ಶಾಲಾ ಮಕ್ಕಳ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪಾಲ ಬಳಿಯ ಕೆಳ ಪರ್ಕಳದ ಈಶ್ವರ ನಗರದ ನಗರಸಭೆಯ ಪಂಪ್ ಹೌಸ್ ಬಳಿ ಸೋಮವಾರ (ನ.11) ಸಂಜೆ ನಡೆದಿದೆ.
ಮಣಿಪಾಲ ಮಾಧವ ಕೃಪಾ ಶಾಲೆಯ ಮಕ್ಕಳನ್ನು ಸಂಜೆ ಮನೆಗೆ ಕರೆ ತರುತ್ತಿದ್ದ ವೇಳೆ ಮಣಿಪಾಲದಿಂದ ಪರ್ಕಳದ ಕಡೆ ಹೋಗುತ್ತಿದ್ದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯಿತು ಎನ್ನಲಾಗಿದೆ. ಇದರಿಂದ ರಿಕ್ಷಾದಲ್ಲಿದ್ದ ಮೂವರು ಮಕ್ಕಳಿಗೆ ಗಾಯಗಳಾಗಿದೆ ಎನ್ನಲಾಗುತ್ತಿದೆ.
ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆಟೋ ರಿಕ್ಷಾದಲ್ಲಿ ಒಟ್ಟು 8 ಮಂದಿ ವಿದ್ಯಾರ್ಥಿಗಳು ಇದ್ದರು ಎಂದು ತಿಳಿದುಬಂದಿದೆ.

ಚಾಲಕ ಡ್ರಿಂಕ್ ಅಂಡ್ ಡ್ರೈವ್ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶಾಲಾ ಮಕ್ಕಳ ರಿಕ್ಷಾ ಓಡಿಸುವ ಚಾಲಕರನ್ನು ಪೊಲೀಸರು ತಪಾಸಣೆ ನಡೆಸುವ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಬಾಗಲಕೋಟೆ | ದೇವಸ್ಥಾನದ ಕಾರ್ಯಕ್ರಮದಲ್ಲಿ ‘ವಕ್ಫ್’ ವಿಚಾರ: ಶಾಸಕ ಯತ್ನಾಳ್‌ಗೆ ಸಾರ್ವಜನಿಕರಿಂದ ಛೀಮಾರಿ
ಕೆಳಪರ್ಕಳದಲ್ಲಿ ಪದೇ ಪದೇ ವಾಹನ ಅಪಘಾತವಾಗುತ್ತಿರುವುದರಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ.
