ಅಂಗನವಾಡಿ | ಗುಜರಾತ್‌ ಹೈಕೋರ್ಟ್ ತೀರ್ಪು ಭರವಸೆಯ ಬೆಳಕಷ್ಟೇ; ಜಾರಿಗೆ ಇದೆ ನೂರೆಂಟು ಅಡೆತಡೆ

Date:

Advertisements

ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಅಂಗನವಾಡಿ) ಶುರುವಾಗಿ ಐವತ್ತು ವರ್ಷ ತುಂಬುತ್ತಿದೆ. ದೇಶದ ಕೋಟ್ಯಂತರ ಮಕ್ಕಳ ಪಾಲನೆ- ಪೋಷಣೆ ಮಾಡುತ್ತಿರುವ ಅಂಗನವಾಡಿ ಅಮ್ಮಂದಿರುವ ಮಾತ್ರ ಇನ್ನೂ ಸರ್ಕಾರಿ ನೌಕರರ ಸ್ಥಾನಮಾನ ಸಿಗದೇ, ಗೌರವ ಧನ ಮತ್ತು ಕನಿಷ್ಠ ಸೌಲಭ್ಯಗಳಿಂದ ದಿನದ ಆರು ಗಂಟೆಗೂ ಹೆಚ್ಚು ಕೆಲ ಕೆಲಸ ಮಾಡುತ್ತಿದ್ದಾರೆ.

ಗುಜರಾತ್‌ ಹೈಕೋರ್ಟ್‌ ಸೋಮವಾರ ಮಹತ್ವದ ತೀರ್ಪೊಂದನ್ನು ನೀಡಿದೆ. ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ಎಂದು ತೀರ್ಪು ನೀಡಿದ ನ್ಯಾಯ ಪೀಠ ಅಂಗನವಾಡಿ ಕಾರ್ಯಕರ್ತರಿಗೆ ಭರವಸೆಯ ಬೆಳಕೊಂದು ಇದೆ ಎಂಬುದನ್ನು ತೋರಿಸಿಕೊಟ್ಟಿದೆ.

ಜೊತೆಗೆ ಈ ಎರಡು ಹುದ್ದೆಗಳನ್ನು ಸರ್ಕಾರಿ ಸೇವೆಯಲ್ಲಿ ಸೇರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಆದೇಶ ಪ್ರಕಟವಾದ ಆರು ವಾರಗಳಲ್ಲಿ ನೀತಿಯೊಂದನ್ನು ರೂಪಿಸಬೇಕು. ಈ ನೀತಿಯ ಪರಿಣಾಮವಾಗಿ ದೇಶದ ಎಲ್ಲಾ ಅಂಗನವಾಡಿ ನೌಕರರಿಗೆ ಸರ್ಕಾರಿ ಪ್ರಯೋಜನಗಳು ದೊರೆಯುವಂತಾಗಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ.

Advertisements

ತೀರ್ಪು ಬಂದ ತಕ್ಷಣ ಹೆಚ್ಚು ಖುಷಿ ಪಡುವ ಅಥವಾ ಗೆದ್ದೆವು ಅಂದುಕೊಳ್ಳುವ ಪರಿಸ್ಥಿತಿ ಇಲ್ಲ. ಯಾಕೆಂದರೆ ಗುಜರಾತ್‌ ಸರ್ಕಾರ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗದೇ ಇರುವುದಿಲ್ಲ. ಅಲ್ಲಿ ಅದೆಷ್ಟು ಕಾಲ ವಿಚಾರಣೆ ನಡೆಯುತ್ತೋ ಗೊತ್ತಿಲ್ಲ. 2022ರ ಏಪ್ರಿಲ್‌ 25ರಲ್ಲಿ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ಆಗಿದೆ. ಆದರೆ, ಕೇಂದ್ರ ಸರ್ಕಾರ ದೇಶದ ಮಟ್ಟದಲ್ಲಿ ಇದನ್ನು ಜಾರಿ ಮಾಡಲು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಸಂಘಟನೆಗಳ ಹೋರಾಟದ ಫಲವಾಗಿ ಕರ್ನಾಟಕ ಸರ್ಕಾರ ಗ್ರಾಚ್ಯುಟಿ ಕೊಡುವ ಆದೇಶ ಮಾಡುವಂತಾಗಿದೆ. ಮಧ್ಯಪ್ರದೇಶದಲ್ಲಿ ಕನಿಷ್ಠ ವೇತನ ಕೊಡಬೇಕು ಎಂಬ ಕೋರ್ಟ್‌ ಆದೇಶ ಇದ್ದರೂ ಸರ್ಕಾರ ಕೊಟ್ಟಿಲ್ಲ.

ಯಾವುದೇ ದೇಶದಲ್ಲಿ ನೋಡಿದರೂ ಭಾರತದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಯಷ್ಟು ಸುದೀರ್ಘವಾದ ಹಾಗೂ ಬೃಹತ್‌ ಆದ ಯೋಜನೆ ಮತ್ತೊಂದಿಲ್ಲ. ಅಂಗನವಾಡಿ ಯೋಜನೆ ಶುರುವಾಗಿ ಐವತ್ತು ವರ್ಷ ತುಂಬುತ್ತಿದೆ. ದೇಶದ ಕೋಟ್ಯಂತರ ಮಕ್ಕಳ ಪಾಲನೆ -ಪೋಷಣೆ ಮಾಡುತ್ತಿರುವ ಅಂಗನವಾಡಿ ಅಮ್ಮಂದಿರು ಮಾತ್ರ ಇನ್ನೂ ಸರ್ಕಾರಿ ನೌಕರರ ಸ್ಥಾನಮಾನ ಸಿಗದೇ ಗೌರವ ಧನ ಮತ್ತು ಕನಿಷ್ಠ ಸೌಲಭ್ಯಗಳಿಂದ ದಿನದ ಆರು ಗಂಟೆಗೂ ಹೆಚ್ಚು ಕೆಲ ಕೆಲಸ ಮಾಡುತ್ತಿದ್ದಾರೆ. ಆದರೆ, ಸರ್ಕಾರಿ ನೌಕರರಿಗಿಂತ ಹೆಚ್ಚು ಜವಾಬ್ದಾರಿಯ ಹೊರೆ ಹೊತ್ತುಕೊಂಡಿದ್ದಾರೆ. ಮಕ್ಕಳು ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ಯೋಜನೆಯಿದ್ದರೂ ತಳಮಟ್ಟದಲ್ಲಿ ಅದರ ಜಾರಿಗೆ ಅಂಗನವಾಡಿ ಕಾರ್ಯಕರ್ತೆಯರು ಬೇಕು.

ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವ ಧನ ಬೇರೆ ಬೇರೆ ರೀತಿಯಲ್ಲಿದೆ. ಅಂಗನವಾಡಿಗಳದ್ದು ಒಂದು ದಾಖಲೆಯಾದರೆ, ಹೋರಾಟಗಳದ್ದೇ ಮತ್ತೊಂದು ದಾಖಲೆ. ಕರ್ನಾಟಕದಲ್ಲೂ ಆಗಾಗ ಅಂಗನವಾಡಿ ಅಮ್ಮಂದಿರು ಪ್ರತಿಭಟನೆ ಮಾಡುತ್ತಿರುತ್ತಾರೆ. ಡಿಸೆಂಬರ್‌ ಚಳಿಗೂ ಅಂಗನವಾಡಿ ಹೋರಾಟಕ್ಕೂ ಬಿಡಿಸಲಾರದ ನಂಟಿದೆ. ಕಳೆದ ಡಿಸೆಂಬರ್‌ನಲ್ಲೂ ಅಂಗನವಾಡಿ ಸಂಘಟನೆಗಳ ಅನಿರ್ದಿಷ್ಟಾವಧಿ ಧರಣಿ ನಡೆದಿತ್ತು. ಅದರ ಫಲವಾಗಿ ರಾಜ್ಯ ಸರ್ಕಾರ ನೀಡುವ ಗೌರವ ಧನದ ತನ್ನ ಪಾಲಿನಲ್ಲಿ 2000 ರೂಪಾಯಿ ಹೆಚ್ಚಳ ಮಾಡಿತ್ತು. ಇನ್ನೂ ಕೆಲವು ಬೇಡಿಕೆಗಳ ಈಡೇರಿಕೆಗೆ ಸಂಘಟನೆಗಳು ಪಟ್ಟು ಹಿಡಿದಿದ್ದವು. ಅದರ ಈಡೇರಿಕೆಗಾಗಿ ಈ ಡಿಸೆಂಬರ್‌ನಲ್ಲಿ ಹೋರಾಟ ನಡೆಸಲು ಸಂಘಟನೆಗಳು ಈಗಲೇ ಸಿದ್ಧತೆ ನಡೆಸುತ್ತಿವೆ. ಡಿಸೆಂಬರ್‌ ಯಾಕೆಂದರೆ ಆಗ ವಿಧಾನ ಮಂಡಲಗಳ ಚಳಿಗಾಲದ ಅಧಿವೇಶನ ನಡೆಯುತ್ತಿರುತ್ತದೆ. ಅದೇ ಕಾಲದಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಹೋರಾಟಗಳು ನಡೆಯುತ್ತವೆ.

ಸವಾಲುಗಳೇನು? : ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕಿದ್ದರೆ 1948ರ ಕಾಯ್ದೆ ಪ್ರಕಾರ ಯಾವುದಾದರೂ ಒಂದು ಸರ್ಕಾರದ ಅಡಿಯಲ್ಲಿರಬೇಕು. ಆದರೆ ಅಂಗನವಾಡಿ (ಐಸಿಡಿಎಸ್‌) ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲಿ ನಡೆಯುತ್ತದೆ. ಹಾಗಾಗಿ ಕಾಯ್ದೆ ತಿದ್ದುಪಡಿ ಆಗಬೇಕು. ಒಂದು ಸರ್ಕಾರ ಜವಾಬ್ದಾರಿ ಹೊರಬೇಕು. ಅದಾಗದೇ ನೌಕರರು ಎಂದು ಪರಿಗಣಿಸುವುದು ಅಸಾಧ್ಯ.

ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪರ ಬಹಳ ವರ್ಷಗಳಿಂದ ಹೋರಾಟ ಸಂಘಟಿಸುತ್ತಿರುವ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌ ವರಲಕ್ಷ್ಮಿ ಗುಜರಾತ್‌ ಹೈಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದ್ದಾರೆ. ಈದಿನ.ಕಾಮ್‌ ಜೊತೆ ಮಾತನಾಡಿದ ಅವರು, “ತೀರ್ಪನ್ನು ಸ್ವಾಗತಿಸುತ್ತೇವೆ. ಒಂದು ರಾಜ್ಯದ ಹೈಕೋರ್ಟ್‌ ಈ ತೀರ್ಪು ಕೊಟ್ಟಿದೆ ಎಂದರೆ 50 ವರ್ಷಗಳ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕೆಲಸವನ್ನು ಗುರುತಿಸಿದ್ದಾರೆ ಎಂದೇ ಅರ್ಥ” ಎಂದರು.

