ರಾಜ್ಯದಲ್ಲಿ ಉಪಚುನಾವಣೆಯ ಹೊತ್ತಲ್ಲಿ ವಕ್ಫ್ ವಿಚಾರ ಇಟ್ಟುಕೊಂಡು ಸಮಾಜದಲ್ಲಿ ವ್ಯವಸ್ಥಿತವಾಗಿ ದ್ವೇಷ ಹರಡಲು ಹುನ್ನಾರ ನಡೆಸಲಾಗುತ್ತಿದೆ. ಇದರ ಬಗ್ಗೆ ನಾಗರಿಕರು ಜಾಗೃತರಾಗುವ ಅವಶ್ಯಕತೆ ಇದೆ ಎಂದು ಸಾಮಾಜಿಕ ಚಿಂತಕ ಶಿವಸುಂದರ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಮೈಸೂರಿನ ನಳ್‌ಪಾಡ್ ಹೋಟೆಲ್‌ನಲ್ಲಿ ವಕ್ಫ್ ವಿಚಾರವಾಗಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
“ವಕ್ಫ್ ಎಂಬುವುದು ಮುಸ್ಲಿಂ ಕಾನೂನಿನಲ್ಲಿ ಯಾವುದನ್ನು ಪವಿತ್ರ ಧಾರ್ಮಿಕ, ದಾನ ಅಥವಾ ಪರೋಪಕಾರಿ ಉದ್ದೇಶಗಳೆಂದು ಪರಿಗಣಿಸಿ ಅದಕ್ಕಾಗಿ ಶಾಶ್ವತವಾಗಿ ಕೊಟ್ಟಿರುವ ಆಸ್ತಿಯ ದತ್ತಿ(ದಾನ)ಯಾಗಿರುತ್ತದೆ. ಒಮ್ಮೆ ವಕ್ಫ್ ಆಸ್ತಿ ಎಂದು ಪರಿಗಣಿತವಾದ ಆಸ್ತಿಗಳು ಶಾಶ್ವತವಾಗಿ ತಮ್ಮ ವಕ್ಫ್ ಸ್ವರೂಪವನ್ನು ಉಳಿಸಿಕೊಂಡಿರುತ್ತವೆ. ಬೇರೆ ಮಾತಿನಲ್ಲಿ ಹೇಳುವುದಾದರೆ ಒಮ್ಮೆ ವಕ್ಫ್ ಆಸ್ತಿಯೆಂದು ಘೋಷಿತವಾದ ಆಸ್ತಿಗಳು ಶಾಶ್ವತವಾಗಿ ವಕ್ಫ್ ಆಸ್ತಿಯಾಗಿಯೇ ಉಳಿಯುತ್ತವೆ. ಹೀಗಾಗಿ ಇನಾಮ್ ಕಾಯಿದೆಯಡಿ ಫಲಾನುಭವಿಗಳ ಪರವಾಗಿ ಪಟ್ಟಾ ಕೊಟ್ಟಿದ್ದರೂ ಸಹ ಈ ಹಿಂದೆ ಅದನ್ನು ವಕ್ಫಿಗಾಗಿ ನೀಡಲಾಗಿದ್ದ ದತ್ತಿ ಅರ್ಥಾತ್ ವಕ್ಫ್ ಆಸ್ತಿ ಎಂಬುದನ್ನು ಇಲ್ಲವಾಗಿಸುವುದಿಲ್ಲ ಎಂದು ತಿಳಿಸಿದರು.

