ಟಿಪ್ಪು ಹಿಂದು ವಿರೋಧಿನಾ?

Date:

Advertisements

ಟಿಪ್ಪು.. ಈ ಹೆಸರು ಕೇಳಿದ್ರೆ ಸಾಕು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಎಲ್ಲಿಲ್ಲದ ದ್ವೇಷ. ಟಿಪ್ಪು ಮೇಲೆ ಇಲ್ಲಸಲ್ಲದ, ಕಪೋಕಲ್ಪಿತ ಆರೋಪಗಳನ್ನ ಮಾಡುತ್ತಲೇ, ಟಿಪ್ಪು ಬಗ್ಗೆ ಜನರಲ್ಲಿ ದ್ವೇಷವನ್ನು ಬಿತ್ತುತ್ತಿದೆ. ಆದರೆ, ನಿಜಕ್ಕೂ ಟಿಪ್ಪು ಯಾರು? ಮೈಸೂರು ಹುಲಿ ಎಂದೇ ಖ್ಯಾತಿ ಪಡೆದಿರುವ ಟಿಪ್ಪು, ಕರ್ನಾಟಕದವರು. ಟಿಪ್ಪುವಿನ ಕೊಡುಗೆ ಕರ್ನಾಟಕಕ್ಕೆ ಮತ್ತು ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಟಿಪ್ಪುವಿನ ಪ್ರಸಿದ್ಧಿ ದೇಶದೆಲ್ಲೆಡೆ ಪಸರಿಸಿದೆ. ಟಿಪ್ಪು ಬ್ರಿಟಿಷರಿಗೆ ಸಿಂಹ ಸ್ವಪ್ನನಾಗಿದ್ದವರು. ಆತ ಈ ದೇಶದ ಆಸ್ತಿ.

ಟಿಪ್ಪುವಿನ ಕಾಲಾವಧಿಯ ಆಡಳಿತ ನಿಜಕ್ಕೂ ಮೆಚ್ಚುವಂತಹದಾಗಿತ್ತು. ಹಿಂದು ಮತ್ತು ಮುಸ್ಲಿಂ ಎರಡೂ ಸಮುದಾಯಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡಿದ್ದ ಟಿಪ್ಪು, ಪ್ರತಿ ಪ್ರಾಂತ್ಯದಲ್ಲಿ ಮುಸ್ಲಿಮರಿಗೆ ಖಾದಿ ಮತ್ತು ಹಿಂದುಗಳಿಗೆ ಪಂಡಿತರನ್ನ ನೇಮಕ ಮಾಡಿದ್ದರು. ಇವರ ಆಡಳಿತದಲ್ಲಿ ಮದ್ಯದ ಬಳಕೆ, ಗಾಂಜಾದಂತಹ ಸೈಕೆಡೆಲಿಕ್ಸ್‌ನ ಬಳಕೆ ಹಾಗೂ ವೇಶ್ಯಾವಾಟಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿದ್ದರು. ಹೆಣ್ಣುಮಕ್ಕಳಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದರು.

ಶ್ರೀರಂಗಪಟ್ಟಣದ ಪ್ರಸಿದ್ಧ ರಂಗನಾಥಸ್ವಾಮಿ ದೇವಾಲಯ ಸೇರಿದಂತೆ ಸುಮಾರು 156 ಹಿಂದು ದೇವಾಲಯಗಳಿಗೆ ನಿಯಮಿತ ದತ್ತಿಗಳನ್ನು ನೀಡುತ್ತಿದ್ದರು. ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಇಂದಿಗೂ ಸುಲ್ತಾನರು ನೀಡಿದ ಆಭರಣದ ಬಟ್ಟಲು ಇದೆ. ಶ್ರೀರಂಗಪಟ್ಟಣದ ರಂಗನಾಥ ದೇವಸ್ಥಾನಕ್ಕೆ ಟಿಪ್ಪು ಅವರು ಏಳು ಬೆಳ್ಳಿಯ ಬಟ್ಟಲುಗಳು ಮತ್ತು ಬೆಳ್ಳಿಯ ಕರ್ಪೂರ ದಹನವನ್ನು ನೀಡಿದ್ದಾರೆ. ಕಳಲೆಯಲ್ಲಿರುವ ಲಕ್ಷ್ಮೀಕಾಂತ ದೇವಸ್ಥಾನಕ್ಕೆ ಕೂಡ ಬೆಳ್ಳಿ, ಬಂಗಾರವನ್ನ ಉಡುಗೂರೆಯಾಗಿ ನೀಡಿದ್ದಾರೆ.