“ಅಂಗನವಾಡಿ ಮೂಲಕ ಮಹಿಳೆ ಮತ್ತು ಮಕ್ಕಳಿಗೆ ಸಂವಿಧಾನದ ಮೂಲಭೂತ ಹಕ್ಕು ಲಭಿಸಿದೆ. ಮಕ್ಕಳ ಪಾಲನೆ-ಪೋಷಣೆ ಹೆತ್ತವರ ಜವಾಬ್ದಾರಿ ಮಾತ್ರವಲ್ಲ, ಅದು ಸಮಾಜದ ಜವಾಬ್ದಾರಿ. ಆದರೆ ಅದಕ್ಕೆ ಕಾನೂನು ಮಾಡಿಲ್ಲ. ಹಾಗಾಗಿ ಅದು ಸ್ಕೀಂ ಆಗಿಯೇ ಉಳಿದಿದೆ. 2009ರ ಶಿಕ್ಷಣದ ಹಕ್ಕು ಕಾಯ್ದೆ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕು ಎಂದು ಹೇಳಿದೆ. ಹಾಗಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಅಂಗನವಾಡಿಗಳೂ ಆ ವ್ಯಾಪ್ತಿಗೆ ಸೇರುತ್ತವೆ. 2013ರ ಆಹಾರ ಭದ್ರತಾ ಕಾಯ್ದೆಯಡಿ ಅಂಗನವಾಡಿಗಳಿಗೆ ಆಹಾರ ಪೂರೈಕೆಯಾಗುತ್ತಿದೆ. ಶಿಕ್ಷಣ ಮತ್ತು ಆಹಾರ ಎರಡನ್ನೂ ಅಂಗನವಾಡಿಗಳು ಪೂರೈಸುತ್ತಿವೆ. ಅತ್ತ ಕಾಯ್ದೆಯ ಜಾರಿ, ಇತ್ತ ಸಂವಿಧಾನದ ಹಕ್ಕು ಎರಡೂ ಸಾಕಾರವಾಗುತ್ತಿದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ಹಾನರರಿ ಎನಿಸಿಕೊಂಡಿದ್ದಾರೆ. ಒಂದು ರಾಜ್ಯದ ಹೈಕೋರ್ಟ್‌ ತೀರ್ಪು ನೀಡಿದರೆ ಸಾಲದು. ಸುಪ್ರೀಂ ಕೋರ್ಟ್‌ ತೀರ್ಪು ಕೊಟ್ಟರೆ ಮಾತ್ರ ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಅಥವಾ ಕೇಂದ್ರ ಸರ್ಕಾರವೇ ಅಂತಹದೊಂದು ನಿರ್ಧಾರ ಮಾಡಿದರೆ ಮಾತ್ರ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಡಿಸೆಂಬರ್‌ನಿಂದ ಮತ್ತೆ ಶುರುವಾಗಲಿದೆ” ಎಂದು ಅವರು ಹೇಳಿದರು.

ಅಂಗನವಾಡಿ

ಸ್ವತಂತ್ರ ಭಾರತದ ಚರಿತ್ರೆಯಲ್ಲಿ ಸುಮಾರು 11 ಕೋಟಿ ಫಲಾನುಭವಿಗಳನ್ನು ಹೊಂದಿದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ 7074 ಬ್ಲಾಕುಗಳಲ್ಲಿ, 13.96.864 ಗ್ರಾಮಾಂತರ, ಗುಡ್ಡಗಾಡು, ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದೆ. 1975ರಲ್ಲಿ ಈ ಯೋಜನೆ ಪ್ರಾರಂಭವಾದಾಗ ತಾಯಂದಿರ ಮರಣ ದರ 1 ಲಕ್ಷಕ್ಕೆ 852, ಮಕ್ಕಳ ಮರಣ ದರ 1000ಕ್ಕೆ 134 ಇದ್ದದ್ದು 2016ರಲ್ಲಿ ತಾಯಂದಿರ ಮರಣ ದರ 113, ಮಕ್ಕಳ ಮರಣ ದರ 41ಕ್ಕೆ ಇಳಿದಿದೆ. ಕರ್ನಾಟಕ ರಾಜ್ಯದಲ್ಲಿ ತಾಯಂದಿರ ಮರಣ ದರ 70, ಮಕ್ಕಳ ಮರಣ ದರ 14ಕ್ಕೆ ಇಳಿದಿದೆ.

2025ಕ್ಕೆ 50 ವರ್ಷ!: ರಾಜ್ಯ ನಿರ್ದೇಶನ ತತ್ವಗಳ ಭಾಗವಾದ ಸಂವಿಧಾನದ ಆರ್ಟಿಕಲ್ 47ರಲ್ಲಿ “ಪೌಷ್ಟಿಕತೆಯ ಮಟ್ಟವನ್ನು, ಜೀವನ ಮಟ್ಟವನ್ನು ಹೆಚ್ಚಿಸುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ಪ್ರಭುತ್ವದ ಜವಾಬ್ದಾರಿಯಾಗಿದೆ”. ಈ ಆಹಾರವನ್ನು ಖಾತ್ರಿಗೊಳಿಸಲಿಕ್ಕಾಗಿಯೇ ಆಹಾರ ಭದ್ರತಾ ಕಾಯ್ದೆ 2013ರ ಕಾಯ್ದೆಯನ್ನು ಜಾರಿಗೆ ತಂದ ನಂತರ ಕ್ಷೇಮಾಭಿವೃದ್ಧಿಯ ದೃಷ್ಟಿಕೋನವನ್ನು ಕೈಬಿಟ್ಟು ಆಹಾರವನ್ನು ಪ್ರಜೆಗಳ ಹಕ್ಕು ಎಂದು ಪರಿಗಣಿಸಲಾಯಿತು. ಈ ಕಾಯ್ದೆಯ ಪ್ರಕಾರ ಅಂಗನವಾಡಿ ಕೇಂದ್ರಗಳ ಮೂಲಕ ತಾಯಂದಿರಿಗೆ ಪೂರಕ ಪೌಷ್ಟಿಕ ಆಹಾರದ ಹಕ್ಕು ಸಿಕ್ಕಂತಾಯಿತು.

