು ಸೂಕ್ತ ವೇದಿಕೆ ನಿರ್ಮಾಣ ಮಾಡುವ ಶಿಕ್ಷಣ ಇಲಾಖೆ ಕ್ಲಸ್ಟರ್, ಹೋಬಳಿ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಿ ತಾಲ್ಲೂಕು ಮಟ್ಟದಲ್ಲಿ ಗೆದ್ದ ಮಕ್ಕಳಿಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅವಕಾಶ ನೀಡುವುದು ಚಿಗುರುವ ಪ್ರತಿಭೆಗೆ ನೀರೆರೆದಂತೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಮಾತನಾಡಿ ಪ್ರತಿ ವರ್ಷ ನಡೆಯುವ ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರ ತರಲು ಸೂಕ್ತ ವೇದಿಕೆ ಎನಿಸಿದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪಾಲ್ಗೊಳ್ಳುವ ಮಕ್ಕಳು ಸಂಕುಚಿತ ಮನೋಭಾವ ತೊಡೆದು ವಿಶಾಲ ಮನಸ್ಥಿತಿಗೆ ತಲುಪುತ್ತಾರೆ. ಈ ಹಿನ್ನಲೆ ಮಕ್ಕಳ ಪ್ರತಿಭೆಯನ್ನು ಪ್ರಾಮಾಣಿಕವಾಗಿ ಗುರುತಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಶಿಕ್ಷಣ ಇಲಾಖೆಯ ಬೀರೇಂದ್ರ, ರವೀಶ್, ಚನ್ನಬಸವಯ್ಯ, ರಾಮಚಂದ್ರ, ಚನ್ನಬಸವಾರಾಧ್ಯ, ಪದ್ಮಾವತಿ, ಲಕ್ಷ್ಮೀಕಾಂತ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ನೂರಾರು ಶಾಲಾ ಮಕ್ಕಳು ತಮ್ಮ ಕಲಾ ಕೌಶಲ್ಯ ಪ್ರದರ್ಶಿಸಿದರು.
ವೇದಿಕೆಯಲ್ಲಿ ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಉಮೇಶ್, ತಾಲ್ಲೂಕು ಅಧ್ಯಕ್ಷ ಬಿ.ಸಿ.ಶಿವಣ್ಣ, ಪ್ರಾಥಮಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಟಿ.ಪ್ರಕಾಶ್, ಕಸಾಪ ಅಧ್ಯಕ್ಷ ಯತೀಶ್, ಬಿಆರ್ ಸಿ ಮಧುಸೂದನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್, ಶಿಕ್ಷಣ ಸಂಯೋಜಕ ದೀಪಕ್ ಕುಮಾರ್ ಶೆಟ್ಟಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್, ಉಪ ಪ್ರಾಂಶುಪಾಲರಾದ ಭವ್ಯ ಇತರರು ಇದ್ದರು.