Advertisements

ಇನ್ನೊಂದು ಮುಖ್ಯ ಸಂಗತಿ ಏನೆಂದರೆ, ಶ್ರೀರಂಗಪಟ್ಟಣದ ರಂಗನಾಥ ದೇವಸ್ಥಾನ ಟಿಪ್ಪುವಿನ ಅರಮನೆಯಿಂದ ಸ್ವಲ್ಪ ದೂರದಲ್ಲಿತ್ತು. ದೇವಾಲಯದ ಘಂಟೆಗಳ ಸದ್ದು ಮತ್ತು ಮಸೀದಿಯಿಂದ ಅಜಾನ್ ಸದ್ದನ್ನ ಟಿಪ್ಪು ಸಮಾನ ಗೌರವದಿಂದ ಕೇಳುತ್ತಿದ್ದರು.

1791ರಲ್ಲಿ ಮರಾಠ-ಮೈಸೂರು ಯುದ್ಧದ ಸಮಯದಲ್ಲಿ ರಘುನಾಥ್ ರಾವ್ ಪಟವರ್ಧನ್ ನೇತೃತ್ವದಲ್ಲಿ ಮರಾಠಾ ಕುದುರೆ ಸವಾರರ ಗುಂಪು ಶೃಂಗೇರಿ ಶಂಕರಾಚಾರ್ಯರ ದೇವಸ್ಥಾನ ಮತ್ತು ಮಠದ ಮೇಲೆ ದಾಳಿ ನಡೆಸಿತ್ತು. ಅವರು ಬ್ರಾಹ್ಮಣರನ್ನು ಒಳಗೊಂಡಂತೆ ಅನೇಕ ಜನರ ಮೇಲೆ ದಾಳಿ ನಡೆಸಿ, ಕೊಂದಿದ್ದರು. ಮಠವನ್ನು ಅದರ ಎಲ್ಲ ಅಮೂಲ್ಯ ಆಸ್ತಿಗಳನ್ನು ಲೂಟಿ ಮಾಡಿದರು ಮತ್ತು ಶಾರದಾ ದೇವಿಯ ವಿಗ್ರಹವನ್ನ ಸ್ಥಳಾಂತರಿಸಿದ್ದರು. ಈ ವೇಳೆ, ದೇವಸ್ಥಾನದ ಉಸ್ತುವಾರಿಗಳು ಸಹಾಯಕ್ಕಾಗಿ ಟಿಪ್ಪು ಸುಲ್ತಾನ್ ಬಳಿ ಮನವಿ ಮಾಡಿದ್ದರು. ಮಠದ ಮೇಲಿನ ದಾಳಿಯ ಬಗ್ಗೆ ಮರುಕ ವ್ಯಕ್ತಪಡಿಸಿದ್ದ ಟಿಪ್ಪು, ಮಠಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದರು. ಟಿಪ್ಪು ಸುಲ್ತಾನನ ಆಸ್ಥಾನ ಮತ್ತು ಶೃಂಗೇರಿ ಶಂಕರಾಚಾರ್ಯರ ನಡುವೆ ವಿನಿಮಯವಾದ ಸುಮಾರು 30 ಕನ್ನಡ ಪತ್ರಗಳನ್ನು ಮೈಸೂರಿನ ಪುರಾತತ್ವ ನಿರ್ದೇಶಕರು 1916ರಲ್ಲಿ ಪತ್ತೆ ಮಾಡಿದ್ದರು. ಇತಿಹಾಸಕಾರ ಬಿ.ಎ ಸಾಲೆತರೆ ಅವರು ಟಿಪ್ಪು ಸುಲ್ತಾನರನ್ನು ಹಿಂದು ಧರ್ಮದ ರಕ್ಷಕ ಎಂದು ಬಣ್ಣಿಸಿದ್ದಾರೆ. ದೇವಸ್ಥಾನಗಳ ಜತೆಗೆ ಟಿಪ್ಪುವಿನ ನಡುವೆ ಇರುವ ನಂಟನ್ನ ಇಷ್ಟೆಲ್ಲ ಪುರಾವೆಗಳು ಸೂಚಿಸುತ್ತಾವೆ. ಆದರೆ, ಟಿಪ್ಪು 7,900 ದೇವಸ್ಥಾನಗಳನ್ನು ಕೆಡವಿದ್ದಾನೆ ಎಂಬ ಆರೋಪವನ್ನು ಬಿಜೆಪಿಗರು ಹೋರಿಸುತ್ತಾರೆ.