ಯೋಜನೆಯ ಹಿನ್ನಲೆ : ಮೊದಲನೇ ಮಹಾಯುದ್ಧದ ನಂತರ ಉಂಟಾದ ಹಿಂಸೆ ಮತ್ತು ದಂಗೆಯಿಂದ ಸಮಾಜವನ್ನು ರಕ್ಷಿಸಲು ಅಂದು ಹೊಸದಾಗಿ ರೂಪುಗೊಂಡ ಲೀಗ್ ಆಫ್ ನೇಷನ್ ನಿಂದ 1919ರಲ್ಲಿ ಮಕ್ಕಳ ಕಲ್ಯಾಣ ಸಮಿತಿಯನ್ನು ರಚಿಸಲಾಯಿತು. 1924 ರಲ್ಲಿ ಜಿನಿವಾ ಘೋಷಣೆಯನ್ನು ಅಂಗೀಕರಿಸಿ, 10 ಹಕ್ಕುಗಳನ್ನು ಘೋಷಿಸಲಾಯಿತು. 1959ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 78 ಸದಸ್ಯ ರಾಷ್ಟ್ರಗಳು ಸರ್ವಾನುಮತದಿಂದ “ಮನುಕುಲವು ಮಗುವಿಗೆ ಅತ್ಯುತ್ತಮವಾದದ್ದನ್ನು ನೀಡಬೇಕಾಗಿದೆ” ಎಂಬ ಕಲ್ಪನೆ ಪುನರುಚ್ಚರಿಸಿತು. ಇದರಲ್ಲಿ 5 ಹಕ್ಕುಗಳನ್ನು ವಿಸ್ತರಿಸಿತು. 1979 ಅನ್ನು ಅಂತಾರಾಷ್ಟ್ರೀಯ ಮಕ್ಕಳ ವರ್ಷ ಎಂದೂ ಘೋಷಣೆ ಮಾಡಲಾಯಿತು. ಭಾರತದಲ್ಲಿ 1945, 1954, 1957 ರಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ಹೆಚ್ಚುವರಿ ಪೌಷ್ಟಿಕಾಂಶ ಕೊಡುವುದು ಸಂಯೋಜಿತ ಕಲ್ಯಾಣ ವಿಸ್ತರಣಾ ಯೋಜನೆ, 1967ರಲ್ಲಿ ಅನ್ವಯತೆ (ಅನ್ವಯಿಕ) ಪೌಷ್ಟಿಕ ಕಾರ್ಯಕ್ರಮ, 1970 ರಲ್ಲಿ ವಿಶೇಷ ಪೌಷ್ಟಿಕತೆ ಕಾರ್ಯಕ್ರಮ, ಬಾಲವಾಡಿ ಪೌಷ್ಟಿಕತಾ ಕಾರ್ಯಕ್ರಮಗಳು ಪ್ರಾರಂಭಗೊಂಡವು. ಈ ಕಾರ್ಯಕ್ರಮಗಳಿಂದ ಶಿಶು ಮರಣ ಮತ್ತು ಮಕ್ಕಳ ಅಪೌಷ್ಟಿಕತೆಗೆ ತೃಪ್ತಿಕರ ಪರಿಹಾರ ನೀಡಲು ಸಾಧ್ಯವಾಗಲಿಲ್ಲ. ಆಗ 1974 ಮಕ್ಕಳ ರಾಷ್ಟ್ರೀಯ ನೀತಿಯನ್ನು ತರಲಾಯಿತು. ಈ ನೀತಿಯಲ್ಲಿ ʼರಾಷ್ಟ್ರೀಯ ಪರಮೋಚ್ಚ ಮತ್ತು ಅತಿ ಮುಖ್ಯ ಸಂಪತ್ತುʼ ಎಂದು ಪರಿಗಣಿಸಲಾಯಿತು. ಇದರ ಭಾಗವಾಗಿ 1975ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಯೋಜನೆಯನ್ನು ಪ್ರಾರಂಭಿಸಲಾಯಿತು.

ಐಸಿಡಿಎಸ್‌ ನ ಉದ್ದೇಶ ಮತ್ತು ಸೇವೆಗಳು : 6 ವರ್ಷದೊಳಗಿನ ಮಕ್ಕಳ ಆರೋಗ್ಯ, ಪೌಷ್ಟಿಕ ಮಟ್ಟ ವೃದ್ಧಿ, ಮಗುವಿನ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ, ಮಕ್ಕಳ ಅನಾರೋಗ್ಯ, ಅಪೌಷ್ಟಿಕತೆ ಮತ್ತು ಸಾವನ್ನು ತಡೆಗಟ್ಟುವುದು. ಸೇವೆಗಳಲ್ಲಿ ಪೂರಕ ಪೌಷ್ಟಿಕ ಆಹಾರ, ಚುಚ್ಚು ಮದ್ದು, ಆರೋಗ್ಯ ತಪಾಸಣೆ, ಶಾಲಾ ಪೂರ್ವ ಶಿಕ್ಷಣ, ಆರೋಗ್ಯ ಶಿಕ್ಷಣವನ್ನು ಕೊಡುವುದು. ರಾಜ್ಯದಲ್ಲಿ ಇಂದು 3 ತಿಂಗಳಿಂದ 3 ವರ್ಷದೊಳಗೆ 20.63.392, 3 ರಿಂದ 6 ವರ್ಷದೊಳಗೆ 15.44.003, ಗರ್ಭಿಣಿ-ಬಾಣಂತಿಯರು ಸೇರಿ 8.10.845 ಫಲಾನುಭವಿಗಳಿದ್ದಾರೆ. ರಾಜ್ಯದಲ್ಲಿ ಇಂದಿಗೂ 0.16% ತೀವ್ರ ಅಪೌಷ್ಟಿಕತೆ, 5.48% ಸಾಧಾರಣ ಅಪೌಷ್ಟಿಕತೆ, ಲಿಂಗ ಪ್ರಮಾಣ 968 ಇದೆ.

ಅಂಗನವಾಡಿ 11
ಅಂಗನವಾಡಿ ಕೇಂದ್ರದಲ್ಲಿರುವ ಕಲಿಕಾ ಸಾಮಾಗ್ರಿಗಳು

ಐಸಿಡಿಎಸ್‌ನ ಮೇಲಿನ ದಾಳಿಗಳು : 1974ರ ಮಕ್ಕಳ ರಾಷ್ಟ್ರೀಯ ನೀತಿ ಪ್ರತಿಪಾದಿಸಿದಂತೆ ಮಕ್ಕಳನ್ನು “ರಾಷ್ಟ್ರೀಯ ಪರಮೋಚ್ಚ ಮತ್ತು ಅತಿ ಮುಖ್ಯ ಸಂಪತ್ತು” ಎಂದು ಪರಿಗಣಿಸಲಾಯಿತು. ಇದರ ಭಾಗವಾಗಿ ಬಂದ ICDS ಯೋಜನೆಯಾಗಿ ಪ್ರಾರಂಭಿಸಿ, ಅದೇ ರೀತಿ ಇಂದಿಗೂ ಮುನ್ನಡೆಸಲಾಗುತ್ತಿದೆ.

