ಯುವತಿಯೋರ್ವಳನ್ನು ಭೇಟಿ ಮಾಡಲೆಂದು ಬಂದಿದ್ದ ಯುವಕನೋರ್ವನನ್ನು ಹಗ್ಗದಿಂದ ಕಂಬಕ್ಕೆ ಕಟ್ಟಿ ಹಾಕಿ, ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ನಡೆದಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕು ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ನ.7ರಂದು ಈ ಘಟನೆ ನಡೆದಿದ್ದು, ಹಲ್ಲೆ ನಡೆಸಿರುವ ವಿಡಿಯೋ ವೈರಲಾದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಈಗಾಗಲೇ ಆರು ಮಂದಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಹಲ್ಲೆಗೊಳಗಾದ ಯುವಕನನ್ನು ಮಹಮ್ಮದ್ ಮುಸ್ತಫಾ(21) ಎಂದು ಗುರುತಿಸಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಕಂಚಿನಡ್ಕಪದವು ಸಜೀಪನಡು ಗ್ರಾಮದ ನಿವಾಸಿಗಳಾದ ಮಹಮ್ಮದ್ ಸಫ್ವಾನ್(25), ಮಹಮ್ಮದ್ ರಿಜ್ವಾನ್ (25), ಇರ್ಫಾನ್(27), ಅನೀಸ್ ಅಹಮ್ಮದ್ (19), ನಾಸೀರ್ (27), ಶಾಕೀರ್ (18) ಎಂಬ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದುಬಂದಿದೆ.

ನವೆಂಬರ್ 7ರಂದು ರಾತ್ರಿ 10.00 ಗಂಟೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕು ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಯುವಕ ಮಹಮ್ಮದ್ ಮುಸ್ತಫಾ ಎಂಬಾತನನ್ನು ಆತನ ದೂರದ ಸಂಬಂಧಿ ಹುಡುಗಿಯೊಬ್ಬಳು ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ಮನೆಗೆ ಬರಲು ಹೇಳಿದ್ದಳು. ಈ ಹಿನ್ನೆಲೆಯಲ್ಲಿ ಸಜೀಪನಡು ಕಂಚಿನಡ್ಕಪದವು ಎಂಬಲ್ಲಿಗೆ ಬಂದಾಗ ಆರೋಪಿಗಳು ಮಹಮ್ಮದ್ ಮುಸ್ತಫಾನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು, ಕಂಬಕ್ಕೆ ಹಗ್ಗದಿಂದ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಮೊಬೈಲ್‌ನಲ್ಲಿ ಕೂಡ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು.
ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾದ ಬೆನ್ನಲ್ಲೇ, ಸಂತ್ರಸ್ತ ಯುವಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ದೂರಿನ ಅನ್ವಯ ಕಲಂ 115(2), 126(2), 189(2), 190, 191(2), 191(3),351(2),352 ಬಿಎನ್‍ಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನು ಓದಿದ್ದೀರಾ? ಮೂಡಬಿದ್ರೆ | ಬೈಕ್ ಸವಾರರ ಮೇಲೆ ಹರಿದ ಖಾಸಗಿ ಬಸ್: ರೊಚ್ಚಿಗೆದ್ದ ಜನರಿಂದ ಬಸ್ಸಿನ ಗಾಜು ಪುಡಿಪುಡಿ
ಹಲ್ಲೆಗೊಳಗಾದ ಮುಸ್ತಫಾ, ತನಗಾದ ಗಾಯದ ನೋವು ಹೆಚ್ಚಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಹೈಲ್ಯಾಂಡ್ ಆಸ್ಪತ್ರೆಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ ಯುವಕ, ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಗುಂಪು ಹಲ್ಲೆ ನಡೆಸಿ ಕೊಲೆಯತ್ನ ನಡೆಸಿರುವುದಾಗಿ ಹೇಳಿಕೆ ನೀಡಿದ್ದ.
ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಕಲಂ 109, 117(4) ಬಿಎನ್ಎಸ್ ಕಾಯ್ದೆಯನ್ನು ಹೆಚ್ಚುವರಿಯಾಗಿ ಸೇರಿಸಿ, ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಸದ್ಯ ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