ಸುಮ್ಮನೆ ಹಾಗೇ ಒಂದು ಲೆಕ್ಕಾಚಾರ ಹಾಕೋಣ, ಟಿಪ್ಪುವಿನ ಒಟ್ಟು ಆಡಳಿತಾವಧಿ 17 ವರ್ಷ. ಅಂದರೆ (365×17) 6,205 ದಿನಗಳು. ದಿನಕ್ಕೊಂದು ದೇವಸ್ಥಾನ ಧ್ವಂಸಗೈದರೂ 6205 ದೇವಸ್ಥಾನಗಳಾಗುತ್ತವೆ. ಹಾಗಾದರೆ, ಉಳಿದ 1695 ದೇವಾಲಯಗಳನ್ನು ಯಾರು ನಾಶಪಡಿಸಿದರು..? ಟಿಪ್ಪುವಿಗೆ ದೇವಾಲಯ ನಾಶಪಡಿಸುವುದೊಂದೇ ಕೆಲಸವಿದ್ದುದೇ..? ಬೇರೇನೂ ಕೆಲಸವೇ ಇರಲಿಲ್ಲವೇ..? ಟಿಪ್ಪು ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧ ಮಾಡಿದ್ದು, ಮರಾಠಾ, ನಿಝಾಮ ಮುಂತಾದವರೊಂದಿಗೆ ಯುದ್ಧ, ದಂಗೆ ಎದ್ದ ರಾಜದ್ರೋಹಿಗಳನ್ನು ನಿಯಂತ್ರಣಕ್ಕೆ ತಂದದ್ದು, ಅಸಂಖ್ಯ ಅಭಿವೃದ್ದಿ, ಜನಕಲ್ಯಾಣ, ಕೈಗಾರಿಕೆ, ಕೃಷಿ ಯೋಜನೆ ಇತ್ಯಾದಿಗಳನ್ನು ಮಾಡಿದ್ದು, ಕುಟುಂಬದೊಂದಿಗೆ ಕಳೆದಿದ್ದು, ಆಡಳಿತ ನಡೆಸಿದ್ದೆಲ್ಲ ಯಾವಾಗ..? ಇದನ್ನ ತಿಳಿದವರೇ ಹೇಳಬೇಕು.

ಇತಿಹಾಸಕಾರರು, ಲೇಖಕರು ಹಲವಾರು ಪುರಾವೆಗಳು ಹೇಳುತ್ತವೆ; ಟಿಪ್ಪು ಧರ್ಮ ರಕ್ಷಕ, ತನ್ನ ಧರ್ಮ ಪಾಲನೆ ಜತೆಗೆ ಇತರ ಧರ್ಮಗಳ ಮೇಲೆಯೂ ಗೌರವ ಹೊಂದಿದ್ದ ಎಂದು. ಹೀಗಿರುವಾಗ ಆತ ಹೇಗೆ ಸಾವಿರಾರು ದೇವಾಲಯಗಳನ್ನ ಕೆಡವುತ್ತಾನೆ. ಇದಕ್ಕೆ ಪುರಾವೆ ಇದೆಯೇ ಎಂದು ಹುಡುಕಾಡಿದರೆ, ಅದಕ್ಕೆ ಯಾವ ಪುರಾವೆಗಳೂ ಇಲ್ಲ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಟಿಪ್ಪುವಿನ ಮೇಲೆ ದ್ವೇಷ ಹೊಂದಿರುವುದಕ್ಕೆ ಮುಖ್ಯ ಕಾರಣ ಅಂದರೆ, ಅದು ಆತ ಮುಸ್ಲಿಂ ದೊರೆ ಎಂಬ ಕಾರಣಕ್ಕೆ ಹೊರತು ಮತ್ಯಾವುದಕ್ಕೂ ಅಲ್ಲ.