  • ಸಮಾಜದ ಪುನರ್ ಉತ್ಪಾದನೆಯಾಗಬೇಕಾದರೆ ಮಕ್ಕಳ ಸಂರಕ್ಷಣೆ ಆಗಬೇಕು. ಆದರೆ ನಮ್ಮ ಸರ್ಕಾರಗಳು ಮಕ್ಕಳಿಗಾಗಿ ರೂಪಿಸಿದ ಕಾರ್ಯಕ್ರಮಗಳನ್ನು ಯೋಜನೆಯನ್ನಾಗಿ ಪರಿವರ್ತಿಸಿದವು. ಹಾಗಾಗಿ ಅಂದಿನಿಂದ ಇಂದಿನವರೆಗೂ ಕರುಣೆಯಿಂದ ನೀಡುವ ಸೇವೆ ಎಂಬುದಾಗಿ ಪರಿಗಣಿಸಲಾಗುತ್ತದೆ.
  • ಈ ಯೋಜನೆಯ ಕೆಲವು ಮೂಲಭೂತ ಸೌಕರ್ಯಗಳಿಗೆ ಹಣಕಾಸು ಒದಗಿಸುವ ಸಲುವಾಗಿ ICDS ಅನ್ನು ಮಿಷನ್ ಮೋಡ್ ಆಗಿ ಬದಲಾಯಿಸಿ, ಇದರ ನಿರ್ವಹಣೆಯಲ್ಲಿ ಖಾಸಗಿ ಸಂಸ್ಥೆಗಳಿಗೆ ಒಳಗೊಳ್ಳಲು ಅವಕಾಶ ಮಾಡಿ ಕೊಡಲಾಯಿತು. ಇದರಿಂದಾಗಿ ಅಂಗನವಾಡಿ ಕೇಂದ್ರಗಳ ನಿರ್ವಹಣೆ ಮತ್ತು ಪೌಷ್ಟಿಕ ಆಹಾರದಲ್ಲಿ ವ್ಯಾಪಕವಾಗಿ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಅವಕಾಶ ಮಾಡಿಕೊಡಲು ರಹದಾರಿಯಾಯಿತು. 2009ರಲ್ಲಿ ಒಕ್ಕೂಟ ಸರ್ಕಾರದ ಮೈಕ್ರೋನ್ಯೂಟ್ರಿಯೆಂಟ್ಸ್ ಉಳ್ಳ ಫೋರ್ಟಿಫೈಡ್ ಆಹಾರ ಕೊಡಬೇಕೆಂಬ ಆದೇಶದ ಮೇಲೆ ಪೂರಕ ಪೌಷ್ಟಿಕ ಆಹಾರ, ಸ್ಥಳೀಯ ಆಹಾರ, ಜೊತೆಗೆ ಈ ಹೆಸರಿನಲ್ಲಿ ರೆಡಿಮೇಡ್ ಆಹಾರವನ್ನು ಕೊಡುವಂತಾಯಿತು. 2017ರಲ್ಲಿ ಘಟಕ ವೆಚ್ಚ 8-12 ರೂಗಳು ಇದ್ದದ್ದು ಇದೂವರೆಗೂ ಹೆಚ್ಚಳ ಮಾಡಲಿಲ್ಲ. (ತೀವ್ರ ಅಪೌಷ್ಟಿಕತೆಗೆ – 12 ರೂ, ಸಾದಾರಣ – 8 ರೂ, ಗರ್ಭಿಣಿ ಬಾಣಂತಿ – 10 ರೂ). ಒಂದಡೆ ವಿಪರೀತ ಬೆಲೆಯೇರಿಕೆ, ಅಂಗನವಾಡಿ ಕೇಂದ್ರಗಳ ಕಂದಮ್ಮಗಳಿಗೆ ಪೂರೈಸುವ ಆಹಾರ ಪದಾರ್ಥಗಳ ಮೇಲೂ ಮತ್ತು ಈಗಿರುವಾಗ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡಬೇಕಿದೆ. ರಾಜ್ಯದಲ್ಲಿ ಮಾತೃಪೂರ್ಣ ಯೋಜನೆಯನ್ನೊಳಗೊಂಡು 45 ಲಕ್ಷ ಫಲಾನುಭವಿಗಳಿಗೆ ಸುಮಾರು 2000 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗುಣಮಟ್ಟವನ್ನು ಖಾತ್ರಿ ಪಡಿಸಲು ಹೇಗೆ ಸಾಧ್ಯ?
ಅಂಗನವಾಡಿ ಮಕ್ಕಳು

ಅನುದಾನಗಳ ಕೊರತೆ : 9ನೇ ಪಂಚವಾರ್ಷಿಕ ಯೋಜನೆ “ಮಕ್ಕಳ ಅಭಿವೃದ್ಧಿಗೆ ಹಣದ ಹೂಡಿಕೆಯನ್ನು ದೇಶದ ಭವಿಷ್ಯಕ್ಕೆ ಒಂದು ಅಪೇಕ್ಷಣೀಯ ಸಾಮಾಜಿಕ ಹೂಡಿಕೆ” ಎಂದು ಕಾಣಬಾರದು. ಪ್ರತಿಯೊಂದು ಮಗುವು ತನ್ನ ಪೂರ್ಣ ಸಾಮರ್ಥ್ಯವನ್ನು ಸಾಧಿಸುವಂತೆ, ಬದುಕುಳಿಯುವ ರಕ್ಷಣೆಯ ಮತ್ತು ಅಭಿವೃದ್ಧಿಯ ಹಕ್ಕುಗಳ ಈಡೇರಿಕೆ ಎಂದು ಕಾಣಬೇಕು. “ಲಿಂಗಾನುಪಾತ ಪ್ರತಿಕೂಲವಾಗಿರುವುದನ್ನು ಸರಿಪಡಿಸಿ ಯಾವುದೇ ಲಿಂಗ ಭೇದವಿಲ್ಲದೆ ಅಥವಾ ಬೇರೆ ಸಾಮಾಜಿಕ ಪಕ್ಷಪಾತವಿಲ್ಲದೆ ಪ್ರತಿಯೊಂದು ಮಗುವನ್ನು ತರುವುದು” ಎಂದಿದೆ.

