ಕೋಮುವಾದಿ ಬಿಜೆಪಿ ಪಕ್ಷವು ಜನರ ಏಳಿಗೆಗಾಗಿ ಕೆಲಸ ಹಾಗೂ ರಾಜಕಾರಣ ಮಾಡುವ ಬದಲಿಗೆ ಜನರ ಐಕ್ಯತೆ ಸಾಮರಸ್ಯ ಒಡೆಯುವ ಕೋಮು ವಿಭಜಕ ರಾಜಕಾರಣವನ್ನು ಮಾಡುತ್ತಿದೆ. ಇದು ದೇಶದ ಬಹುತ್ವ ಸಂಸ್ಕೃತಿ, ಸಂವಿಧಾನ ವಿರೋಧಿ ಬಿಜೆಪಿ ಪಕ್ಷವನ್ನು ಸೋಲಿಸಬೇಕು ಎಂದು ಸಿಪಿಐ(ಎಂ) ಹಾವೇರಿ ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಪೂಜಾರ್ ಕರೆ ನೀಡಿದರು.
ಹಾವೇರಿ ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಜಿಲ್ಲಾ ಸಮಿತಿಯು ಶಿಗ್ಗಾಂವಿ -ಸವಣೂರು ಉಪ ಚುನಾವಣೆಯಲ್ಲಿ ಕೋಮುವಾದಿ ಪಕ್ಷ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಎಂದು ನಡೆಸುತ್ತಿರುವ ಅಭಿಯಾನದಲ್ಲಿ ಅವರು ಮಾತನಾಡಿದರು.
“ಬಿಜೆಪಿ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದು, ದುಡಿಯುವ ಜನರು ಹಾಗೂ ಎಲ್ಲ ನಾಗರಿಕರನ್ನು ತೀವ್ರ ಸಂಕಷ್ಠಕ್ಕೀಡು ಮಾಡಿತ್ತು. ಲೂಟಿಕೋರ ಕಾರ್ಪೋರೇಟ್ ಸಂಸ್ಥೆಗಳ ಪರವಾದ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿವೆ. ಈ ಲೂಟಿಕೋರರ ಲೂಟಿಗೆ ವಿರುದ್ಧವಾಗಿ ನಡೆಯುವ ಪ್ರತಿರೋಧವನ್ನು ಹತ್ತಿಕ್ಕಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ” ಎಂದರು.

“ಪ್ರಸಕ್ತ ಚುನಾವಣೆಯಲ್ಲಿ ಕಳೆದ ನಾಲ್ಕು ಅವಧಿಯಿಂದ ಬಿಜೆಪಿಯಿಂದ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿ ಕೆಲಸ ಮಾಡಿಲ್ಲ. ಕಳೆದ ಅವಧಿಯಲ್ಲಿ ರಾಜ್ಯ ಸರಕಾರದಲ್ಲಿ ನೀರಾವರಿ ಮಂತ್ರಿ, ಗೃಹ ಮಂತ್ರಿ ಹಾಗೂ ಮುಖ್ಯಮಂತ್ರಿಯೂ ಆಗಿ ಅಧಿಕಾರ ನಡೆಸಿದರೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ. ಈ ಪ್ರದೇಶದ ರೈತ ಕಾರ್ಮಿಕರು ಹಾಗೂ ದುಡಿಯುವ ಜನರ ಬವಣೆಗಳು ಪರಿಹಾರ ಕಾಣಲಿಲ್ಲ. ಶಿಕ್ಷಣ ಉದ್ಯೋಗದ ಸಮಸ್ಯೆಗಳು ಬಿಗಡಾಯಿಸಿ ವಿದ್ಯಾರ್ಥಿ-ಯುವಜನರು, ಮಹಿಳೆಯರು ಬೇಸತ್ತಿದ್ದಾರೆ. ಇದೀಗ ಹಣ ಬಲದಿಂದ ಉಪಚುನಾವಣೆಗೆ ತಮ್ಮ ಮಗ ಉದ್ಯಮಿ ಭರತ್ ಬೊಮ್ಮಾಯಿ ಅವರನ್ನು ಬಿಜೆಪಿಯ ಅಭ್ಯರ್ಥಿಯನ್ನಾಗಿಸಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ” ಎಂದು ಬಸವರಾಜ್ ಪೂಜಾರ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಉಪ ಚುನಾವಣೆಯಲ್ಲಿ ಶಿಗ್ಗಾವಿ ಕ್ಷೇತ್ರದ ಸೌಹಾರ್ದತೆ ಹಾಗೂ ಜನರ ಬದುಕು ಹಸನಾಗಿಸಲು ಬಿಜೆಪಿ ಪಕ್ಷವನ್ನು ತಿರಸ್ಕರಿಸಿ ನಿರ್ಣಾಯಕವಾಗಿ ಸೋಲಿಸುವುದು ಅಗತ್ಯವಾಗಿದೆ. ಬಿಜೆಪಿಯನ್ನು ಸೋಲಿಸಲು ಶಕ್ತವಾದ ಕಾಂಗ್ರೆಸ್ ಪಕ್ಷ ಬಿಟ್ಟರೆ ಅನ್ಯರಿಲ್ಲದ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಸಿಪಿಐಎಂ ಪಕ್ಷವು ಮತದಾರರಲ್ಲಿ ಮನವಿ ಮಾಡುತ್ತದೆ ಎಂದು ತಿಳಿಸಿದ್ದಾರೆ.