ಶಿಗ್ಗಾಂವಿ ಉಪಚುನಾವಣೆ | ಪಂಚಮಸಾಲಿಗರ ಮತ – ‘ನೋಟಾ’ದತ್ತ!

Date:

Advertisements
ಬಸವರಾಜ ಬೊಮ್ಮಾಯಿ ಮೂಲತಃ ಶಿಗ್ಗಾಂವಿಯವರಲ್ಲ. ಹಾವೇರಿಯವರೂ ಅಲ್ಲ. ಪಕ್ಕದ ಜಿಲ್ಲೆ ಧಾರವಾಡದ ಹುಬ್ಬಳ್ಳಿಯವರು. ಲಿಂಗಾಯತರಲ್ಲಿ 'ಸಮಗಾರ' ಸಮುದಾಯಕ್ಕೆ ಸೇರಿದವರು. ಆದರೂ, ಶಿಗ್ಗಾಂವಿಯಲ್ಲಿ ಪ್ರಬಲರಾಗಿರುವ ಪಂಚಮಸಾಲಿ ಸಮುದಾಯವು ಬೊಮ್ಮಾಯಿ ಅವರನ್ನು ಗೆಲ್ಲಿಸಿಕೊಂಡು ಬಂದಿದೆ. ಆದರೆ, ಈಗ ಸಮುದಾಯ ಬೊಮ್ಮಾಯಿ ಮತ್ತು ಬಿಜೆಪಿ ವಿರುದ್ಧ ಸಿಟ್ಟಾಗಿದೆ...

ಲಿಂಗಾಯತ, ಮುಸ್ಲಿಂ ಬಾಹುಳ್ಯ ಉಳ್ಳ ಶಿಗ್ಗಾಂವಿ ಕ್ಷೇತ್ರದಲ್ಲಿ ಈಗ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಹಣಾಹಣಿಯಿದ್ದು, 40 ವರ್ಷಗಳ ಬಳಿಕ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಶತಪ್ರಯತ್ನದಲ್ಲಿದೆ. ಬಿಜೆಪಿ, ಅದರಲ್ಲೂ ಬಸವರಾಜ ಬೊಮ್ಮಾಯಿ ಅವರು ತಮ್ಮ ಮಗನನ್ನು ಗೆಲ್ಲಿಸಿಕೊಂಡು, ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಹವಣಿಸುತ್ತಿದ್ದಾರೆ. ಈ ನಡುವೆ, ಪಂಚಮಸಾಲಿ ಸಮುದಾಯವು ಬಿಜೆಪಿ ವಿರುದ್ಧ ಹೋಗಬಹುದು ಎಂಬ ಮಾತುಗಳಿದ್ದು, ಬೊಮ್ಮಾಯಿ ಅವರಲ್ಲಿ ಆತಂಕವೂ ಮನೆ ಮಾಡಿದೆ.