  • 2001ರಲ್ಲಿ ಸುಪ್ರಿಂಕೋರ್ಟ್ ಅಂಗನವಾಡಿ ಕೇಂದ್ರಗಳ ಸಾರ್ವತ್ರೀಕರಣಕ್ಕೆ ಮಧ್ಯಂತರ ತೀರ್ಪು ಕೊಟ್ಟಿದೆ. 2015ರಲ್ಲಿ ನೀತಿ ಆಯೋಗದ ಶಿಫಾರಸ್ಸಿನಂತೆ 60:40ರ ಅನುಪಾತದಲ್ಲಿ ಅನುದಾನಗಳು ಬದಲಾಯಿತು. ಇದರಿಂದಾಗಿ 8452.38 ಕೋಟಿ ಕಡಿತವಾಯಿತು. ಮಾತ್ರವಲ್ಲದೇ ಒಕ್ಕೂಟ ಸರ್ಕಾರ ತನ್ನ ಪಾಲಿನ ಹಣವನ್ನು ಸಮಯಕ್ಕೆ ಸರಿಯಾಗಿ ಕೊಡದೇ APIP (Administrative Approval of Annual Programme Implementation Plan)ಪ್ರತಿ ವರ್ಷ ಸಭೆ ನಡೆಸಿ ವರ್ಷಕ್ಕೆ 4 ಕಂತಿನಲ್ಲಿ ಹಣ ಬಿಡುಗಡೆ ಮಾಡುವುದರಿಂದ ಸಮಯಕ್ಕೆ ಸರಿಯಾಗಿ ಸೇವೆಗಳನ್ನು ನೀಡುವುದರಲ್ಲಿ ವ್ಯತ್ಯಯ ಆಗುತ್ತಿದೆ.
  • ಇದರಿಂದಾಗಿ ಅಂಗನವಾಡಿ ಕೇಂದ್ರಗಳ ಮೂಲಭೂತ ಸೌಕರ್ಯಗಳ ಮೇಲೆ ಹಾಗೂ ಅಂಗನವಾಡಿ ನೌಕರರ ಗೌರವ ಧನದ ಪಾವತಿಯ ಮೇಲೂ ಪರಿಣಾಮ ಬೀರುತ್ತಿದೆ. ಇದರಿಂದಾಗಿ 1974ರ ಮಕ್ಕಳ ರಾಷ್ಟ್ರೀಯ ನೀತಿಯ ಉದ್ದೇಶ ಮತ್ತು ಪಂಚವಾರ್ಷಿಕ ಯೋಜನೆಗಳ ಉದ್ದೇಶಕ್ಕೆ ವ್ಯತಿರಿಕ್ತವಾಗಿರುವುದನ್ನು ಕಾಣಬಹುದಾಗಿದೆ.

ಪೂರ್ವ ಪ್ರಾಥಮಿಕ ಶಿಕ್ಷಣ ಹಕ್ಕಾಗಲಿ: 1975ರ ಐಸಿಡಿಎಸ್‌ ಮಾರ್ಗದರ್ಶಿ ಸೂತ್ರಗಳಲ್ಲಿ ವಿವರಿಸಿದಂತೆ ಐಸಿಡಿಎಸ್‌ನ 5 ಪ್ರಮುಖ ಸೇವೆಗಳಲ್ಲಿ ಒಂದು ಪೂರ್ವ ಪ್ರಾಥಮಿಕ ಶಿಕ್ಷಣ. ಯೋಜನೆ ಪ್ರಾರಂಭವಾದಾಗಲೇ ಈ ಸೇವೆಯನ್ನು ಗುರಿಯಾಗಿಸಿಕೊಂಡಿದ್ದರೆ ಬಹುಶಃ ಇಂದು ಈ ವಿಷಯ ಹೆಚ್ಚು ಚರ್ಚೆಯಾಗುತ್ತಿರಲಿಲ್ಲ. ಆದರೆ ಅಂದು ಅಂಗನವಾಡಿ ಕೇಂದ್ರಗಳನ್ನು ಪಾಲನೆ – ಪೋಷಣೆಗೆ ಮಾತ್ರವೇ ಹೆಚ್ಚಿನ ಒತ್ತು ಕೊಟ್ಟಿದ್ದರಿಂದ ಇಂದು ಅಂಗನವಾಡಿ ಕೇಂದ್ರಗಳು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ವ್ಯಾಖ್ಯಾನಿಸಲಾಗುತ್ತದೆ.

