ವಕ್ಫ್ ಬೋರ್ಡ್ ರೈತರಿಗೆ ನೋಟಿಸ್ ನೀಡಿದೆ ಎಂಬುದನ್ನು ನೆಪವಾಗಿಸಿಕೊಂಡು ಕಡಕೋಳ ಗ್ರಾಮದಲ್ಲಿ ನಡೆದ ಭಯಾನಕ ಗಲಭೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಮಂದಿ ಮುಸ್ಲಿಂ ಕುಟುಂಬಗಳು ಗ್ರಾಮ ತೊರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆಯವರು ಭೇಟಿ ನೀಡಿ ಸಭೆ ನಡೆಸಿದರು.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದ ಗಲಭೆಯ ಕಾರಣದಿಂದ ಮಸೀದಿಯ ಧರ್ಮಗುರುಗಳೂ ಕೂಡ ಗ್ರಾಮ ತೊರೆದಿದ್ದು, ಮಸೀದಿಯಲ್ಲಿ ಒಂದು ವಾರದಿಂದ ಪ್ರಾರ್ಥನೆ ನಿಂತಿದೆ. ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವ್ಯ ವೇದಿಕೆ ಸದಸ್ಯರು ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷ ಮೌಲಾ ಸಾಬ್ ನದಾಫ್ ಮತ್ತು ಸದಸ್ಯರನ್ನು ಮಾತನಾಡಿಸಿ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಊರಿನಲ್ಲಿರುವ ಹಿಂದೂ ಸಮುದಾಯದ ಮುಖಂಡರನ್ನು ಸೇರಿಸಿ ಸಭೆ ನಡೆಸಿದ್ದಾರೆ.
“ಶತಮಾನಗಳಿಂದ ರೂಪಿಸಿಕೊಂಡು ಬಂದ ಸಾಮರಸ್ಯವನ್ನು ಕೆಡಿಸಲು ರಾಜಕೀಯದ ಉದ್ದೇಶದಿಂದ ಸಮಾಜಘಾತುಕ ಶಕ್ತಿಗಳು ಮತ್ತು ಊರಿನ ಬಾಹ್ಯ ಶಕ್ತಿಗಳು ನಡೆಸುತ್ತಿರುವ ಷಡ್ಯಂತ್ರವನ್ನು ಅರಿತು ಸೌಹಾರ್ದಿಂದ ಬದುಕಬೇಕು” ಎಂದು ಸಂಘಟನೆಯ ಸದಸ್ಯರು ಗ್ರಾಮಸ್ಥರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯ ಹಿಂದೂ ಮುಖಂಡರು “ಊರು ಬಿಟ್ಟುಹೋದ ಮುಸ್ಲಿಂ ಸದಸ್ಯರನ್ನು ಹಿಂತಿರುಗಿ ಕರೆದುಕೊಂಡು ಬರುವುದರ ಜತೆಗೆ ಕಿಡಿಗೇಡಿಗಳ ದಾಂಧಲೆ ಹಾಗೂ ದುಷ್ಕರ್ಮಿಗಳ ವಿರುದ್ಧ ಒಂದಾಗಿ ನಿಲ್ಲುತ್ತೇವೆ” ಎಂದು ಭರವಸೆ ನೀಡಿದರು.
ಊರಿನಲ್ಲಿ ಸೌಹಾರ್ದ ಸ್ಥಾಪಿಸಲು ಶ್ರಮಪಡುತ್ತಿರುವ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆಯ ಪ್ರಯತ್ನವನ್ನು ಗ್ರಾಮಸ್ಥರು ಒಕ್ಕೂರಲಿನಿಂದ ಶ್ಲಾಘಿಸಿದರು. ಗಲಭೆ ಸಂಬಂಧ ಶೀಘ್ರದಲ್ಲಿ ನಡೆಯುವ ಶಾಂತಿ ಮತ್ತು ಸಂಧಾನ ಸಭೆಗೆ ಬಾಂಧವ್ಯ ವೇದಿಕೆಯು ಭಾಗವಹಿಸಬೇಕು ಎನ್ನುವ ಅಭಿಪ್ರಾಯವನ್ನು ಈ ಸಂದರ್ಭದಲ್ಲಿ ಉಭಯ ಸಮುದಾಯದ ಹಿರಿಯ ಮುಖಂಡರು ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ l ಅಕ್ರಮವಾಗಿ ಮದ್ಯ ಮಾರಾಟ; ನಾಶ ಪಡಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು
ವೇದಿಕೆಯ ನಿಯೋಗದಲ್ಲಿ ಗೌರವಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಅಧ್ಯಕ್ಷ ಸುಹೇಲ್ ಅಹಮದ್ ಮರೂರ್, ವಕ್ತಾರ ಮುಷ್ತಾಕ್ ಹೆನ್ನಾಬೈಲ್, ಮಾಜಿ ಅಧ್ಯಕ್ಷ ಅನಿಸ್ ಪಾಷಾ, ಖಜಾಂಚಿ ಮುಝಫರ್ ಹುಸೇನ್ ಪಿರಿಯಾಪಟ್ಟಣ, ಮುಬಾರಕ್ ಗುಲ್ವಾಡಿ, ರಫೀಕ್ ನಾಗೂರ್, ರೆಹಮತ್ ದಾವಣಗೆರೆ ಸೇರಿದಂತೆ ಇತರರು ಇದ್ದರು.