ಒಳಮೀಸಲಾತಿ ಜಾರಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಿ, ಮೂರು ತಿಂಗಳಲ್ಲಿ ವರದಿ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದ ಸರ್ಕಾರ ಇದುವರೆಗೆ ನ್ಯಾಯಮೂರ್ತಿಗಳ ನೇಮಕ ಮಾಡಿಲ್ಲ ಎಂದು ಆದಿಜಾಂಬವಮಠದ ಶ್ರೀಷಡಕ್ಷರ ಮುನಿ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಕಚೇರಿ ಆವರಣದಲ್ಲಿ ತಾಲೂಕಿನ ಧರ್ಮಪುರ ಹೋಬಳಿಯ ಖಂಡೇನಹಳ್ಳಿಯ ಮಾದಿಗ ದಂಡೋರ ಸಂಘಟನೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ನೇತೃತ್ವದಲ್ಲಿ ಸಮಸ್ತ ಮಾದಿಗ ಸಮುದಾಯದವರೊಂದಿಗೆ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದರು.
“ರಾಜ್ಯದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ತಕ್ಷಣವೇ ಒಳ ಮೀಸಲಾತಿ ಜಾರಿ ಮಾಡುವುದಾಗಿ ಘೋಷಣೆ ಮಾಡಿತ್ತು. ಚಿತ್ರದುರ್ಗದಲ್ಲಿ ನಡೆದ ಎಸ್.ಸಿ/ಎಸ್.ಟಿ. ಸಮಾವೇಶದಲ್ಲಿ 6ನೇ ಗ್ಯಾರಂಟಿಯಾಗಿ ಒಳಮೀಸಲಾತಿ ಜಾರಿ ಘೋಷಣೆ ಮಾಡಿತ್ತು ಎಂದು ತಿಳಿಸಿದರು.
“ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸಂವಿಧಾನ ಬದ್ದವೆಂದು ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಾಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಜಾರಿ ಮಾಡುವಂತೆ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿನಂತೆ ಈಗಾಗಲೇ ಹರಿಯಾಣ ಸರ್ಕಾರವು ಮೊದಲನೇ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ಘೋಷಣೆ ಮಾಡಿದೆ, ಆದರೆ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಸಂಘಟನೆಗಳ ಹೋರಾಟಕ್ಕೆ ಮಣಿದು ಅಕ್ಟೋಬರ್ 28ರಂದು ಸಚಿವ ಸಂಪುಟಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡಲು ಮೂರು ತಿಂಗಳ ಅವಧಿಯಲ್ಲಿ ವರದಿ ಪಡೆಯಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವನ್ನು ಮಾಡಲಾಗುವುದು ಎಂದು ಘೋಷಿಸಿದೆ. ಆದರೆ ಸರ್ಕಾರ ಇದುವರೆಗೂ ಯಾವುದೇ ನ್ಯಾಯಾಧೀಶರ ನೇಮಕಾತಿಯನ್ನು ಮಾಡದೆ ಕಾಲಹರಣಮಾಡುತ್ತಿರುವುದು ನಿಜಕ್ಕೂ ಖಂಡನೀಯ. ಆದ್ದರಿಂದ ಈ ಕೂಡಲೇ ಸರ್ಕಾರವು ನ್ಯಾಯಾಧೀಶರನ್ನು ನೇಮಿಸಿ, ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂಬುದಾಗಿ ಸಮಸ್ತ ಮಾದಿಗ ಸಮುದಾಯದವರ ಪರವಾಗಿ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಪಾವಗಡ ಶ್ರೀರಾಮ್ ಮಾತನಾಡಿ “ಸಾಮಾಜಿಕ ನ್ಯಾಯದ ಪರ ಎಂದು ಹೇಳುವ ಕಾಂಗ್ರೆಸ್ ಸರ್ಕಾರ ಒಳ ಮೀಸಲು ವಿಚಾರದಲ್ಲಿ ದಿಟ್ಟ ನಿಲುವು ಕೈಗೊಳ್ಳಬೇಕು. ಈ ವಿಳಂಬ ದೋರಣೆ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ದಲಿತ ಸಂಘಟನೆಗಳ ಕಾರ್ಯಕರ್ತರು ಸೇನಾನಿಗಳಂತೆ ಹೋರಾಡುತ್ತಿದ್ದು, ಸರ್ಕಾರ ದತ್ತಾಂಶ, ವರದಿಯ ಕುಂಟು ನೆಪಬಿಟ್ಟು ಸ್ಪಷ್ಟ ನಿರ್ಧಾರ ಕೈಗೊಂಡರೆ ಮಾತ್ರ ಮಾದಿಗ ಸಮುದಾಯದ ಹಿತ ಕಾಯಲು ಸಾಧ್ಯ. ಮೀಸಲು ಜಾರಿಯಾಗುವವರೆಗೆ ರಾಜ್ಯಾದ್ಯಂತ ನಿರಂತರ ಹೋರಾಟ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು, ಮೀಸಲು ಜಾರಿ ಆಗುವವರೆಗೆ ರಾಜ್ಯದಲ್ಲಿನ ಎಲ್ಲ ನೇಮಕಾತಿ ತಡೆ ಹಿಡಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಮಾದಿಗ ದಂಡೋರ ಸಮಿತಿ ಉಪಾಧ್ಯಕ್ಷ ಖಂಡೇನಹಳ್ಳಿ ಡಿ. ಚಿದಾನಂದ ಮಾತನಾಡಿ, ಜನಸಂಖ್ಯೆಗೆ ಅನುಸಾರವಾಗಿ ರಾಜ್ಯದಲ್ಲಿರುವ 101 ಪರಿಶಿಷ್ಠ ಉಪ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೆ ತರಬೇಕು. ದತ್ತಾಂಶ ಸಂಗ್ರಹಿಸಲು ಆಯೋಗ ರಚಿಸಲಾಗುವುದು ಎನ್ನುವ ಸರ್ಕಾರದ ಭರವಸೆ ಇದುವರೆಗೂ ಸಾಕಾರವಾಗಿಲ್ಲ. ನ್ಯಾಯಮೂರ್ತಿಗಳ , ಆಯೋಗ ರಚನೆಯಾಗಿಲ್ಲ. ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯ ಮಾದಿಗರ ದಶಕದ ಕನಸು ನನಸಾಗಿಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಚನ್ನಪಟ್ಟಣ | ಮುಸ್ಲಿಮರಿಗೆ ಕುರ್‌ಆನಿನ ಪ್ರತಿಯೊಂದಿಗೆ ಹಣ ಹಂಚಿದ ಜೆಡಿಎಸ್: ವ್ಯಾಪಕ ಆಕ್ರೋಶ
ಈ ಸಂದರ್ಭದಲ್ಲಿ ಒಳಮೀಸಲಾತಿ ಹೋರಾಟ ಸಮಿತಿ ಮುಖಂಡರುಗಳಾದ ಕೆ.ಪಿ.ಶ್ರೀನಿವಾಸ್, ಬೋರನಕುಂಟೆ ಕರಿಯಣ್ಣ, ಜಿ.ರಾಘವೇಂದ್ರ, ತಿಪ್ಪೇಸ್ವಾಮಿ(ದಾಸಪ್ಪ), ಮಹೇಶ್, ಟಿ.ಗಿರೀಶ್, ಓಂಕಾರಪ್ಪ, ರಂಗಸ್ವಾಮಿ, ಆರ್.ಗಿರೀಶ್, ಕೆ.ಎಚ್.ರಾಜು, ತಿಮ್ಮರಾಯ, ಹೆಚ್. ಆರ್.ಪ್ರಸನ್ನ, ಹರ್ಷ, ಕೆ.ಡಿ. ತಿಪ್ಪೇಸ್ವಾಮಿ, ಕೆ.ಟಿ. ತಿಮ್ಮರಾಜು, ಪಿ.ಚಿದಾನಂದ, ಕೆ.ಆರ್.ಶಿವಣ್ಣ, ಶಿವಕುಮಾರ್, ಶಿವಣ್ಣ, ತಿಪ್ಪೇಸ್ವಾಮಿ, ಜಿ.ಮಾರುತಿ, ಕೆ.ಎಚ್. ತಿಮ್ಮರಾಯ, ರವಿಕುಮಾರ, ದೇವರಾಜ, ಕೆ.ಎನ್.ಲಕ್ಷ್ಮೀ ದೇವಿ, ಡಿ.ಚಿದಾನಂದ ಮತ್ತಿತರರು ಭಾಗವಹಿಸಿದ್ದರು.