ಹೇಳಿದ್ದೇ ಸತ್ಯ, ಕೇಳಿದ್ದೇ ಸತ್ಯ ಅನ್ನುವ ನಂಬಿಕೆಗೆ ಜಾರಿದ್ದು ದುರಂತ. ಸಂಘಪರಿವಾರವು ಆತಂಕಗಳನ್ನೇ ಅಜೆಂಡಾ ಮಾಡಿಕೊಂಡಿವೆ. ಅದರಲ್ಲೂ ರಾಜಕೀಯ ದಾಳವಾಗಿಸಿ ನಮ್ಮ ನಮ್ಮಲ್ಲಿ ಒಡಕು ಮೂಡಿಸಿ ಸಮಸ್ಯೆ ಉಲ್ಬಣ ಮಾಡುವುದು ಇವರ ಕೆಲಸವಾಗಿದೆ ಎಂದು ಶಿವಸುಂದರ್ ಅಭಿಪ್ರಾಯಪಟ್ಟಿದ್ದಾರೆ.
ವಕ್ಫ್ ಮಂಡಳಿ ರೈತರ ಭೂಮಿ ಕಬಳಿಸುತ್ತಿದೆ ಅನ್ನುವ ಸುಳ್ಳು ಸುದ್ದಿ ಬಿತ್ತಿದ ಇವರುಗಳು ಮುಂದಿರುವ ವ್ಯಕ್ತಿಯ ಸಮಸ್ಯೆ, ಆತನ ಆತಂಕ ಅರ್ಥ ಮಾಡುವ ಪ್ರಯತ್ನ ಎಂದಿಗೂ ಮಾಡಲ್ಲ. ರೈತರಿಗೆ ಸಹಜ ಆತಂಕ ಇದೆ.ಯಾಕೆ ಅಂದ್ರೆ ಉಳುಮೆ ಮಾಡುವ ರೈತನಿಗೆ ಜಮೀನು ಕೈಜಾರಿದರೆ ಅನ್ನುವ ಆತಂಕ ಸಹಜವಾದದ್ದು.ಆದರೆ, ಕಬಳಿಕೆ ಆಗ್ತಾ ಇದೆ ಅನ್ನುವ ಆತಂಕವನ್ನು ಬೇಕಂತಲೇ ಸೃಷ್ಟಿ ಮಾಡಲಾಗಿದೆ ಎಂದು ತಿಳಿಸಿದರು.
ರೈತರು ಆತಂಕ ಪಡುತ್ತಿದ್ದಾರೆ ಮುಸ್ಲಿಮರು ಕೂಡ ತಾಳ್ಮೆಯಿಂದ ಆಲಿಸಬೇಕು. ದಿಢೀರ್ ಬೆಳವಣಿಗೆಗೆ ದಿಢೀರ್ ಆಗಿ ಉತ್ತರಿಸುವ ಗೋಜಿಗೆ ಹೋಗಬಾರದು. ಅದು ಸರಿಯಾದ ಕ್ರಮವಲ್ಲ. 2014ರ ಅಧಿವೇಶನದಲ್ಲಿ ವಕ್ಫ್ ಅಮೆಂಡ್ಮೆಂಡ್ ಆಕ್ಟ್ ಮುಂದಿಟ್ಟಿದ್ದರು. ಒಂಭತ್ತು ವರ್ಷಗಳ ಕಾಲ ಪ್ರಕ್ರಿಯೆ ನಡೆದಿದೆ. “ಉಮ್ಮೀದ್ “ಅನ್ನುವ ಹೆಸರಿಟ್ಟು ಹೊಸ ಆಕ್ಟ್ ತಂದಿದ್ದಾರೆ ಎಂದು ಶಿವಸುಂದರ್ ಮಾಹಿತಿ ನೀಡಿದರು.

