ವೈದ್ಯಕೀಯ ಪ್ರವೇಶ ಪರೀಕ್ಷೆಗೆ (ನೀಟ್) ತಯಾರಿ ನಡೆಸುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಒತ್ತೆಯಾಳಾಗಿ ಇರಿಸಿಕೊಂಡು ಇಬ್ಬರು ಶಿಕ್ಷಕರು ನಿರಂತರವಾಗಿ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೆಳಕಿಗೆ ಬಂದಿದೆ. ನೀಟ್ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಇಬ್ಬರು ಕಾಮುಕ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.
ಕಾನ್ಪುರದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ರಸಾಯನಶಾಸ್ತ್ರ ಬೋಧಿಸುತ್ತಿದ್ದ ವಿಕಾಸ್ ಪೋರ್ವಾಲ್ (39) ಮತ್ತು ಜೀವಶಾಸ್ತ್ರ ಕಲಿಸುತ್ತಿರುವ ಸಾಹಿಲ್ ಸಿದ್ದಿಕಿ (32) ಬಂಧಿತ ಆರೋಪಿಗಳು. ಈ ಇಬ್ಬರೂ ಸಂತ್ರಸ್ತ ವಿದ್ಯಾರ್ಥಿಯನ್ನು ಆರು ತಿಂಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ.
“ಇಬ್ಬರು ಆರೋಪಿ ಶಿಕ್ಷಕರ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ, ಅಕ್ರಮ ಬಂಧನ ಆರೋಪಗಳ ಮೇಲೆ ಬಿಎನ್‌ಎಸ್ ಮತ್ತು ಪೋಕ್ಸೋ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಆರೋಪಿ ಸಿದ್ದಿಕಿ ಬೇರೊಬ್ಬ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸಂತ್ರಸ್ತ ವಿದ್ಯಾರ್ಥಿ ಫತೇಪುರ್ ಮೂಲದವರಾಗಿದ್ದು, ಆಕೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿ ದಾಖಲಿಸಿರುವ ದೂರಿನಲ್ಲಿ, “ಆರೋಪಿ ಸಿದ್ದಿಕಿ ತನ್ನನ್ನು ಕಲ್ಯಾಣಪುರದ ಮಕ್ಡಿ-ಖೇರಾ ಪ್ರದೇಶದಲ್ಲಿದ್ದ ಆತನ ಸ್ನೇಹಿತರ ನಿವಾಸಕ್ಕೆ ಹೊಸ ವರ್ಷದ ಕೂಟಕ್ಕೆ ಆಹ್ವಾನಿಸಿದ್ದನು. ಜೊತೆಗೆ ಅಲ್ಲಿಗೆ ಇತರ ವಿದ್ಯಾರ್ಥಿಗಳು ಕೂಡಾ ಇರುತ್ತಾರೆಂದು ಹೇಳಿದ್ದನು. ಆದರೆ, ಆ ಸ್ಥಳಕ್ಕೆ ಹೋದಾಗ, ಅಲ್ಲಿ ಯಾರೂ ಇರಲಿಲ್ಲ. ಈ ವೇಳೆ ಸಿದ್ದಿಕಿ ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ” ಎಂದು ಆರೋಪಿಸಿದ್ದರೆ.
ಅಷ್ಟೆ ಅಲ್ಲದೆ, “ದುಷ್ಕರ್ಮಿಯು ಅತ್ಯಾಚಾರದ ಕೃತ್ಯವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ಧಾನೆ. ವಿಡಿಯೋವನ್ನು ವೈರಲ್ ಮಾಡುವ ಬೆದರಿಯೊಡ್ಡಿ, ನನ್ನನ್ನು ತನ್ನ ಫ್ಲಾಟ್‌ನಲ್ಲಿ ಆರು ತಿಂಗಳ ಕಾಲ ಒತ್ತೆಯಾಳಾಗಿಟ್ಟುಕೊಂಡಿದ್ದು ಪದೇ ಪದೇ ಅತ್ಯಾಚಾರವೆಸಗಿದ್ದಾನೆ” ಎಂದು ವಿವರಿಸಿದ್ದಾರೆ.