ಕೋವಿಡ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿರುವುದು ರಾಜಕೀಯ ದುರುದ್ದೇಶ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರದ ನಡುವೆ ಮಾಧ್ಯಮಗಳ ಜತೆ ಮಾತನಾಡಿದ ಅವರು, “ತಮ್ಮ ಅಧೀನ ಸಂಸ್ಥೆಗಳನ್ನು, ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಪ್ರತಿಪಕ್ಷ ನಾಯಕರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇಂತಹ ಕೆಟ್ಟ ರಾಜಕೀಯಕ್ಕೆ ಜನರೇ ಪಾಠ ಕಲಿಸುತ್ತಾರೆ” ಎಂದು ಆರೋಪಿಸಿದರು.
ಇನ್ನು ಈ ಸಂದರ್ಭದಲ್ಲೇ ಸರ್ಕಾರ ಕಿತ್ತೊಗೆಯುವುದು ಎಂದರೆ ಕಡಲೆಕಾಯಿ ಕಿತ್ತ ಹಾಗಲ್ಲ ಎಂಬ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, “ನಾವು ಕಡಲೆಕಾಯಿ ಗಿಡ ಕೀಳುತ್ತೇವೆ ಎಂದಿಲ್ಲ. ಸರ್ಕಾರವ್ನನೇ ಕಿತ್ತೊಗೆಯುತ್ತೇವೆ ಎಂದಿರುವುದು. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂಬುದು ಜನರ ಆಸೆ. ಜನರ ಭಾವನೆಯನ್ನಷ್ಟೇ ದೇವೇಗೌಡರು ಹೇಳಿದ್ದಾರೆ” ಎಂದರು.
ಇದನ್ನು ಓದಿದ್ದೀರಾ? ಕೋವಿಡ್ ಹಗರಣ | ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಕಾನೂನು ಕ್ರಮಕ್ಕೆ ನ್ಯಾ. ಡಿ’ಕುನ್ಹಾ ಆಯೋಗ ಶಿಫಾರಸು
ಮೇಕೆದಾಟಿಗೆ ಪರ್ಮಿಷನ್ ನೀಡಿದರೆ ಮೂರೇ ವರ್ಷದಲ್ಲಿ ಅಣೆಕಟ್ಟು ನಿರ್ಮಾಣ ಮಾಡುತ್ತೇವೆ ಎಂಬ ಡಿಕೆಶಿ ಹೇಳಿಕೆಗೂ ಪ್ರತಿಕ್ರಿಯೆ ನೀಡಿದರು. “ಮೊದಲು ಅವರ ಮಿತ್ರಪಕ್ಷ ಡಿಎಂಕೆಯನ್ನು ಒಪ್ಪಿಸಲಿ. ಕೇಂದ್ರ ಸರ್ಕಾರವನ್ನು ಒಪ್ಪಿಸುವ ಭಾರ ನಮ್ಮದು. ಅವರ ಮಿತ್ರಪಕ್ಷ ಕ್ಯಾತೆ ತೆಗೆದುಕೊಂಡು ಕೂತಿದೆಯಲ್ಲ, ಅದರ ಬಗ್ಗೆ ಅವರು ಮೊದಲು ಬಾಯಿ ತೆರೆಯಲಿ” ಎಂದು ಕುಟುಕಿದರು.
“ಚನ್ನಪಟ್ಟಣ ಕ್ಷೇತ್ರದಲ್ಲಿ ಜನರ ಒಲವು ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿಭಿನ್ನ ಪಕ್ಷಗಳಿಂದ ಐದು ಬಾರಿ ಶಾಸಕರಾಗಿ ಮಾಡಿದ ಕೆಲಸವನ್ನು ಜನರು ನೋಡಿದ್ದಾರೆ. ಈಗ ಒಬ್ಬ ಯುವಕ ಸ್ಪರ್ಧೆ ಮಾಡಿದ್ದಾನೆ, ಆತನನ್ನು ಒಮ್ಮೆ ನೋಡೋಣ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ” ಎಂದು ಕುಮಾರಸ್ವಾಮಿ ಹೇಳಿದರು.
“ನಾನು ಕೂಡ ಈ ಬಾರಿ 122 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ನಿಖಿಲ್ 190 ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದಾರೆ. ದೇವೇಗೌಡರು, ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ದಾಳಿ ತಡೆಯಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಿಖಿಲ್ ಗೆಲ್ಲುವುದು ಖಚಿತ” ಎಂದು ಭರವಸೆ ವ್ಯಕ್ತಪಡಿಸಿದರು.
