ಮದ್ಯ ಸೇವಿಸಿದ ಅಮಲಿನಲ್ಲಿ ಮೂವರು ಸ್ನೇಹಿತರು ಒಗ್ಗೂಡಿ ಇನ್ನೋರ್ವ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬೈರಾಪುರ ಬಳಿ ನಡೆದಿದೆ.
ಮದ್ಯಪಾನದ ಮತ್ತಿನಲ್ಲಿ ಸ್ನೇಹಿತರಿಂದಲೇ ಹಲ್ಲೆಗೊಳಗಾದ ಯುವಕ ಸತ್ಯ ಅಲಿಯಾಸ್ ಸ್ಪಾಟ್ ಸತ್ಯ ಎಂಬಾತ ಹಾಸನ ನಗರದದ ಬಿ ಕಾಟೀಹಳ್ಳಿಯ ಮೂಲ ನಿವಾಸಿಯಾಗಿದ್ದಾನೆ.
ಸತ್ಯ ಅಲಿಯಾಸ್ ಸ್ಪಾಟ್ ಸತ್ಯ ತನ್ನ ಮೂವರು ಸ್ನೇಹಿತರೊಂದಿಗೆ ಬೈರಾಪುರ ಬಳಿಯಿರುವ ಬಾರ್‌ನಲ್ಲಿ ಪಾರ್ಟಿ ಮಾಡುತ್ತಿದ್ದನು. ನಂತರ ರಸ್ತೆಯಲ್ಲಿ ಸತ್ಯನಿಗೆ ಬಾಟಲ್, ಚಾಕು ಸೇರಿದಂತೆ ಇತರೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಮನಸೋಯಿಚ್ಛೆ ಮೂವರು ಸ್ನೇಹಿತರು ಥಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l ಜ. 1ರಿಂದ ಮಾ. 31 ವರೆಗೆ ರಾಗಿ,ಭತ್ತ, ಬಿಳಿಜೋಳ ಖರೀದಿ: ಜಿಲ್ಲಾಧಿಕಾರಿ ಸತ್ಯಭಾಮ
ಗಂಭೀರವಾಗಿ ಗಾಯಗೊಂಡಿದ್ದ ಸತ್ಯ ಎಂಬಾತ ನಡುರಸ್ತೆಯಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ಈ ದೃಶ್ಯವನ್ನು ಕಂಡ ಸ್ಥಳೀಯರು ಆಪೆ ಆಟೋದಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ. ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದಾರೆ. ಗಾಯಾಳು ಸತ್ಯ ಎಂಬಾತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಪರಿಶೀಲನೆ ನಡೆಸಿ, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