ಶಿಗ್ಗಾಂವಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ. ಎರಡನೇ ಸ್ಥಾನದಲ್ಲಿ ಲಿಂಗಾಯತರಿದ್ದಾರೆ. ಕ್ಷೇತ್ರದಲ್ಲಿ ಯಾರು ಗೆಲ್ಲಬೇಕು ಎಂಬುದನ್ನು ನಿರ್ಧರಿಸುವಲ್ಲಿ ಈ ಎರಡು ಸಮುದಾಯಗಳ ಮತಗಳೇ ನಿರ್ಣಾಯಕ. ಕ್ಷೇತ್ರದ ಒಟ್ಟು ಲಿಂಗಾಯತರಲ್ಲಿ 70% ಪಂಚಮಸಾಲಿ ಸಮುದಾಯದವರೇ ಇದ್ದಾರೆ. ಇಷ್ಟು ದಿನ ಪಂಚಮಸಾಲಿ ಸಮುದಾಯವೂ ಸೇರಿದಂತೆ ಲಿಂಗಾಯತರು ಬೊಮ್ಮಾಯಿ ಜೊತೆಗಿದ್ದರು. ಮುಸ್ಲಿಂ ಸಮುದಾಯದೊಂದಿಗೆ ವಿಶ್ವಾಸ ಉಳಿಸಿಕೊಂಡಿದ್ದ ಕಾರಣಕ್ಕೆ ಮುಸ್ಲಿಮರಲ್ಲಿಯೂ ಗಣನೀಯ ಮತದಾರರು ಬೊಮ್ಮಾಯಿಗೆ ಮತ ಹಾಕುತ್ತಿದ್ದರು. ಆದರೆ, ಈ ಉಪಚುನಾವಣೆ ಎಲ್ಲವನ್ನು ಬುಡಮೇಲು ಮಾಡಿದೆ. ಬಿಜೆಪಿಗೆ ಮತಹಾಕದಿರಲು ಮುಸ್ಲಿಮರು ನಿರ್ಧರಿಸಿದ್ದರೆ, ತಮ್ಮ ಸಮುದಾಯದವರಿಗೆ ಟಿಕೆಟ್ ನೀಡದ ಕಾರಣ, ಬಿಜೆಪಿ ವಿರುದ್ಧ ಪಂಚಮಸಾಲಿಗಳು ಅಸಮಾಧಾನಗೊಂಡಿದ್ದಾರೆ.

ಬಸವರಾಜ ಬೊಮ್ಮಾಯಿ ಮೂಲತಃ ಶಿಗ್ಗಾಂವಿಯವರಲ್ಲ. ಹಾವೇರಿಯವರೂ ಅಲ್ಲ. ಪಕ್ಕದ ಜಿಲ್ಲೆ ಧಾರವಾಡದ ಹುಬ್ಬಳ್ಳಿಯವರು. ಅವರ ತಂದೆ ಎಸ್‌.ಆರ್ ಬೊಮ್ಮಾಯಿ ಅವರು ಹುಬ್ಬಳ್ಳಿ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಬೊಮ್ಮಾಯಿ ಅವರೂ ಹುಬ್ಬಳ್ಳಿಯಲ್ಲೇ ಬೆಳೆದವರು. ತಮ್ಮ ತಂದೆಯ ರಾಜಕೀಯ ಪ್ರಭಾವದೊಂದಿಗೆ ಬೆಳೆದ ಬಸವರಾಜ ಬೊಮ್ಮಾಯಿ ಜೆಡಿಎಸ್‌ನಿಂದ ವಿಧಾನಸಭಾ ಪರಿಷತ್‌ ಸದಸ್ಯರಾಗಿದ್ದರು. 2008ರಲ್ಲಿ ಬಿಜೆಪಿ ಸೇರಿದರು. ಅದೇ ಸಮಯದಲ್ಲಿ, (2008) ಕ್ಷೇತ್ರ ಮರುವಿಂಗಣೆಯಾದಾಗ ಅವರು ಶಿಗ್ಗಾಂವಿಗೆ ರಾಜಕೀಯ ವಲಸೆ ಹೋದರು. ಅಂದಿನಿಂದಲೂ ಶಿಗ್ಗಾಂವಿಯಲ್ಲಿ ನಿರಂತರವಾಗಿ ಬೊಮ್ಮಾಯಿ ಗೆಲ್ಲುತ್ತಲೇ ಬಂದಿದ್ದಾರೆ.

