ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರಿಗೆ ಸನ್ಮಾನ ಮಾಡುವ ವಿಚಾರವಾಗಿ ಗ್ರಾಮ ಪಂಚಾಯತಿಗೆ ಬೆಂಕಿ ಹಚ್ಚಿದ ಘಟನೆ ಬೆಳಗಾವಿ ತಾಲೂಕಿನ ಕಲಕಾಂಬ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯಿತಿ ಕಟ್ಟಡದ ಮೇಲೆ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದಾರೆ. ತಡರಾತ್ರಿ ಆಗಮಿಸಿದ್ದ ಕಿಡಿಗೇಡಿಗಳು ಬಿಯರ್ ಬಾಟಲ್‌ನಲ್ಲಿ ಪೆಟ್ರೋಲ್ ಸುರಿದು ಬಟ್ಟೆ ಹಾಕಿ ಬೆಂಕಿ ಹಚ್ಚಿ ಪರಾರಿಯಾಗಿದ್ದು, ಅಲ್ಲದೇ, ಗ್ರಾಮ ಪಂಚಾಯಿತಿ ಆವರಣ ಹಾಗೂ ಒಳಗಡೆ ಬಿಯರ್ ಬಾಟಲ್‌ಗಳನ್ನು ಎಸೆಯಲಾಗಿದೆ. ಕೃತ್ಯ ಎಸಗಿ ಸಿಕ್ಕಿಬಿಳುತ್ತೇವೆ ಎಂದು ಗ್ರಾಪಂ ಕಟ್ಟಡದ ಸಿಸಿಟಿವಿ ಕ್ಯಾಮೆರಾ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕಲಕಾಂಬ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಒಂದು ಗುಂಪು ಸಂಸದೆಯರನ್ನು ಸನ್ಮಾನಿಸಿದ್ದು ಮತ್ತೊಂದು ಗುಂಪಿನ ಸದಸ್ಯರು ತಮ್ಮ ಕಾಲೋನಿಗೆ ಕರೆದೊಯ್ದು ಸನ್ಮಾನಿಸುವ ಉದ್ದೇಶ ಹೊಂದಿದ್ದರು. ಆದರೆ ಇದಕ್ಕೆ ಅವಕಾಶ ಸಿಗದಿದ್ದಾಗ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು, ರಾತ್ರಿ ಸಮಯದಲ್ಲಿ ಬಿಯರ್ ಬಾಟಲಿಯಲ್ಲಿ ಪೆಟ್ರೋಲ್ ಹಾಕಿ ಗ್ರಾಮ ಪಂಚಾಯತಿ ಕಛೇರಿಯತ್ತ ಎಸೆದಿದ್ದಾರೆ. ಇದರಿಂದಾಗಿ ಕಿಟಕಿ ಗಾಜು ಜಖಂ ಆಗಿದ್ದು, ಕೆಲ ವಸ್ತುಗಳು ಸುಟ್ಟು ಕರಕಲಾಗಿವೆ.
ಇದನ್ನು ಓದಿದ್ದೀರಾ? ರಾಯಚೂರು | ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಸುಟ್ಟು ಕರಕಲಾದ ಹತ್ತಿ; ಸಂಕಷ್ಟಕ್ಕೆ ಸಿಲುಕಿದ ರೈತ
ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗ್ರಾಮದಲ್ಲಿ ಪೊಲೀಸರು ಠಿಕಾಣಿ ಹೂಡಿದ್ದಾರೆ.
