ರಾಜ್ಯ ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಅಖಿಲ ಭಾರತ ಬಹುಜನ ಸಮಾಜ ಪಕ್ಷ ರಾಜ್ಯ ಘಟಕದಿಂದ ಸರ್ಕಾರಕ್ಕೆ ಒತ್ತಾಯಿಸಿದರು.
ಹಾಸನ ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ಬಹುಜನ ಸಮಾಜ ಪಕ್ಷ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ, “ಸುಪ್ರಿಂ ಕೋರ್ಟ್ ತೀರ್ಪಿನಂತೆ ಒಳಮೀಸಲಾತಿ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡ ನಿರ್ಣಯವನ್ನು ಅಖಿಲ ಭಾರತ ಬಹುಜನ ಸಮಾಜ ಪಕ್ಷ ಸ್ವಾಗತಿಸುತ್ತದೆ. ಆದರೆ ನಾನಾ ಕಾರಣಗಳನ್ನು ನೀಡುತ್ತ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮತ್ತೊಂದು ಆಯೋಗ ರಚಿಸಿರುವುದು ಅನವಶ್ಯಕವಾಗಿದೆ. ಆದ್ದರಿಂದ ಒಳಮೀಸಲಾತಿ ಜಾರಿಯಲ್ಲಿ ವಿಳಂಬ ಮಾಡದೆ ಕೂಡಲೇ ಅನುಷ್ಠಾನಗೊಳಿಸಬೇಕು” ಎಂದು ಆಗ್ರಹಿಸಿದರು.
“ಈ ಹಿಂದೆ ನ್ಯಾಯಮೂರ್ತಿ ಸದಾಶಿವ ಆಯೋಗ, ಕಾಂತರಾಜ ಆಯೋಗ, ಜೆ ಸಿ ಮಾಧುಸ್ವಾಮಿ ಸಮಿತಿಗಳು ನೀಡಿದ ವರದಿಗಳನ್ನು ಅನುಸರಿಸಿ ಮೀಸಲಾತಿ ಜಾರಿ ಸಂಬಂಧ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿತ್ತು. ಆದರೆ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. 30 ವರ್ಷಗಳ ಹಿಂದೆಯೇ ಒಳಮೀಸಲಾತಿಗೆ ಸಂಬಂಧಪಟ್ಟ ಸಮಸ್ಯೆ ಸರ್ಕಾರಗಳ ಗಮನಕ್ಕೆ ಬಂದ ಕೂಡಲೇ ಬಗೆಹರಿಸುವ ಸಾಧ್ಯತೆಗಳಿದ್ದವು” ಎಂದರು.
“ಒಳಮೀಸಲಾತಿ ಸಮಸ್ಯೆಯನ್ನು ಜೀವಂತವಾಗಿ ಇಟ್ಟುಕೊಂಡು ಜಾತಿಗಳ ಮಧ್ಯೆ ಅಪನಂಬಿಕೆ ಉಂಟುಮಾಡುವ ರಾಜಕೀಯ ಲಾಭ ಪಡೆಯುವ ಕೆಲಸವನ್ನು ಎಲ್ಲ ಪಕ್ಷಗಳು ಮಾಡುತ್ತಿವೆ” ಎಂದು ಅಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l ಜ. 1ರಿಂದ ಮಾ. 31 ವರೆಗೆ ರಾಗಿ,ಭತ್ತ, ಬಿಳಿಜೋಳ ಖರೀದಿ: ಜಿಲ್ಲಾಧಿಕಾರಿ ಸತ್ಯಭಾಮ
ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ಬಹುಜನ ಸಮಾಜ ಪಕ್ಷ ರಾಜ್ಯ ಘಟಕದ ಮುಖಂಡರು, ಕಾರ್ಯಕರ್ತರು, ಮಾದಿಗ ದಂಡೋರ ಸಮಿತಿ ವಿಜಯ ಕುಮಾರ್ ಹಾಗೂ ಇತರರು ಇದ್ದರು.