Advertisements

ಬೊಮ್ಮಾಯಿ ಅವರು ಲಿಂಗಾಯತರಲ್ಲಿ ‘ಸಮಗಾರ’ ಸಮುದಾಯಕ್ಕೆ ಸೇರಿದವರು. ಶಿಗ್ಗಾಂವಿ ಪಂಚಮಸಾಲಿ ಸಮುದಾಯ ಪ್ರಬಲವಾಗಿರುವ ಕ್ಷೇತ್ರ. ಆದರೂ, ‘ಸಮಗಾರ’ ಸಮುದಾಯದ ಬೊಮ್ಮಾಯಿ ಅವರನ್ನು ಶಿಗ್ಗಾಂವಿಯ ಪಂಚಮಸಾಲಿಗಳು ನಿರಂತರವಾಗಿ ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಅಧಿಕಾರ ಕೊಟ್ಟಿದ್ದಾರೆ. ಶಿಗ್ಗಾಂವಿಯಲ್ಲಿ ಗೆದ್ದ ಬೊಮ್ಮಾಯಿ, ಯಡಿಯೂರಪ್ಪ ನೇತೃತ್ವದ ಎರಡು ಸರ್ಕಾರಗಳಲ್ಲಿ ಸಚಿವರಾಗಿ, ಕೊನೆಗೆ ಮುಖ್ಯಮಂತ್ರಿಯೂ ಆಗಿದ್ದರು. ಆದರೆ, ಈವರೆಗೆ ಶಿಗ್ಗಾಂವಿಯಲ್ಲಿ ಬೊಮ್ಮಾಯಿ ತಮ್ಮ ಸ್ವಂತ ಮನೆಯನ್ನು ಹೊಂದಿಲ್ಲ. ಶಿಗ್ಗಾಂವಿಯ ಪ್ರತಿನಿಧಿಯಾಗಿ ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದಲೇ ಆಡಳಿತ ನಡೆಸಿದ್ದಾರೆ.

ಇನ್ನು, ಭರತ್ ಬೊಮ್ಮಾಯಿಗೆ ಶಿಗ್ಗಾಂವಿಯ ನೆಲವಾಗಲೀ, ರಾಜಕೀಯದ ಆಳ-ಅಗಲವಾಗಲೀ ಗೊತ್ತಿಲ್ಲ. ಸ್ವತಃ ಬಸವರಾಜ ಬೊಮ್ಮಾಯಿ ಅವರಿಗೇ ತಮ್ಮ ಪುತ್ರ ಇಷ್ಟು ಬೇಗ ರಾಜಕೀಯಕ್ಕೆ ಬರಬೇಕೆಂಬ ಹಂಬಲವಿರಲಿಲ್ಲ ಎಂದೂ ಹೇಳಲಾಗುತ್ತಿದೆ.

ಆದಾಗ್ಯೂ, ಬೊಮ್ಮಾಯಿ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಹಾವೇರಿಯಿಂದ ಗೆದ್ದು ಸಂಸದರೂ ಅಗಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ಬಿಜೆಪಿ ಈ ಬಾರಿ ಶಿಗ್ಗಾಂವಿಯವರೇ ಆದ, ಪಂಚಮಸಾಲಿ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎಂಬ ನಿರೀಕ್ಷೆಯಿತ್ತು. ಆ ಸಮುದಾಯದಲ್ಲಿ ಹಲವರು ಟಿಕೆಟ್‌ ಆಕಾಂಕ್ಷಿಗಳೂ ಇದ್ದರು. ಅವರಲ್ಲಿ, ಶ್ರೀಕಾಂತ್ ದುಂಡಿಗೌಡರ್ ಕೂಡ ಒಬ್ಬರು. ಬೊಮ್ಮಾಯಿ ಕೂಡ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಭರವಸೆಯನ್ನೂ ನೀಡಿದ್ದರು. ಆದರೆ, ಈಗ ಬೊಮ್ಮಾಯಿ ಅವರ ಪುತ್ರನಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ.

