ಸುಮಾರು ಮೂರು ದಶಕಗಳ ಕಾಲ ತಮಿಳು ಚಿತ್ರರಂಗದ ಎಲ್ಲಾ ಸ್ಟಾರ್‌ಗಳ ಜೊತೆ ನಟಿಸಿರುವ ಹಿರಿಯ ನಟ ಡೆಲ್ಲಿ ಗಣೇಶ್ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಈ ಬಗ್ಗೆ ಅವರ ಪುತ್ರ ಮಹದೇವನ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಖಚಿತಪಡಿಸಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ತನ್ನ 80ನೇ ವಯಸ್ಸಿನಲ್ಲಿ ಡೆಲ್ಲಿ ಗಣೇಶ್ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.
“ನಮ್ಮ ತಂದೆ ಡೆಲ್ಲಿ ಗಣೇಶ್ ಅವರು ನವೆಂಬರ್ 9ರಂದು ರಾತ್ರಿ 11 ಗಂಟೆಯ ಸುಮಾರಿಗೆ ನಿಧನರಾದರು ಎಂದು ತಿಳಿಸಲು ನಾವು ತೀವ್ರವಾಗಿ ವಿಷಾದಿಸುತ್ತೇವೆ” ಎಂದು ಪುತ್ರ ಮಹದೇವನ್ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಸೂಫಿ ಸಂತ ಸೈಯದ್ ಷಾ ಖುಸ್ರೋ ಹುಸೇನಿ ನಿಧನ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿ ಗಣ್ಯರ ಸಂತಾಪ
ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಅವರ ಪತ್ತಿನ ಪ್ರವೇಶಂ (1976) ಸಿನಿಮಾದ ಮೂಲಕ ದೆಲ್ಲಿ ಗಣೇಶ್ ತಮಿಳು ಸಿನಿಮಾದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಹೆಸರೇ ಸೂಚಿಸುವಂತೆ ದೆಹಲಿಯವರಾದ ಅವರು ದೆಹಲಿಯಲ್ಲಿ ನಾಟಕ ತಂಡವಾದ ದಕ್ಷಿಣ ಭಾರತ ನಾಟಕ ಸಭಾದ ಸಕ್ರಿಯ ಸದಸ್ಯರಾಗಿದ್ದರು.
ತನ್ನ ವೃತ್ತಿಜೀವನದಲ್ಲಿ ಡೆಲ್ಲಿ ಗಣೇಶ್ ಸುಮಾರು 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯದಾಗಿ ಕಮಲ್ ಹಾಸನ್ ಅವರ ಇಂಡಿಯನ್ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಕಮಲ್ ಹಾಸನ್ ಅವರ ಬಹುತೇಕ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಿಂಧು ಭೈರವಿ (1985), ನಾಯಕನ್ (1987), ಅಪೂರ್ವ ಸಾಗೋಧರರ್‌ಗಳು (1989), ಮೈಕೆಲ್ ಮದನ ಕಾಮ ರಾಜನ್ (1990), ತೆನಾಲಿ (2000) ಹೀಗೆ ಮಲಯಾಳಂ, ತೆಲುಗು ಮತ್ತು ಹಿಂದಿಯಂತಹ ಇತರ ಭಾಷೆಗಳ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಪಾಸಿ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ 1979ರಲ್ಲಿ ತಮಿಳುನಾಡು ರಾಜ್ಯ ಚಲನಚಿತ್ರ ವಿಶೇಷ ಪ್ರಶಸ್ತಿ ಲಭಿಸಿದೆ. 1994ರಲ್ಲಿ ತಮಿಳುನಾಡು ಸರ್ಕಾರವು ಕಲೈಮಾಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
