ಕಿನ್ನರ ಜೋಗಿ ಕಲಾವಿದ ಕೆ ಗುಡ್ಡಪ್ಪ ಜೋಗಿ ಹೊಸೂರು ಸಾಗರರವರು ನಾಡೋಜ ಎಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಾನಪದ ಲೋಕ ನಿರ್ಮಾತೃ ನಾಡೋಜ ಎಚ್ ಎಲ್ ನಾಗೇಗೌಡರು ಕಟ್ಟಿ ಬೆಳೆಸಿದ ಕರ್ನಾಟಕ ಜಾನಪದ ಪರಿಷತ್ತಿನಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜಾನಪದ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ವ್ಯಕ್ತಿಯನ್ನು ಗುರುತಿಸಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತದೆ.
ಪ್ರಸ್ತುತ ವರ್ಷ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊಸೂರಿನ ಆಕಾಶವಾಣಿ, ದೂರದರ್ಶನ ಕಲಾವಿದರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಕಿನ್ನರಜೋಗಿ ಜಾನಪದ ಕಲಾವಿದ ಗುಡ್ಡಪ್ಪ ಜೋಗಿ ಅವರಿಗೆ ನಾಡೋಜ ಎಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಕೆ ಗುಡ್ಡಪ್ಪ ಜೋಗಿಯವರು ಕಳೆದ ಹಲವು ದಶಕಗಳಿಂದ ತಮ್ಮ ತಂಡದೊಂದಿಗೆ ಸರ್ಕಾರದ ಜನಜಾಗೃತಿ ಯೋಜನೆಗಳ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಮುಖ್ಯವಾಗಿ ಅಕ್ಷರತುಂಗ, ಭ್ರೂಣಲಿಂಗ ಪತ್ತೆ, ಪಲ್ಸ್ ಪೋಲಿಯೋ, ಎಚ್ಐವಿ ಏಡ್ಸ್ ಸೋಂಕು ತಡೆ, ಕ್ಷಯರೋಗ, ಅಯೋಡಿನ್ ಕೊರತೆ ಮತ್ತು ಅರಣ್ಯ ಇಲಾಖೆಯ ಪಶ್ಚಿಮ ಘಟ್ಟದ ಕಾಡು ಮತ್ತು ಕಾಡುಪ್ರಾಣಿ ಉಳಿಸಿ ಅಭಿಯಾನಗಳ ಮೂಲಕ ರಾಜ್ಯಾದ್ಯಂತ ತಿರುಗಾಡಿ ಜನಜಾಗೃತಿ ಮೂಡಿಸಿದ್ದಾರೆ.
ಗುಡ್ಡಪ್ಪ ಜೋಗಿಯವರು ತಮ್ಮ ಇಳಿ ವಯಸ್ಸಿನಲ್ಲಿ ವೇದಿಕೆ ಏರುವಾಗ ತಲೆಗೆ ಕೆಂಪು ಬಣ್ಣದ ಜರಿ ರುಮಾಲು ಕಟ್ಟಿ, ಕಪ್ಪು ಕೋಟು ಧರಿಸಿ, ಮಣಿಹಾರ ಧರಿಸಿಕೊಂಡು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕೈಯಲ್ಲಿ ಕಿನ್ನೂರಿ ಅಥವಾ ಚಿಟುಕು ಹಿಡಿದುಕೊಂಡರೆ ಲಾವಣಿ ಗೀಗಿ ಪದ ಅಶು ಕತೆ ಪೌರಾಣಿಕ ಕಥೆ ಜಾನಪದ ವಿದ್ವಾಂಸರು ಪುಟಗಟ್ಟಲೆ ಬಣ್ಣಿಸುವ ಜಾನಪದ ಶ್ರೀಮಂತಿಕೆ ಸೊಗಸುಗಾರಿಕೆ, ಸೊಗಡು ಇಂಪು ಗುಡ್ಡಪ್ಪ ಜೋಗಿಯವರ ಬಾಯಲ್ಲಿ ಹೊರಹೊಮ್ಮಿದಾಗ ಕಲಾಪ್ರೇಕ್ಷಕರನ್ನು ಮಂತ್ರ ಮಗ್ದರನ್ನಾಗಿಸುತ್ತಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಾನಪದ ಸಮ್ಮೇಳನ; ಬುರ್ರಕಥಾ ಕಮಲಮ್ಮನವರಿಗೆ ಅಭಿನಂದನಾಪೂರ್ವಕ ಗೌರವ ಸನ್ಮಾನ
ಜಾನಪದ ಕಲಾವಿದ ಕೆ ಗುಡ್ಡಪ್ಪ ಜೋಗಿ ಅವರಿಗೆ ಪ್ರಶಸ್ತಿ ದೊರಕಿರುವುದಕ್ಕೆ ಶಿವಮೊಗ್ಗ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಿ ಮಂಜುನಾಥ್, ಕಾರ್ಯದರ್ಶಿ ಎಂಎಂ ಸ್ವಾಮಿ, ಸಾಗರ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ವಿ ಟಿ ಸ್ವಾಮಿ, ಜಿ ನಾಗೇಶ್, ಕಾ.ಸ.ಪ ಹೋಬಳಿ ಘಟಕ ಅಧ್ಯಕ್ಷ ಬಿ ಡಿ ರವಿಕುಮಾರ್, ಪ್ರಮುಖರಾದ ಸತ್ಯನಾರಾಯಣ ಸಿರುವಂತೆ, ಸ್ವಾಮಿರಾವ್ ಗುಡುವಿ, ಗಣಪತಿ ಯಡೆಹಳ್ಳಿ ಸೇರಿದಂತೆ ಇತರರು ಅಭಿನಂದನೆ ಸಲ್ಲಿಸಿದ್ದಾರೆ.
ನವೆಂಬರ್ ತಿಂಗಳ 22ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.
ವರದಿ : ಅಮಿತ್ ಆರ್, ಆನಂದಪುರ