ಇದು, ಪಂಚಮಸಾಲಿ ಸಮುದಾಯದ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿದೆ. ಇಷ್ಟು ದಿನ ಬೆರಳೆಣಿಕೆಯಷ್ಟಿದ್ದ ಸಮಗಾರ ಸಮುದಾಯದ ಬೊಮ್ಮಾಯಿ ಅವರನ್ನು ಗೆಲ್ಲಿಸಿದ್ದರೂ, ಉಪಚುನಾವಣೆಯಲ್ಲೂ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್‌ ಕೊಟ್ಟಿಲ್ಲವೆಂದು ಪಂಚಮಸಾಲಿ ಸಮುದಾಯ ಆಕ್ರೋಶಗೊಂಡಿದೆ. ಸಮುದಾಯದ ಪ್ರಮುಖ ಮುಖಂಡರಾದ ಅನಿಲ ಪಾಟೀಲ, ಅಯ್ಯಪ್ಪ ಅಂಗಡಿ, ಮಹಾಂತೇಶ ನೆಲವಡಿ, ಸ್ವಾತಿ ಅಕ್ಕಿ, ಮಲ್ಲಿಕಾರ್ಜುನ ಕಿರೇಸೂರ ಬಹಿರಂಗವಾಗಿಯೇ ಅಸಮಧಾನಗೊಂಡಿದ್ದಾರೆ. ಮಾತ್ರವಲ್ಲ, ಶ್ರೀಕಾಂತ್ ದುಂಡಿಗೌಡರ್‌ ಕೂಡ ಮಾತು ತಪ್ಪಿದ ಬೊಮ್ಮಾಯಿಯ ಪುತ್ರನ ಪರವಾಗಿ ಪ್ರಚಾರಕ್ಕೆ ಹೋಗಿಲ್ಲ.

ಈ ವರದಿ ಓದಿದ್ದೀರಾ?: ಜೈಲಿಗೆ ಹೋಗಬೇಕಿರುವವರು ಯಾರು? ಹಾಲಿ ಮುಖ್ಯಮಂತ್ರಿಯಾ, ಮಾಜಿ ಮುಖ್ಯಮಂತ್ರಿಯಾ?

ಇನ್ನು, ಪಂಚಮಸಾಲಿ ಸಮುದಾಯದವರೇ ಆದ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಶಿಗ್ಗಾಂವಿಯಲ್ಲಿ ಭಾರೀ ಪ್ರಭಾವ ಹೊಂದಿದ್ದಾರೆ. ಬಿಜೆಪಿ ಕಾರ್ಪೊರೇಟರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ್‌ಗೆ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ, ಧಾರವಾಡ ಶಾಸಕರಾಗಿರುವ ವಿನಯ್, ಶಿಗ್ಗಾಂವಿಯಲ್ಲಿದ್ದುಕೊಂಡು ಧಾರವಾಡವನ್ನು ನಿರ್ವಹಿಸುತ್ತಿದ್ದರು. ಆ ಕಾರಣದಿಂದ, ಶಿಗ್ಗಾಂವಿಯಲ್ಲಿ ವಿನಯ್ ಕುಲಕರ್ಣಿ ತಮ್ಮ ಪ್ರಭಾವ ಬೆಳೆಸಿಕೊಂಡಿದ್ದಾರೆ.

ಹಾಗಾಗಿಯೇ, ಅವರ ಪುತ್ರಿ ವೈಶಾಲಿ ಕುಲಕರ್ಣಿಗೆ ಕಾಂಗ್ರೆಸ್‌ ಟಿಕೆಟ್ ಕೊಡಬೇಕೆಂಬ ಒತ್ತಾಯಗಳಿದ್ದವು. ಆದರೆ, ಕಾಂಗ್ರೆಸ್‌ ಯಾಸಿರ್​ ಅಹ್ಮದ್ ಖಾನ್​​ ಪಠಾಣ್ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯವೇ ಪ್ರಾಬಲ್ಯ ಹೊಂದಿರುವುದರಿಂದ ಪಠಾಣ್ ಅವರಿಗೆ ಕಾಂಗ್ರೆಸ್‌ ಟಿಕೆಟ್ ಕೊಟ್ಟಿದೆ. ಆದರೆ, ಪಠಾಣ್ ಗೆಲ್ಲುವ ಅಭ್ಯರ್ಥಿಯಲ್ಲ ಎಂಬ ಮಾತುಗಳಿವೆ. ಪಠಾಣ್‌ಗಿಂತ ಅಜ್ಜಂ ಪೀರ್ ಖಾದ್ರಿ ಅವರೇ ಕ್ಷೇತ್ರದಲ್ಲಿ ಹೆಚ್ಚು ಪ್ರಭಾವ ಹೊಂದಿದ್ದಾರೆ. ಅವರಿಗೆ ಟಿಕೆಟ್ ಕೊಡಬೇಕಿತ್ತು ಎಂಬುದು ಮುಸ್ಲಿಂ ಸಮುದಾಯದ ವಾದ.

