ರಸ್ತೆ ಬದಿ ಜಗಳವಾಡುತ್ತ ನಿಂತಿದ್ದವರಿಗೆ ಬಿಎಂಟಿಸಿ ವೋಲ್ವೋ ಬಸ್ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.
ಮಂಗಳವಾರ ಮುಂಜಾನೆ, ಯಲಹಂಕ ಮೇಲುರಸ್ತೆಯಲ್ಲಿ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರು ಲಾರಿ ಚಾಲಕನೊಂದಿಗೆ ಜಗಳಕ್ಕಿಳಿದಿದ್ದಾರೆ. ಈ ವೇಳೆ, ವೇಗವಾಗಿ ಬಂದ ವೋಲ್ವೋ ಬಸ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ, ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕನನ್ನು ಆಸ್ಪತ್ರೆಗೆ ರವಾನಿಸಲಾದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮೃತರನ್ನು ಲಾರಿ ಚಾಲಕ ಕುಲದೀಪ್ ಕುಮಾರ್ (42) ಮತ್ತು ಕಾರು ಚಾಲಕ ಜಗದೀಶ್ (40) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ವೋಲ್ವೋ ಬಸ್ನ ಮುಂಭಾಗ ನಜ್ಜುಗುಜ್ಜಾಗಿದೆ. ಬಸ್ ಚಾಲಕ ಪುಟ್ಟಸ್ವಾಮಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.