ಮದ್ಯ ಮಾರಾಟ ಅಂಗಡಿಗಳಲ್ಲಿ ಮದ್ಯ ಖರೀದಿದಾರರ ವಯಸ್ಸನ್ನು ಕಡ್ಡಾಯವಾಗಿ ಪರೀಶೀಲಿಸಬೇಕೆಂದು ನಿಯಮ ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಮದ್ಯ ಸೇವನೆ ಮತ್ತು ಖರೀದಿಗೆ ವಯಸ್ಸನ್ನ ನಿರ್ಧರಿಸಿ, ವಯಸ್ಸಿನ ಪರೀಶಿಲಿಸಬೇಕು. ಅದಕ್ಕಾಗಿ ಕಾನೂನು ರೂಪಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿಶ್ವನಾಥನ್ ಅವರಿದ್ದ ಪೀಠವು, ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿರುವ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿವೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಪಾನಮತ್ತರಾಗಿ ವಾಹನ ಚಾಲನೆ ಮಾಡುವಂತಹ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ದೇಶಾದ್ಯಂತ ಏಕರೂಪ ಮದ್ಯ ನಿಯಮ ರೂಪಿಸುವುದು ಅತ್ಯಗತ್ಯವಾಗಿದೆ ಎಂದು ‘ಕಮ್ಯುನಿಟಿ ಎಗೆನೆಸ್ಟ್ ಡ್ರಂಕನ್ ಡ್ರೈವಿಂಗ್’ (ಸಿಎಡಿಡಿ) ಸಂಘಟನೆ ಪಿಐಎಲ್ ಸಲ್ಲಿಸಿದೆ.