ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡುವ ಅಧಿಕಾರವು ರಾಜ್ಯ ಸರ್ಕಾರಗಳಿಗೆ ಇದೆಯೆಂದು 2024ರ ಆಗಸ್ಟ್ 1ರಂದು ಸುಪ್ರಿಂ ಕೋರ್ಟ್ ನೀಡಿದ ತೀರ್ಪನ್ನು ಎಲ್ಲ ರಾಜಕೀಯ ಪಕ್ಷಗಳು ಮತ್ತು ಜನಪರ ಸಂಘಟನೆಗಳು ಸ್ವಾಗತಿಸಿವೆ. ಆದರೆ ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಅಕ್ಕ ಮಾಯಾವತಿಯವರು ಈ ತೀರ್ಪುನ್ನು ತೀವ್ರವಾಗಿ ವಿರೋಧಿಸಿದ್ದಲ್ಲದೆ, ಈ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಮೊರೆಹೋದರು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಕೆ ಬಿ ವಾಸು ಹೇಳಿದರು.
ಯಾದಗಿರಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಸುಪ್ರಿಂ ಕೋರ್ಟ್ ತೀರ್ಪಿನ ವಿರುದ್ಧ ನಡೆದ ಅಖಿಲ ಭಾರತ ಬಂದ್ ಬೆಂಬಲಿಸಿದರು. ಕರ್ನಾಟಕದಲ್ಲಿ ಕಳೆದ 30 ವರ್ಷಗಳಿಂದ ಒಳಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸುತ್ತ ಬಂದಿರುವ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರಾದ ನಮಗೆ, ಅಕ್ಕ ಮಾಯಾವತಿಯವರ ವರ್ತನೆಯು ಆಘಾತ ಉಂಟುಮಾಡಿತು” ಎಂದು ಬೇಸರ ವ್ಯಕ್ತಪಡಿಸಿದರು.
“ಈ ಒಳಮಿಸಲಾತಿ ನಿಲುವನ್ನು ವಿರೋಧಿಸಿ ಬಹುಜನ ಸಮಾಜ ಪಾರ್ಟಿಯ ರಾಜ್ಯ ಅಧ್ಯಕ್ಷರಾಗಿದ್ದ ಮಾರಸಂದ್ರ ಮುನಿಯಪ್ಪ, ರಾಜ್ಯ ಸಂಯೋಜಕರಾಗಿದ್ದ ಎಂ ಗೋಪಿನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಆರ್ ಮುನಿಯಪ್ಪ ಮುಂತಾದ ಹಿರಿಯ ರಾಜ್ಯ ಮುಖಂಡರು ಮತ್ತು ರಾಜ್ಯಪ್ರಧಾನ ಕಾರ್ಯದರ್ಶಿಯಾಗಿದ್ದ ನಾನೂ ಸೇರಿದಂತೆ ಸುಮಾರು 25 ಜಿಲ್ಲೆಗಳ ಜಿಲ್ಲಾಧ್ಯಕ್ಷರು ಬಹುಜನ ಸಮಾಜ ಪಾರ್ಟಿಗೆ ಆಗಸ್ಟ್ 31ರಂದು ಸಾಮೂಹಿಕ ರಾಜೀನಾಮೆ ನೀಡಿ ಅಕ್ಕ ಮಾಯಾವತಿ ಅವರಿಗೆ ಪತ್ರ ರವಾನಿಸಿದ್ದೆವು” ಕೆಬಿ ವಾಸು ತಿಳಿಸಿದರು.
“ಸಾಮಾಜಿಕ ನ್ಯಾಯದ ಪರವಿರುವ ನಾವು ಇದೇ ಸೆಪ್ಟೆಂಬರ್ 9ರಂದು ಹೊಸದಾಗಿ “ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ”ಯನ್ನು ಸ್ಥಾಪಿಸಿದೆವು. ನಾನು ಅಖಿಲ ಭಾರತ ಬಹುಜನ ಸಮಾಜ ಪಾರ್ಟಿಯ ಉಪಾಧ್ಯಕ್ಷನಾಗಿ ಉತ್ತರ ಕರ್ನಾಟಕದ ಉಸ್ತುವಾರಿ ವಹಿಸಿಕೊಂಡಿದ್ದೇನೆ. ದಾದು ಅವರು ಯಾದಗಿರಿ ಜಿಲ್ಲಾಧ್ಯಕ್ಷರಾಗಿ ನಮ್ಮ ಪಾರ್ಟಿಯಲ್ಲಿ ಮುಂದುವರೆಯುತ್ತಾರೆ. ಇದು ಇಡೀ ರಾಜ್ಯಕ್ಕೆ ತಿಳಿದಿರುವ ಸಂಗತಿಯಾಗಿದೆ” ಎಂದರು.
“ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷರಾಗಿ ನೇಮಿಸಲ್ಪಟ್ಟಿರುವ ಎಂ ಕೃಷ್ಣಮೂರ್ತಿಯವರು ಯಾದಗಿರಿಗೆ ಬಂದು ಪತ್ರಿಕಾಗೋಷ್ಠಿ ಕರೆದು ಕೆ ಬಿ ವಾಸು ಮತ್ತು ದಾದು ಅವರನ್ನು ಬಹುಜನ ಸಮಾಜ ಪಾರ್ಟಿಯಿಂದ ಉಚ್ಛಾಟಿಸಲಾಗಿದೆ ಎಂಬ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ. ಬಹುಜನ ಸಮಾಜ ಪಾರ್ಟಿಯ ನಾಯಕಿ ಮಾಯಾವತಿಯವರು ಅಂಬೇಡ್ಕರ್-ಕಾನ್ಷಿರಾಮ್ ಸಿದ್ಧಾಂತವನ್ನು ಬಿಟ್ಟು ಕುಟುಂಬ ರಾಜಕಾರಣ ನಡೆಸುತ್ತ, ಬಿಜೆಪಿಯ ಬಿ ಟೀಮ್ ಎಂಬ ಅಪಖ್ಯಾತಿ ಪಡೆದಿರುವುದು ಈಗಾಗಲೇ ಜಗಜ್ಜಾಹೀರಾಗಿದೆ” ಎಂದು ತಿಳಿಸಿದರು.
“ಮುಸ್ಲಿಂ-ವಿರೋಧಿ ಕಾಯ್ದೆಗಳಿಗೆ ಬೆಂಬಲ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರೈತರ ಹೋರಾಟದ ಬಗ್ಗೆ ಮೌನ, ಒಂದು ರಾಷ್ಟ್ರ-ಒಂದು ಚುನಾವಣೆ ನೀತಿಗೆ ಸ್ವಾಗತ ಇತ್ಯಾದಿಯಾಗಿ ಸಂವಿಧಾನ ವಿರೋಧಿ ನಿಲುವುಗಳನ್ನು ತಾಳಿ ಅಡ್ಡದಾರಿ ಹಿಡಿದಿರುವ ಅಕ್ಕನವರು ಒಳಮೀಸಲಾತಿ ತೀರ್ಪನ್ನು ವಿರೋಧಿಸಿದ್ದು ಅಚ್ಚರಿಯೇನಲ್ಲ. ಸಾಲದ್ದಕ್ಕೆ, ನಾವು ಹೊಸ ಪಾರ್ಟಿ ಸ್ಥಾಪಿಸಿದ ಮೂರೇ ದಿನದಲ್ಲಿ, ನಮ್ಮ ಪಾರ್ಟಿಯ ರಾಜ್ಯಧ್ಯಕ್ಷ ಮಾರಸಂದ್ರ ಮುನಿಯಪ್ಪನವರ ಮನೆ ಮತ್ತು ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದರು. ಇದರ ಸೂತ್ರದಾರಿ ಯಾರೆಂಬುದು ಗುಟ್ಟೇನಲ್ಲ. ಈ ಎಲ್ಲ ಬೆಳವಣಿಗೆಗಳು, ಅಕ್ಕ ಮಾಯಾವತಿಯವರು ಅಡ್ಡದಾರಿ ಹಿಡಿದಿರುವ ಸೂಚ್ಯಂಕಗಳಾಗಿವೆ. ಇಂತಹ ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿಯವರು ಅಕ್ಕ ಮಾಯಾವತಿಯವರ ತಾಳಕ್ಕೆ ಕುಣಿಯುವ ಸೂತ್ರದ ಗೊಂಬೆಯಾಗಿದ್ದು, ಹಾಸ್ಯಾಸ್ಪದವಾಗಿ ಮಾತಾಡುವುದೂ ಅಚ್ಚರಿಯೇನಲ್ಲ” ಎಂದರು.