ವಕ್ಫ್ ಆಸ್ತಿಯನ್ನು ವಶ ಪಡಿಸಿಕೊಳ್ಳಲು ಆಗಿಂದಾಗ್ಗೆ ತಯಾರಿಗಳು, ಷಡ್ಯಂತ್ರ ನಡೆದಿದೆ. ಮುಸ್ಲಿಮರ ಆಸ್ತಿಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಇದು ಮುಸ್ಲಿಮರ ಆತಂಕ. ಇದನ್ನ ಅರ್ಥ ಮಾಡಿಕೊಳ್ಳದೆ ದ್ವೇಷ ಹರಡುವ ಕೆಲಸ ಸಮಾಜದಲ್ಲಿ ಆಗ್ತಿರುವುದು ಬೇಸರದ ಸಂಗತಿಯಾಗಿದೆ.”ಅಲ್ಲ ಹೇಳುವ ಮಾತು ನ್ಯಾಯಯುತವಾಗಿ ತನ್ನ ಜೀವನದ ಅಗತ್ಯಕ್ಕೆ ಇರುವ ಆಸ್ತಿ ಇಟ್ಟುಕೊಂಡು,ಸಮಾಜದಲ್ಲಿ ನಿಶಕ್ತರಾದವರಿಗೆ ಕೊಡಬೇಕು. ಪರೋಪಕಾರದ ಭಾಗವಾಗಿ ವಕ್ಫ್ ಕೆಲಸ ಮಾಡುತ್ತದೆ ಎಂದರು.
ಸಾಮಾಜಿಕ ಹೋರಾಟಗಾರ ಅಬ್ದುಲ್ ಖಾದರ್ ಶಾಹಿದ್ ಮಾತನಾಡಿ, ಸಮಾಜದಲ್ಲಿ ಸಂವಿಧಾನವೇ ಮುಖ್ಯ. ಅದರ ಅಡಿಯಲ್ಲಿ ನಮ್ಮೆಲ್ಲರ ಬದುಕು. ಸಂವಿಧಾನ ಮೀರಿದ ಕೆಲಸ ಯಾವುದೂ ನಡೆಯಲ್ಲ. ರೈತರ ಜಾಗ ಒತ್ತುವರಿ, ಕಬಳಿಕೆ ಆಗಿದ್ದರೆ ನೋಟಿಸ್ ಕೊಟ್ಟು ಕ್ರಮ ಕೈಗೊಳ್ಳಿ,ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ. ಜಾತ್ಯತೀತ ನಿಲುವನ್ನು ತರುವ ಪ್ರಯತ್ನ ನಮ್ಮದಾಗಿದೆ. ಆದರೆ ಸದ್ಯದ ಪರಿಸ್ಥಿತಿ ಮುಸ್ಲಿಮರು ಹಿಂದೂಗಳ ಆಸ್ತಿ ಕಬಳಿಕೆ ಮಾಡ್ತಾ ಇದ್ದಾರೆ ಅನ್ನುವ ಸುಳ್ಳು ಸುದ್ದಿ ಸಮಾಜದಲ್ಲಿ ಆತಂಕ ಮೂಡಿಸಿದೆ ಎಂದು ವಿಷಾದಿಸಿದರು.
ರೈತ ಮುಖಂಡ ಮಂಜು ಕಿರಣ್ ಮಾತನಾಡಿ ‘ ವಕ್ಫ್ ಪರಿಸ್ಥಿತಿ ಸದ್ಯಕ್ಕೆ ಹಿಂದೂ ವರ್ಸಸ್ ಮುಸ್ಲಿಂ ಎನ್ನುವಂತಿದೆ. ಆದರೆ, ನಿಜಕ್ಕೂ ಸರ್ಕಾರ ವರ್ಸಸ್ ರೈತ ಆಗಿದೆ. ರೈತ ವಿರೋಧಿ ಕಾಯ್ದೆ ಜಾರಿಗೆ ತಂದ ಶ್ರೇಯಸ್ಸು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು. ವಕ್ಫ್ ಆಸ್ತಿ ಸಹಜವಾಗಿ ಖಾಸಗಿ ವ್ಯಕ್ತಿಯಿಂದ ಬರುವಂಥದ್ದು. ಯಾವುದೇ ಸರ್ಕಾರದಿಂದ ಬರುವ ಆಸ್ತಿಯಲ್ಲ. ಈಗಿರುವ ರಾಜಕಾರಣಿಗಳು ಎಲ್ಲ ದೇವರನ್ನು ಮಾರಾಟ ಮಾಡುತ್ತಿದ್ದಾರೆ. ದೇವರು ಮಾರಾಟದ ಸರಕಾಗಿದ್ದು ಯಾವ ಬದ್ಧತೆಯೂ ಉಳಿದಿಲ್ಲ. ಸುಳ್ಳು ಸುದ್ದಿ ಹರಡಿ ಹಿಂದೂ-ಮುಸ್ಲಿಮರ ನಡುವೆ ಒಡಕು ಮೂಡಿಸುವ ಪ್ರಯತ್ನ ಇದಾಗಿದೆ ಎಂದರು.
