ಜಿಲ್ಲೆಯ ಒಕ್ಕಲಿಗರು ಅರಿವಿನ ಮತ್ತು ಆರ್ಥಿಕ ಪರಿಸ್ಥಿತಿಯ ಕೊರತೆಯಿಂದಾಗಿ ಉದ್ಯಮ ಕ್ಷೇತ್ರದಿಂದ ಹಿಂದಿದ್ದಾರೆ. ಕೇವಲ ಕೃಷಿಗೆ ಸೀಮಿತವಾಗದೆ ಉದ್ಯಮಗಳನ್ನು ಕಟ್ಟಿ, ಉದ್ಯೋಗದಾತರಾಗಿ ಎಂದು ಚಿಕ್ಕಬಳ್ಳಾಪುರ ಶಾಖಾಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಕರೆ ನೀಡಿದರು.
ಕೋಲಾರ ನಗರ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಭಾನುವಾರ ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್ ಸೊಸೈಟಿಯ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗಹಿಸಿ ಅವರು ಮಾತನಾಡಿದರು.
ಕೋಲಾರ ಜಿಲ್ಲೆಯ ಜನ ಶ್ರಮಜೀವಿಗಳು. ಬದಲಾವಣೆಗನುಗುಣವಾಗಿ ಸ್ಪರ್ಧೆ ಎದುರಿಸಲು ಸನ್ನದ್ದರಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಿ, ಮುಂದಿನ ಪೀಳಿಗೆಗೆ ಸಹಕಾರಿಯಾಗುವಂತೆ ಮಾಡಬೇಕು ಎಂದರು.

ರಾಜ್ಯ ಜಲಸಾರಿಗೆ ಮಂಡಳಿಯ ಸಿಇಒ ಜಯರಾಮ್ ರಾಯಪುರ ಮಾತನಾಡಿ, ಗಂಗರು, ಅರಸರ ಕಾಲದಿಂದಲೂ ಒಕ್ಕಲಿಗರು ಒಕ್ಕಲುತನದ ಜೊತೆಗೆ ಸಾಮ್ರಾಜ್ಯವನ್ನು ಕಟ್ಟಿ ಆಳಿದ್ದಾರೆ. ನಾವುಗಳು ಬೇಸಾಯದ ಜೊತೆಗೆ ಉದ್ಯಮ ಕ್ಷೇತ್ರಕ್ಕೂ ವಿಸ್ತರಿಸಿಕೊಡಬೇಕು. ಆ ಮೂಲಕ ನಾಡಿಗೆ ಅನ್ನ ನೀಡುವ ಒಕ್ಕಲಿಗ, ಉದ್ಯೋಗ ನೀಡುವ ಉದ್ಯಮಿಯಾಗಬೇಕು ಎಂದು ಸಲಹೆ ಮಾಡಿದರು.
ಕರ್ನಾಟಕ ರಾಜ್ಯದಲ್ಲಿ ಒಕ್ಕಲಿಗರು ರಾಜಕೀಯದಲ್ಲಿ ಬಲಿಷ್ಠವಾಗಿದ್ದಾರೆ. ಆದರೆ ಉದ್ಯಮ ಕ್ಷೇತ್ರದಲ್ಲಿ ಹಿಂದುಳಿದಿದ್ದಾರೆ. ಸಮುದಾಯವು ಕಡಿಮೆ ಇರುವ ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಕೆ ಮಾಡಿದರೆ ಇಲ್ಲಿ ಶೇ.1ರಷ್ಟು ಮಾತ್ರವೇ ಉದ್ಯಮದಲ್ಲಿ ಇದ್ದಾರೆ. ಇದರಲ್ಲಿ ರಾಜಕಾರಣಿಗಳ ಹೊಣೆಗಾರಿಕೆ ಹೆಚ್ಚಾಗಬೇಕು. ಸಮುದಾಯದಲ್ಲಿ ಪರಸ್ಪರ ಒಗ್ಗಟ್ಟಿನಿಂದ ಅರಿವು, ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಕೈಜೋಡಿಸಿ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದರು.
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಜಿಲ್ಲೆಯ ಜನ ಕೃಷಿಯ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ. ಆದರೆ ಉದ್ಯಮದಲ್ಲಿ ಅರಿವಿನ ಕೊರತೆಯಿಂದ ಕೈಗಾರಿಕೆಗಳನ್ನ ಸ್ಥಾಪಿಸಿ, ಕೈ ಸುಟ್ಟುಕೊಂಡಿದ್ದಾರೆ ಯುವಕರಿಗೆ ಮಾರ್ಗದರ್ಶನ ನೀಡಿದರೆ ಭವಿಷ್ಯದ ಉದ್ಯಮಗಳಾಗಲಿದ್ದು ಬೇರೆಯವರಿಗೂ ಉದ್ಯೋಗ ನೀಡುವಂತಾಗುತ್ತಾರೆ ಎಂದರು.
ಫಸ್ಟ್ ಸರ್ಕಲ್ ಸೊಸೈಟಿ ಜಿಲ್ಲಾ ಗೌರವ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಮಾತನಾಡಿ, ಮನುಷ್ಯನ ಜೀವನಕ್ಕೆ ಉದ್ಯೋಗ ಮುಖ್ಯವಾಗಿದೆ. ಒಕ್ಕಲಿಗ ಉಪ ಜಾತಿಗಳಿಂದ ಸಮುದಾಯಕ್ಕೆ ಮಾರಕವಾಗಿದೆ. ನಮ್ಮಲ್ಲಿಯೇ ಒಗ್ಗಟ್ಟಿಲ್ಲ. ಉಪಜಾತಿಗಳ ಮನಸ್ಥಿತಿಯಿಂದ ಹೊರಬಂದು ನಾವು ಎಲ್ಲರೂ ಒಂದೇ ಎಂಬ ರೀತಿಯಲ್ಲಿ ಉದ್ಯಮ ಮಾಡಿ ಬೇರೆಯವರನ್ನು ಬೆಳೆಸುವ ಗುಣ ಬೆಳೆಸಿಕೊಳ್ಳೋಣ ಎಂದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಬಿಸಿ ಗಾಳಿ ಬೀಸುತ್ತಿದೆ – ತಾಪಮಾನ ಏರುತ್ತಿದೆ; ಪ್ರಕೃತಿ ತಿರುಗಿ ಬೀಳಲಿದೆ!
ಕಾರ್ಯಕ್ರಮದಲ್ಲಿ ಎಂಎಲ್‌ಸಿ ಇಂಚರ ಗೋವಿಂದರಾಜು, ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮು, ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ವಿ ಶಂಕರಪ್ಪ, ಐಎಎಸ್ ಅಧಿಕಾರಿ ಕೆ.ಆರ್.ನಂದಿನಿ, ದೆಹಲಿ ಕನ್ನಡ ಸಂಘದ ಅಧ್ಯಕ್ಷ ನಾಗರಾಜ್, ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ, ಉದ್ಯಮಿ ಡೆಕ್ಕನ್ ರಾಮಕೃಷ್ಣಪ್ಪ, ವೈದ್ಯ ಕೃಷ್ಣಪ್ಪ ಮುಂತಾದವರು ಇದ್ದರು.