ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಮದನ್ ರಾಥೋಡ್ ಶನಿವಾರ ಮಹಿಳಾ ಅಭ್ಯರ್ಥಿ ವಿರುದ್ಧವಾಗಿ ನೀಡಿರುವ ಹೇಳಿಕೆ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. “ಆರ್‌ಎಲ್‌ಪಿ ಸಂಸದ ಹನುಮಾನ್ ಬೇನಿವಾಲ್ ಅವರ ಪತ್ನಿ ಕನಿಕಾ ಬೇನಿವಾಲ್ ಖಿನ್ವಸರ್ ಅವರು ವಿಧಾನಸಭಾ ಉಪಚುನಾವಣೆಯಲ್ಲಿ ಸೋತರೆ ಪ್ರಯೋಜನವಾಗುತ್ತದೆ. ಏಕೆಂದರೆ ಅವರು ಮನೆಯಲ್ಲಿಯೇ ಇದ್ದು ತಮ್ಮ ಮಕ್ಕಳನ್ನು ನೋಡಿಕೊಳ್ಳಬಹುದು” ಎಂದು ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಮದನ್ ರಾಥೋಡ್ ಹೇಳಿದ್ದಾರೆ.
ನವೆಂಬರ್ 13ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಕನಿಕಾ ಬೇನಿವಾಲ್ ಖಿಂವ್ಸಾರ್ ಕ್ಷೇತ್ರದಲ್ಲಿ ಆರ್‌ಎಲ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ಭಾಷಣದಲ್ಲಿ ಮಾತನಾಡಿದ ಮದನ್ ರಾಥೋಡ್, “ಹನುಮಾನ್ ಬೇನಿವಾಲ್ ಮತ್ತು ಅವರ ಪತ್ನಿ ಇಬ್ಬರೂ ರಾಜಕೀಯ ಮಾಡುತ್ತಲೇ ಇದ್ದರೆ ಅವರ ಕುಟುಂಬದ ಕಥೆ ಏನು” ಎಂದು ವ್ಯಂಗ್ಯವಾಡಿದ್ದಾರೆ.
“ತನ್ನ ಪತ್ನಿ ಗೆಲ್ಲದಿದ್ದರೆ ಆಕೆ ತನ್ನ ಪೋಷಕರ ಮನೆಗೆ ಹೋಗುತ್ತಾಳೆ ಎಂದು ಅವರು (ಹನುಮಾನ್ ಬೇನಿವಾಲ್) ಆತಂಕಗೊಂಡಿರುವುದನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇನೆ. ಸಹೋದರ, ನೀವು ತುಂಬಾ ಆತಂಕದಲ್ಲಿರುವಾಗ ನೀವು ಯಾಕೆ ಅಂತಹ ರಿಸ್ಕ್ ತೆಗೆದುಕೊಂಡಿರಿ” ಎಂದು ಲೇವಡಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ರಾಜಸ್ಥಾನ | ಆಟೋ-ಬಸ್ ನಡುವೆ ಭೀಕರ ಅಪಘಾತ; 12 ಮಂದಿ ದುರ್ಮರಣ
“ಆಕೆ ಗೆಲ್ಲಲು ಸಾಧ್ಯವಿಲ್ಲ ಎಂದು ನಿಮಗೆ (ಹನುಮಾನ್ ಬೇನಿವಾಲ್) ತಿಳಿದಿದೆ. ಆದರೆ ನನ್ನ ಬಳಿ ಒಂದು ಸಲಹೆ ಇದೆ. ಹನುಮಾನ್ ಜಿ ನಿಮ್ಮ ಪತ್ನಿ ಸೋತರೆ ನಿಮಗೆ ಲಾಭವಾಗುತ್ತದೆ. ಆಕೆ ತನ್ನ ಪೋಷಕರ ಮನೆಗೆ ಹೋಗಬಹುದು ಅಥವಾ ಅವಳು ಎಲ್ಲಿಗಾದರೂ ಹೋಗಬಹುದು. ಆದರೆ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಮಕ್ಕಳ ಪಾಲನೆ ಮಾಡಬೇಕಲ್ಲವೇ, ನೀವಿಬ್ಬರೂ ರಾಜಕೀಯ ಮಾಡುತ್ತಾ ಹೋದರೆ ಸಂಸಾರ ಏನಾಗುತ್ತೆ. ಇದನ್ನು ಅರ್ಥ ಮಾಡಿಕೊಳ್ಳಬೇಕು” ಎಂದರು.
ಸದ್ಯ ಈ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಹೆಣ್ಣು ಬರೀ ಮನೆಯಲ್ಲಿರಲು, ಮಕ್ಕಳನ್ನು ನೋಡಿಕೊಳ್ಳಲು ಮೀಸಲು ಎಂಬ ಮನಸ್ಥಿತಿಯನ್ನು ಬಿಜೆಪಿ ನಾಯಕರು ಹೊಂದಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬಿಜೆಪಿ ನಾಯಕರ ಕೀಳು ಆಲೋಚನೆ ನೋಡಿ. ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಕಂಡರೆ ಅವರಿಗೆ ಆಗದು. ಮಹಿಳೆ ರಾಜಕೀಯಕ್ಕೆ ಬಂದರೆ ಮಕ್ಕಳನ್ನು ಸಾಕಲು ಆಗುವುದಿಲ್ಲ ಎಂಬ ಭಾವನೆ ಅವರದ್ದು. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರ ಇಂತಹ ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿರುವ ನಾಯಕರಿಗೆ ನಾಚಿಕೆಯಾಗಬೇಕು. ಮಾತೃಶಕ್ತಿಗೆ ಮಾಡಿದ ಅವಮಾನಕ್ಕೆ ಖಿಂವ್ಸಾರ್ ಜನರು ಮತಗಳ ಮೂಲಕ ಉತ್ತರ ನೀಡಲಿದ್ದಾರೆ” ಎಂದು ಆ ಕ್ಷೇತ್ರದ ನಾಗರಿಕರೂ ಆದ ಆರ್‌ಎಲ್‌ಪಿಯ ಮಾಜಿ ನಾಯಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