WhatsApp Image 2024 02 12 at 2.23.41 PM
  • 1990ರಿಂದ ಎಲ್ಲರಿಗೂ ಶಿಕ್ಷಣ ಎಂಬುದನ್ನು ವಿಶ್ವಸಂಸ್ಥೆ ಪ್ರತಿಪಾದಿಸಿದೆ. 2015 ಕಾನೂನು ಆಯೋಗದ ವರದಿ 259ರಲ್ಲಿ ಬಹಳ ಸ್ಪಷ್ಟವಾಗಿ “3-6 ವರ್ಷದ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಬೇಕು” ಎಂಬ ಶಿಫಾರಸ್ಸನ್ನು ಮಾಡಿದೆ. ವಾದಿ ಉನ್ನಿಕೃಷ್ಣನ್ -ಪ್ರತಿವಾದಿ ಆಂಧ್ರಪ್ರದೇಶ ರಾಜ್ಯದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಮತ್ತು ಭಾರತದ ಸಂವಿಧಾನದ 21ನೇ ಮತ್ತು 45ನೇ ವಿಧಿಯ ಹಿಂದಿನ ಆಶಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 11ಅನ್ನು ಕಡ್ಡಾಯಗೊಳಿಸಬೇಕು. 3 ವರ್ಷಕ್ಕಿಂತ ಮೇಲ್ಪಟ್ಟು ಮಕ್ಕಳನ್ನು ಪ್ರಾಥಮಿಕ ಶಿಕ್ಷಣಕ್ಕಾಗಿ ತಯಾರು ಮಾಡುವ ಉದ್ದೇಶದಿಂದ ಮತ್ತು 6 ವರ್ಷ ವಯಸ್ಸನ್ನು ಪೂರ್ಣಗೊಳಿಸುವವರೆಗೂ ಎಲ್ಲ ಮಕ್ಕಳಿಗೆ ಬಾಲ್ಯದ ಆರೈಕೆ ಲಭಿಸಬೇಕು ಎಂದಿದೆ.
  • ಸುಪ್ರ್ರೀಂ ಕೋರ್ಟ್ ಆದೇಶ ಭಾರತ ಸರ್ಕಾರವು 1997ರ ಏಪ್ರಿಲ್ 3ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಾಯಿದೆ 1972ರ ಸೆಕ್ಷನ್ 1, ಉಪಸೆಕ್ಷನ್ (3) ಅಂಶ (ಸಿ) ಯಲ್ಲಿ ಹೇಳಿರುವಂತೆ ಸ್ಥಾಪಿತ ಸಂಸ್ಥೆಗಳೆಂದು ಘೋಷಿಸಿದೆ. ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಯನ್ನು ನಡೆಸಲಾಗುತ್ತಿದೆ. ಇದು ಪರಿಪೂರ್ಣವಾದ ಶೈಕ್ಷಣಿಕ ಚಟುವಟಿಕೆ. ಶಿಕ್ಷಣ ನೀಡುವ ಕೆಲಸವನ್ನು ಕಾರ್ಯಕರ್ತರು ಮತ್ತು ಸಹಾಯಕರು ಮಾಡುತ್ತಿದ್ದಾರೆ. ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 11 ರ ಅನುಸಾರ ರಾಜ್ಯ ಸರ್ಕಾರವು ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿದೆ ಎಂದು ಸುಪ್ರಿಂ ಕೋರ್ಟ್ 2022 ಏಪ್ರಿಲ್ 25ರಂದು ಅಂಗನವಾಡಿ ನೌಕರರಿಗೂ ಗ್ರಾಜ್ಯುಟಿ ಕಾಯ್ದೆ ಅನ್ವಯವಾಗುತ್ತದೆ ಎಂಬ ತೀರ್ಪನ್ನು ಕೊಟ್ಟ ಆದೇಶದಲ್ಲಿ ಪ್ರತಿಪಾದಿಸಿದೆ.
  • ಮಕ್ಕಳು 6 ವರ್ಷ ಪೂರೈಸುವವರೆಗೂ ಶಿಶು ಸಂರಕ್ಷಣೆ ಸೌಲಭ್ಯಗಳು ಮತ್ತು ಶಿಕ್ಷಣವನ್ನು ಒದಗಿಸಲುರಾಜ್ಯವು ಶ್ರಮ ವಹಿಸಬೇಕು ಎನ್ನುತ್ತಿದೆ ಆರ್ಟಿಕಲ್ 45 ಶಿಶು ಆರೈಕೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದಹಕ್ಕುಗಳು ಸಂವಿಧಾನದ ಆಶಯ.
  • 2009ರ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯು 3 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳನ್ನು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಸಜ್ಜುಗೊಳಿಸಲು ಎಲ್ಲಾ ಮಕ್ಕಳು 6 ವರ್ಷ ಪೂರೈಸುವವರಿಗೆ ಶಿಶು ಆರೈಕೆ ಮತ್ತು ಶಿಕ್ಷಣವನ್ನು ಉಚಿತವಾಗಿ ಒದಗಿಸಲು ಸರ್ಕಾರವು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದೆ.
  • ಪೂರ್ವ ಪ್ರಾಥಮಿಕ ಶಿಕ್ಷಣದ ಕುರಿತು ಪ್ರಭುತ್ವಗಳು ಕಾನೂನು ರೂಪಿಸಬೇಕಿದೆ. ಮಾತ್ರವಲ್ಲದೆ 4 ರಿಂದ 6 ವರ್ಷದ ಮೇಲಿನ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಂದ ಪ್ರತ್ಯೇಕಿಸಿದರೆ ICDS ಯೋಜನೆ ಕ್ರಮೇಣ ಬಲಹೀನವಾಗಬಹುದು. 6 ವರ್ಷದೊಳಗಿನ ಮಕ್ಕಳ 85% ಮಾನಸಿಕ ಬೆಳವಣಿಗೆ ಮತ್ತು 40% ದೈಹಿಕ ಬೆಳವಣಿಗೆ ಕುಸಿಯಬಹುದು.
  • ಬಡವರ ಮಕ್ಕಳಿಗೆ ಇಂಗ್ಲಿಷ್‌ ಕಲಿಸಬೇಕು. 1ನೇ ತರಗತಿಗೆ ಬರುವ ಮಗು ಸಿದ್ಧವಾಗಿರಬೇಕು ಮತ್ತು 1ನೇ ತರಗತಿಗೆ ಬರುವ ಮಕ್ಕಳ ದಾಖಾಲಾತಿ ಕಡಿಮೆಯಾಗುತ್ತಿದೆ ಎಂಬ ವಾದವನ್ನು ಮಂಡಿಸಿ 2542 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಾರಂಭಿಸಲಾಗಿದೆ. ಆದರೆ, ಈ ವಾದಗಳಿಗೆ ಯಾವುದೇ ಅಧ್ಯಯನವಿಲ್ಲದೆ ವಾದ ಮಂಡಿಸಲಾಗುತ್ತಿದೆ. ಒಂದು ಸರ್ಕಾರಿ ಸಂಸ್ಥೆ ಬಲಿಷ್ಠವಾಗಲು ಇನ್ನೊಂದು ಸರ್ಕಾರಿ ಸಂಸ್ಥೆಯನ್ನು ಬಲಹೀನ ಮಾಡಬಾರದು.
  • KKRDB 7 ಜಿಲ್ಲೆಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಲಾಗಿದೆ. ಇದರಿಂದ ಅಂಗನವಾಡಿ ಕೇಂದ್ರಗಳಲ್ಲಿದ್ದ 4 ರಿಂದ 6 ವರ್ಷದ ಮಕ್ಕಳು 1008 ಕೇಂದ್ರಗಳಲ್ಲಿ 22594 ಮಕ್ಕಳು ಕಡಿಮೆಯಾಗಿದ್ದಾರೆ. ಹಾಗೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜುಲೈ 22, 2024 ರಂದು ಪ್ರಾರಂಭಿಸಿರುವ 254 ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿದ್ದರಿಂದ 2312ರಿಂದ 3095 ಹೆಚ್ಚಾಗಿದೆ. ಈ ಎರಡು ಉದಾಹರಣೆಗಳು ಸರ್ಕಾರಿ ವ್ಯವಸ್ಥೆಯಲ್ಲಿ ಪೋಷಕರು ಬಯಸುವ ಅನುಕೂಲತೆಗಳು ಇದ್ದಾಗ ಮಕ್ಕಳ ದಾಖಾಲಾತಿ ಹೆಚ್ಚಾಗುತ್ತಿದೆ ಎಂಬುದು ಸಾಬೀತಾಗಿದೆ.
  • ಈ ಹಿನ್ನಲೆಯಲ್ಲಿ ಪಾಲನೆ, ಪೋಷಣೆ ಮತ್ತು ECCE ಹಕ್ಕು ಆಗಬೇಕಾದರೆ, ಅಭಿವೃದ್ಧಿ ಎಂದರೆ ಮಾನವನ ಘನತೆಯ ಬದಕನ್ನು ಎತ್ತಿಹಿಡಿಯುವ ಸಂವಿಧಾನದ ಆಶಯವನ್ನು ಈಡೇರಿಸಬೇಕಾದರೆ ಇಂದು ಐಸಿಡಿಎಸ್ ಕಾಯ್ದೆಯಾಗುವ ತುರ್ತು ಅಗತ್ಯವಿದೆ. ಮತ್ತು ಐಸಿಡಿಎಸ್‌ಗೆ ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸಬೇಕಿದೆ. ಆಗ ಮತ್ತಷ್ಟು 1974ರ ಮಕ್ಕಳ ರಾಷ್ಟ್ರೀಯ ನೀತಿಯ ಉದ್ದೇಶಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ.