ಇನ್ನೊಂದೆಡೆ ಟಿಪ್ಪುವನ್ನು ಮತಾಂದ ಎಂದು ಆರೋಪ ಮಾಡಲಾಗುತ್ತಿದೆ. ಮಂಗಳೂರಿನ ಫಾದರ್ ಮಿರಾಂಡ ಎಂಬವರು, “ಟಿಪ್ಪು 60,000 ಕ್ರೈಸ್ತರನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಿಸಿದ್ದರು” ಎಂದು ಆಪಾದಿಸುತ್ತಾರೆ. “ಟಿಪ್ಪು 40,000 ಕ್ರೈಸ್ತರನ್ನು ಮಂಗಳೂರಿನಿಂದ ಮೈಸೂರಿಗೆ ಕೊಂಡೊಯ್ದು ಮತಾಂತರಿಸಿದ್ದಾರೆ. ಅವರಲ್ಲಿ 15,000 ಕ್ರೈಸ್ತರು ಮಂಗಳೂರಿಗೆ ವಾಪಾಸು ಬಂದಿದ್ದಾರೆ” ಎಂದು ಇನ್ನೊಂದೆಡೆ ಆಪಾದಿಸುತ್ತಾರೆ.

ಆದರೆ, ಸತ್ಯವೇನು? 1894ರಲ್ಲಿ ಬ್ರಿಟಿಷ್ ವಸಾಹತುಶಾಹಿಗಳೇ ರಚಿಸಿದ Madras Manual ಎಂಬ ಗ್ರಂಥದ South Canada gazattier ಎಂಬ ಉಪಶೀರ್ಷಿಕೆಯಡಿ 1890ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆ 70,000 ಎಂದು ದಾಖಲಿಸಲಾಗಿದೆ. ಹಾಗಿದ್ದರೆ, ಅದಕ್ಕಿಂತ ಸುಮಾರು ನೂರು ವರ್ಷಗಳ ಹಿಂದೆ (1770ರ ದಶಕದಲ್ಲಿ) ಮಂಗಳೂರಿನ ಒಟ್ಟು ಜನಸಂಖ್ಯೆ ಎಷ್ಟಿದ್ದಿರಬಹುದು..? ಅದರಲ್ಲಿ ಕ್ರೈಸ್ತರು ಎಷ್ಟಿದ್ದಿರಬಹುದು ಎಂದು ಊಹಿಸಿ ನೋಡಿ. ಟಿಪ್ಪುವಿನ ಕಾಲಾನಂತರ ಮಂಗಳೂರಿನಲ್ಲೂ ಕೂಡಾ ಕ್ರೈಸ್ತ ಧರ್ಮಕ್ಕೆ ಮರು ಮತಾಂತರಗೊಂಡ ಏಕೈಕ ನಿದರ್ಶನವಿಲ್ಲ.

ಇನ್ನೊಂದು ಸರಳ ತರ್ಕವನ್ನ ನೋಡೋಣ. ಓರ್ವ ಮುಸ್ಲಿಮೇತರ ಇಸ್ಲಾಮ್‌ಗೆ ಮತಾಂತರವಾಗಬೇಕೆಂದರೆ ಆತ ವಾಚಾ ಮತ್ತು ಮನಸಾ, “ಅಶ್ಹದು ಅಲ್ಲಾಇಲಾಹ ಇಲ್ಲಲ್ಲಾಹ್,ವಅಶ್ಹದು ಅನ್ನ ಮುಹಮ್ಮದರ್ರಸೂಲುಲ್ಲಾಹ್” (ಅಲ್ಲಾಹನಲ್ಲದೇ ಅನ್ಯ ಆರಾಧ್ಯರಿಲ್ಲ, ಮುಹಮ್ಮದ್‌ರು ಅಲ್ಲಾಹನ ಸಂದೇಶವಾಹಕರು) ಎಂದು ಮನಸಾರೆ ಒಪ್ಪಿ ಪ್ರತಿಜ್ಞೆಗೈಯಬೇಕು. ಒಬ್ಬ ವ್ಯಕ್ತಿ ಜೀವಭಯದಿಂದ ಬಾಯಲ್ಲಿ ಉಚ್ಚರಿಸಬಹುದೇ ಹೊರತು, ಮನಸಾರೆ ಒಪ್ಪಿಕೊಳ್ಳಲಾರ. ಮನಸಾರೆ ಒಪ್ಪಿಕೊಳ್ಳದಿದ್ದರೆ ಆತ ಮುಸ್ಲಿಂ ಆಗಲು ಸಾಧ್ಯವೇ ಇಲ್ಲ ಎಂಬ ವಿಚಾರ ಇಸ್ಲಾಮಿನ ಬಗ್ಗೆ ಪ್ರಾಥಮಿಕ ಜ್ಞಾನವಿರುವರಿಗೆ ನಿಲುಕುವ ಸರಳ ತರ್ಕ. ಇಂತಹ ಸರಳ ತರ್ಕವನ್ನು ಅರಿಯದಷ್ಟು ಹುಂಬರೇ ಟಿಪ್ಪು ಸುಲ್ತಾನ್…?