ಅದೇನೇ ಇರಲಿ, ಶಿಗ್ಗಾಂವಿಯ ಮುಸ್ಲಿಮರು ಈ ಬಾರಿ ಬಿಜೆಪಿಗೆ ಅರ್ಥಾತ್ ಬೊಮ್ಮಾಯಿ ಪುತ್ರನಿಗೆ ಮತ ಹಾಕುವುದಿಲ್ಲವೆಂದು ನಿರ್ಧರಿಸಿದ್ದಾರೆ. ಇನ್ನು, ಬಿಜೆಪಗೆ ಹೆಚ್ಚಾಗಿ ಮತ ಹಾಕುತ್ತಿದ್ದ, ಬೊಮ್ಮಾಯಿ ಗೆಲುವಿಗೆ ಕೊಡುಗೆ ನೀಡುತ್ತಿದ್ದ ಪಂಚಮಸಾಲಿ ಸಮುದಾಯ ಕೂಡ ಶ್ರೀಕಾಂತ್‌ಗೆ ಟಿಕೆಟ್‌ ಕೊಡದ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದಾರೆ. ಇತ್ತ, ಕಾಂಗ್ರೆಸ್‌ ಕೂಡ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ, ಸಮುದಾಯವು ‘ನೋಟಾ’ಗೆ ಮತ ಚಲಾಯಿಸಲು ಯೋಚಿಸುತ್ತಿದೆ ಎಂಬ ಅಭಿಪ್ರಾಯಗಳು ಕ್ಷೇತ್ರದಲ್ಲಿವೆ.

ಪಂಚಮಸಾಲಿ ಸಮುದಾಯವು ನೋಟಾಗೆ ಮತ ಹಾಕಿದರೂ, ಅದು ಕಾಂಗ್ರೆಸ್‌ಗೆ ನೆರವಾಗುತ್ತದೆ. ಪಠಾಣ್ ಗೆಲ್ಲುತ್ತಾರೆ ಎನ್ನಲು ಸಾಧ್ಯವಿಲ್ಲ. ಕಾಂಗ್ರೆಸ್‌ ವಿರುದ್ಧ ಖಾದ್ರಿ ಬೆಂಬಲಿಗರ ಅಸಮಾಧಾನ ಮತ್ತು ಇತರ ಸಮುದಾಯಗಳ ಬಿಜೆಪಿ ಒಲವು ಕಾಂಗ್ರೆಸ್‌ಗೆ ಗೆಲ್ಲುವ ಹಾದಿಯನ್ನು ಕಠಿಣಗೊಳಿಸಿದೆ. ಗೆಲುವನ್ನು ಜಟಿಲವಾಗಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಜಾತಿಯ ಸಮಗಾರ ಎಂದು ಪದ ಪ್ರಯೋಗವಾಗಿದೆ. ಸಮಗಾರ ಅಲ್ಲ: ಸಾಧು ಲಿಂಗಾಯತ ಎಂದು ಕೇಳಿದ್ದೇನೆ… ಇನ್ನೂ ಬೊಮ್ಮಾಯಿ ಅವರು ಜೆಡಿಎಸ್ ನಿಂದ ಪರಿಷತ್ ಸದಸ್ಯರಾಗಿರಲಿಲ್ಲ: ಅವರು ಸಂಯುಕ್ತ ಜನತಾದಳದಿಂದ ಸದಸ್ಯರಾಗಿದ್ದರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X