ಗ್ರಾಮ ಪಂಚಾಯಿತಿಯ ಬೋರ್ ಬಳಿ ನೀರು ಕುಡಿಯಲು ಬಂದ ಬಾಲಕ ವಿದ್ಯುತ್ ಸ್ಪರ್ಷದಿಂದ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮನ್ನೆಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿಹಳ್ಳಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಬಾಲಕನ ಕುಟುಂಬ ಆಘಾತಕ್ಕೊಳಗಾಗಿದೆ. ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕೋಡಿಹಳ್ಳಿ ಗ್ರಾಮದ ಲೋಕೇಶ್(15) ವಿದ್ಯುತ್ ಸ್ಪರ್ಷದಿಂದ ಮೃತಪಟ್ಟ ಬಾಲಕ.
ಶನಿವಾರ ಬೆಳಗಿನ ಶಾಲೆ ಮುಗಿಸಿಕೊಂಡು 11ಕ್ಕೆ ಮನೆಗೆ ಬಂದಿದ್ದಾನೆ. ತಂದೆ ಕುರಿ ಕೆಲಸದವರಾಗಿದ್ದಾರೆ. “ತಂದೆ ಕುರಿ ಕಾವಲಿಗೆ ಹೋಗಿದ್ದಾನೆ. ನೀನು ಮರಿ ಹೊಡೆದುಕೊಂಡ ಬಾ” ಎಂದು ತಾಯಿ ಹೇಳಿದ್ದಾಳೆ. ಬಾಲಕ ಕುರಿ ಮರಿ ಹೊಡೆದುಕೊಂಡು ಹೋಗುವ ದಾರಿಯಲ್ಲಿ ಕೋಳಿಫಾರಂ ಪಕ್ಕದಲ್ಲಿ ಗ್ರಾಮಪಂಚಾಯಿತಿಯಿಂದ ಕೋಡಿಹಳ್ಳಿ ಗ್ರಾಮದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿ ಇತ್ತು. ಅದನ್ನು ಚಾಲು ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಬೀಡುಬಿಟ್ಟಿವೆ 23 ಕಾಡಾನೆಗಳು; ಜಿಲ್ಲೆಯ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ
ಪೈಪ್‌ನಿಂದ ನೀರು ಸುರಿಯುತ್ತಿರುವುದನ್ನು ಕಂಡು ದಾಹತೀರಿಸಿಕೊಳ್ಳಲು ಬಾಲಕ ಲೋಕೇಶ್ ನೀರು ಕುಡಿಯುವ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆಂದು ಗ್ರಾಮಸ್ಥರು, ಸಂಬಂಧಿಕರೊಬ್ಬರು ಮಾಹಿತಿ ನೀಡಿದ್ದಾರೆ.
ಸುರಕ್ಷತೆ ಕ್ರಮಗಳನ್ನು ಕೈಗೊಳ್ಳದೇ ಗ್ರಾಮಪಂಚಾಯಿತಿ ನಿರ್ಲಕ್ಷ್ಯ ವಹಿಸಿದ್ದರಿಂದ ಬಾಲಕ ಬಲಿಯಾಗಿದ್ದಾನೆಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಗ್ರಾಮಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.