ಕಳೆದ ಕೆಲವು ವರ್ಷಗಳಿಂದ ನಮ್ಮಲ್ಲಿ ಜಾತಿ ವಿಷ ಬೀಜವನ್ನ ಹೇರಳವಾಗಿ ಬಿತ್ತಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಟಿಪ್ಪುವಿನ ವಿಚಾರವನ್ನೇ ತೆಗೆದುಕೊಳ್ಳಬಹುದು. ಟಿಪ್ಪು ಮಾಡಿದ ಕಾರ್ಯಗಳನ್ನ ನೋಡದೇ, ಕಪೋಕಲ್ಪಿತ ವಿಚಾರಗಳನ್ನ ಮುಂದಿಟ್ಟು ಜನರಲ್ಲಿ ಜಾತಿ ವಿಷ ಬೀಜ ತುಂಬುತ್ತಿದ್ದಾರೆ.

ಟಿಪ್ಪು ಸಾವಿರಾರು ಜನರನ್ನ ಮತಾಂತರ ಮಾಡಿದ್ದರು. 7,500 ದೇವಸ್ಥಾನಗಳನ್ನ ಕೆಡವಿದ್ದಾರೆ. ಲಕ್ಷಾಂತರ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಮೆಲುಕೋಟೆ ಬ್ರಾಹ್ಮಣರು ಮತ್ತು ಕೊಡಗಿನ ಕೊಡವರನ್ನ ಹತ್ಯೆ ಮಾಡಿದ್ದಾರೆ. ಟಿಪ್ಪು ಹಿಂದೂ ವಿರೋಧಿ – ಹೀಗೆ ಹತ್ತು ಹಲವಾರು ಸುಳ್ಳು ವದಂತಿಗಳನ್ನ ಬಿಜೆಪಿ ಹಬ್ಬಿಸುತ್ತಿದೆ. ಆದರೆ, ಇದಾವುದು ಇತಿಹಾಸದ ಪುಟಗಳಲ್ಲಿ ಇಲ್ಲ.

ಲಾವಣಿಗಳಲ್ಲಿ, ಜನಪದಗಳಲ್ಲಿ ಟಿಪ್ಪುವನ್ನ ನಮ್ಮ ಹಿರಿಕರು ಹಾಡಿ ಹೋಗಳಿದ್ದಾರೆ. ಜನಮಾನಸದಲ್ಲಿ ಟಿಪ್ಪು ಪ್ರಜಾನುರಾಗಿ ಆಗಿದ್ದಾರೆ. ಆರ್‌ಎಸ್‌ಎಸ್‌ ಟಿಪ್ಪುವಿನ ಜನಪ್ರಿಯತೆ ಸಹಿಸದೇ ಆತನ ವಿರುದ್ಧ ಆರೋಪಗಳನ್ನ ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ, ಟಿಪ್ಪುವನ್ನು ಕೊಂದಿದ್ದು ಉರಿಗೌಡ ಮತ್ತು ನಂಜೇಗೌಡ ಎಂದು ಬಿಜೆಪಿಗರು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ, ಇದು ಸತ್ಯಕ್ಕೆ ದೂರವಾದದ್ದು. ಆರ್‌ಎಸ್‌ಎಸ್‌ ಹಿನ್ನೆಲೆಯ ಅಡ್ಡಂಡ ಕಾರ್ಯಪ್ಪ ಅವರು ‘ಟಿಪ್ಪು ನಿಜ ಕನಸುಗಳು’ ಎಂಬ ನಾಟಕದ ಕಥೆಯಲ್ಲಿ ಟಿಪ್ಪು ಹಿಂದು ವಿರೋಧಿ, ಅವರನ್ನು ನಂಜೆಗೌಡ-ಉರಿಗೌಡ ಎಂಬವರೇ ಕೊಂದರು ಎಂದು ಸುಳ್ಳು ಸೃಷ್ಟಿಸಿದ್ದಾರೆ. ಮುಸ್ಲಿಮರ ವಿರುದ್ಧ ಒಕ್ಕಲಿಗರನ್ನ ಎತ್ತಿ ಕಟ್ಟಲು ಯತ್ನಿಸಿದ್ದಾರೆ. ತಿರುಚಲಾದ ಇತಿಹಾಸದ ಪುಸ್ತಕವನ್ನು ಸಿದ್ಧ ಮಾಡಿದ್ದಾರೆ.