ಪ್ರೊ ಶಬ್ಬೀರ್ ಮೊಹಮ್ಮದ್ ಮುಸ್ತಫಾ ಮಾತನಾಡಿ, ಸ್ವಯಂಪ್ರೇರಿತ ಕ್ರಿಯೆ, ಯಾವುದೇ ಕೆಲಸವನ್ನು ಬಲವಂತವಾಗಿ ಮಾಡುವಂಥದ್ದು ಅಲ್ಲ. ಒಂದು ಬಾರಿ ವಕ್ಫ್ ಆದರೆ ಬದಲಾಯಿಸಲು ಸಾಧ್ಯವಿಲ್ಲ. ಅಂದರೆ ಶಾಶ್ವತ ಎಂದರ್ಥ. ಅದನ್ನ ಮತ್ತೆ ದಾನ ಮಾಡಲು,ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಯಾವ ವ್ಯಕ್ತಿ ಯಾವ ಉದ್ದೇಶಕ್ಕೆ ದಾನ ಕೊಟ್ಟಿರುತ್ತಾನೋ ಆ ಉದ್ದೇಶಕ್ಕೆ ಬಳಸುವಂಥದ್ದು. ಇಸ್ಲಾಂ ಧರ್ಮ ಬೇರೆ ಧರ್ಮದ ಕುರಿತಾಗಿ ಲಘುವಾಗಿ ಮಾತಾಡುವುದಿಲ್ಲ, ಗೌರವದಿಂದ ಕಾಣುವ ಧರ್ಮ. ವಕ್ಫ್ ಆಸ್ತಿ ಅಂದ್ರೆ ಒಬ್ಬ ವ್ಯಕ್ತಿ ಕೊಟ್ಟ ದಾನವನ್ನು ಒಬ್ಬ ಮುತ್ತವಲ್ಲಿ ಅದರ ಜವಾಬ್ದಾರಿ ಹೊತ್ತು ನಡೆಸುವ ವ್ಯವಸ್ಥೆ.
ರಾಜ್ಯದಲ್ಲಿ ಸರ್ಕಾರದ ಅಧೀನದಲ್ಲಿ ವಕ್ಫ್ ಬೋರ್ಡ್ ಇದೆ.ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಇವೆ ಎಂದರು.ವಕ್ಫ್ ಕಾನೂನುಗಳು ಸರ್ಕಾರದ ಅಧಿನದಲ್ಲಿಯೇ ಆಗುವಂತದ್ದು ಇದನ್ನ ಅರಿಯಬೇಕು ಎಂದರು.
ರೈತ ಮುಖಂಡ ವಿದ್ಯಾಸಾಗರ್, ವಕೀಲ ಕಲೀಮುಲ್ಲಾ ಷರೀಫ್,
ಪ್ರಾಂಶುಪಾಲ ಮೆಸ್ಕೊ ಕಲೀಮ್, ಅಸಾದುಲ್ಲಾ ಮೈಸೂರು, ಪತ್ರಕರ್ತ ಮೋಹನ್ ಮೈಸೂರು ಮೊದಲಾದವರು ಇದ್ದರು.