“ವಾಸ್ತವವಾಗಿ, ಒಳಮೀಸಲಾತಿ ವಿಚಾರವಾಗಿ, ಅಕ್ಕನವರ ಆಹ್ವಾನದ ಮೇರೆಗೆ ದಿಲ್ಲಿಗೆ ಹೋಗಿದ್ದ ನಿಯೋಗದಲ್ಲಿದ್ದ ಕೃಷ್ಣಮೂರ್ತಿಯವರಿಗೇ ಅತಿಹೆಚ್ಚು ಅವಮಾನವಾಗಿತ್ತು. ಪಾಪ ಅವರನ್ನು ಮತ್ತು ಅವರೊಂದಿಗಿದ್ದ ಬಹುಜನ ಗಂಗಾಧರರನ್ನು ಸೆಕ್ಯೂರಿಟಿ ಗಾರ್ಡ್‌ಗಳು ಕಾಂಪೌಂಡ್ ಆವರಣದ ಬಾಗಿಲಿನಿಂದ ಹೊರ ದಬ್ಬಿದರು. ಮಾರಸಂದ್ರ ಮುನಿಯಪ್ಪ ಮತ್ತು ಗೋಪಿನಾಥರವರು ಅವರಿಗಾದ ಅವಮಾನವನ್ನು ತಮಗೇ ಆದಂತಹ ಅವಮಾನವೆಂದು ಬಗೆದು ತುಂಬಾ ನೊಂದುಕೊಂಡರು” ಎಂದು ಹೇಳಿದರು.
“ಅಂತಹ ಅವಮಾನವನ್ನೇ ಸನ್ಮಾನವೆಂದು ತಿಳಿದುಕೊಂಡ ಕೃಷ್ಣಮೂರ್ತಿ ಮತ್ತು ಗಂಗಾಧರರು ಕೇವಲ ಪದವಿ ಆಸೆಗೆ ಬಲಿಯಾಗಿ ಬಿಎಸ್‌ಪಿಯಲ್ಲಿ ಅಂಟಿಕೊಂಡಿದ್ದಾರೆ. ಅವರು ಬಿಜೆಪಿಯ ನೀತಿ-ನಿಯಮಗಳನ್ನು ವಿರೋಧಿಸದೆ, ಅಕ್ಕ ಮಾಯಾವತಿಯವರ ಸೂಚನೆಗಳಿಗೆ ಅನುಸಾರ ನಡೆಯುವಷ್ಟು ಕಾಲವೂ ಅವರುಗಳ ಸ್ಥಾನಗಳಿಗೆ ಯಾವುದೇ ಕುತ್ತು ಬರುವುದಿಲ್ಲ. ಅವರು ನಮ್ಮನ್ನು ಉಚ್ಚಾಟಿಸಿರುವ ಹೇಳಿಕೆ ನೀಡಿರುವುದೂ ಸಹ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಅವರ ರಾಷ್ಟ್ರ ನಾಯಕರು ಹಾಕಿರುವ ಒತ್ತಡದ ಪರಿಣಾಮವಾಗಿದೆ. ಮೂರು ತಿಂಗಳ ಹಿಂದೆಯೇ ರಾಜೀನಾಮೆ ನೀಡಿರುವವರನ್ನು ಈಗ ಉಚ್ಚಾಟಿಸಿದ್ದೇವೆಂದು ತಲೆ ಸರಿ ಇರುವ ವ್ಯಕ್ತಿಗಳಾರೂ ಹೇಳಲು ಸಾಧ್ಯವಿಲ್ಲ. ಇವರೆಲ್ಲರೂ ತುರ್ತಾಗಿ ಒಳ್ಳೆಯ ಮನೋವೈದ್ಯರನ್ನು ಕಾಣಬೇಕಿದೆ” ಎಂದು ಟೀಕೆ ಮಾಡಿದರು.