ಈ ವರದಿ ಓದಿದ್ದೀರಾ?: ಕನ್ನಡ ನೆಲದಲ್ಲೇ ಹುಟ್ಟಿ, ಕನ್ನಡ ನೆಲದಲ್ಲೇ ತನ್ನ ನೆತ್ತರು ಹರಿಸಿದವ ಟಿಪ್ಪು

ಟಿಪ್ಪುವಿನ ಹೆಸರನ್ನು ಸಂಪೂರ್ಣವಾಗಿ ಅಳಿಸಿಹಾಕುವ ಪ್ರಯತ್ನದಲ್ಲಿ ಬಿಜೆಪಿಗರಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿದ್ದ ’ಟಿಪ್ಪು ಎಕ್ಸ್‌ಪ್ರೆಸ್’ ರೈಲನ್ನು ’ಒಡೆಯರ್ ಎಕ್ಸ್‌ಪ್ರೆಸ್’ ಎಂದು ಮರುನಾಮಕರಣ ಮಾಡುವ ಮೂಲಕ ಟಿಪ್ಪುವಿನ ಲೆಗಸಿಯನ್ನು ಮರೆಮಾಚುವ ಕಡೆಗೆ ಮತ್ತೊಂದು ಹೆಜ್ಜೆಯನ್ನಿಟ್ಟಿತ್ತು. ಮೈಸೂರು ಏರ್‌ಪೋರ್ಟ್‌ಗೆ ಟಿಪ್ಪು ಸುಲ್ತಾನ್ ಹೆಸರಿಡಬೇಕು ಎಂಬ ಬೇಡಿಕೆಗೆ ವಿರುದ್ಧವಾಗಿ ಮೈಸೂರು ಏರ್‌ಪೋರ್ಟ್‌ಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಬೇಕೆಂದು ಬಿಜೆಪಿಗರು ಕ್ಯಾತೆ ತೆಗೆದಿದ್ದರು. ಇಷ್ಟೇ ಅಲ್ಲ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆ ತಂದಿದ್ದರು. ಆದರೆ, ಇದನ್ನು ಸಹಿಸದ ಬಿಜೆಗರು ಅವರ ಆಡಳಿತದ ಅವಧಿಯಲ್ಲಿ ಟಿಪ್ಪು ಜಯಂತಿ ಆಚರಣೆಯನ್ನ ಬ್ಯಾನ್ ಮಾಡಿದರು.

ಇತಿಹಾಸವನ್ನ ಮರೆತವರು ಇತಿಹಾಸವನ್ನ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಬಿ. ಆರ್‌ ಅಂಬೇಡ್ಕರ್ ಅವರು ಹೇಳಿದ್ದಾರೆ. ಅದರಂತೇನೆ, ಟಿಪ್ಪು ಸುಲ್ತಾನ ಎಂಬ ಹೆಮ್ಮೆಯ ದೊರೆ ಮಾಡಿದ ಸಾಧನೆಗಳನ್ನ ಗಮನಿಸದೇ, ಆತ ಮುಸ್ಲಿಮ್ ಎಂದು ಈ ರೀತಿ ದ್ವೇಷಿಸುವುದು ಸರಿಯಲ್ಲ. ಶ್ರೀರಂಗಪಟ್ಟಣ ದೇವಸ್ಥಾನಕ್ಕೆ ಮರಾಠರು ದಾಳಿ ಮಾಡಿದ್ದಾಗ ಟಿಪ್ಪು ದೇವಸ್ಥಾನ ಉಳಿಸಿದ್ದಾನೆ ಎಂದು ಈ ದೇವಸ್ಥಾನದಲ್ಲಿ ಸಲಾಮ್ ಆರತಿ ಮಾಡುತ್ತಿದ್ದರೂ, ಆದರೆ, ಇದನ್ನ ಕೂಡ ಸಹಿಸದವರು ಇದನ್ನ ನಿಲ್ಲಿಸಿದ್ದಾರೆ. ನಾವು, ನಮ್ಮವರು, ನಮ್ಮ ಹೆಮ್ಮೆ ಎಂದು ಹಜರತ್ ಟಿಪ್ಪು ಸುಲ್ತಾನ್ ರವರ ಬಗ್ಗೆ ಪ್ರತಿಯಬ್ಬರೂ ಹೆಮ್ಮೆ ಪಡಲೇಬೇಕು. ಟಿಪ್ಪುವಿನಲ್ಲಿ ಜಾತಿ ಸಂಘರ್ಷವನ್ನ ತರುವುದನ್ನ ಮೊದಲು ಬಿಡಬೇಕಿದೆ. ಟಿಪ್ಪುವನ್ನ ಕೇವಲ ಮುಸಲ್ಮಾನರ ಆಸ್ತಿ, ಕನ್ನಡದ ಹೆಮ್ಮೆಯಾಗಿ ಅಷ್ಟೇ ನೋಡದೆ, ಆತ ಇಡೀ ನಮ್ಮ ದೇಶದ ಹೆಮ್ಮೆ ಎಂದು ಸಂತಸ ಪಡಬೇಕಿದೆ. ಟಿಪ್ಪು ನಮ್ಮ ಭಾರತದ ಹುಲಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. ಟಿಪ್ಪು ಹಿಂದೂ ಧರ್ಮ ರಕ್ಷಣೆ ಮಾಡಿದ್ದರೆ ಮೈಸೂರು ಮಹಾರಾಜರಿಗೇಕೆ ನ್ಯಾಯಬದ್ದವಾಗಿ ರಾಜ್ಯ ಹಸ್ತಾಂತರಿಸಲಿಲ್ಲ.. ಅರಮನೆಯಲ್ದಿ ದಸರಾ ಅಚರಣೆಯನ್ನೆಕೆ ನಿಲ್ಲಿಸಿದ? ಕೊಡವರೇಕೆ ಅವನನ್ನ ದ್ವೇಷಿಸುತ್ತಿರುವದು.? ಲಾವಣಿ – ಜನಪದಗಳು ಟಿಪ್ಪು ವನ್ನ ಹಾಡಿ ಹೊಗಳಿವೆ ಎನ್ನುತ್ತೀರಿ..ನನಗಂತೂ ಟಿಪ್ಪುವಿನ ಬಗ್ಗೆ ಎಲ್ಲಿಯೂ ಲಾವಣಿ ಕೇಳಿದ ನೆನಪಿಲ್ಲಾ… ಹಾಗೊಂದು ವೇಳೆ ಲಾವಣಿಗಳಿದ್ದರೆ ಪ್ರಸ್ತುತ ಪಡಿಸಿ… ಕೆಲ ರಾಜಕಾಣಿಗಳು ತಮ್ಮ ಅನುಕೂಲಕ್ಕೆ ಟಿಪ್ಪವನ್ನ ಬಳಸಿಕೊಳ್ಳುತ್ತಿದ್ದಾರೆ.. ನೀವು ಹಾಗೆ ಮಾಡಬೇಡಿ ನೈಜ ಇತಿಹಾಸವಿದ್ದರೆ ..ಸ್ಪಷ್ಟವಾಗಿ ಪೂರಕ ಮಾಹಿತಿ ತಿಳಿಸಿ..

  2. ಇತಿಹಾಸ ವನ್ನು ತಪ್ಪಾಗಿ ಜನರ ಮುಂದೆ ಹೇಳ್ಬೇಡಿ, ಪ್ರತಿವಾಂದಕ್ಕೆ ದಾಖಲೆ ನೀಡಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X