ಅಂಗನವಾಡಿ ನೌಕರರ ಪರಿಸ್ಥಿತಿ: ಈ ಯೋಜನೆಯ ಉದ್ಧೇಶಗಳನ್ನು ಫಲಾನುಭವಿಗಳಿಗೆ ತಲುಪಿಸಿ ಸರ್ಕಾರದ ವಕ್ತಾರರಂತೆ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅತ್ಯಂತ ಕಡಿಮೆ ಸವಲತ್ತುಗಳಲ್ಲಿ ಈ ದೇಶದ ಮಾನವ ಅಭಿವೃದ್ಧಿಗೆ ಕಾಣಿಕೆ ಕೊಟ್ಟಿದ್ದಾರೆ. ಈ ಯೋಜನೆಯಲ್ಲಿ ಸುಮಾರು 1.28 ಲಕ್ಷ ಮಹಿಳೆಯರು ಇದ್ದಾರೆ. ಇವರು ಕೂಡಾ ಸಾಧಾರಣಾ ರೈತ, ಕೃಷಿ-ಕೂಲಿಕಾರರ, ಕಾರ್ಮಿಕರ ಕುಟುಂಬಗಳು ಹಾಗೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವವರು ಎಂದೂ ಗಮನಿಸಬೇಕಾಗಿದೆ.

anganawadi 2
49ವರ್ಷವಾದರೂ ಇಷ್ಟೇ ಗೌರವಧನ ನೀಡಲಾಗುತ್ತಿದೆ
  • ಭಾರತ ಸರ್ಕಾರದ ಯೋಜನೆಯಾದರೂ ದೇಶದಾದ್ಯಂತ ಒಂದೇ ರೀತಿಯ ಗೌರವಧನವಿಲ್ಲ ಮತ್ತು ಸವಲತ್ತುಗಳು ಇಲ್ಲ ಏಕೆಂದರೆ ಇದೊಂದು ಯೋಜನೆಯಾಗಿಯೇ ಉಳಿದಿರುವುದರಿಂದ ಇವರನ್ನು ಉದ್ಯೋಗಸ್ಥರು ಅಥವಾ ನೌಕರರು ಎಂದು ಪರಿಗಣಿಸದೇ ಇರುವುದರಿಂದ ಶಾಸನಬದ್ದ ಸವಲತ್ತುಗಳನ್ನು ಪ್ರಭುತ್ವಗಳು ಅನ್ವಯಿಸಿಲ್ಲ.
  • ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿತ ಸಂಸ್ಥೆ, ಇವರಿಗೆ ಕೊಡುವ ಒಟ್ಟು ಗೌರವಧನ ಸಂಬಳದ ವ್ಯಾಪ್ತಿಗೆ ಬರುವುದು ಮತ್ತು ಆಯ್ಕೆಯ ನಿಯಮಾವಳಿಗಳು ಹಾಗೂ ಮೇಲ್ವಿಚಾರಣೆಯಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 1972 ಗ್ರಾಜ್ಯುಟಿ ಕಾಯ್ದೆ ಅನ್ವಯಿಸುತ್ತದೆ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ 2022 ಏಪ್ರಿಲ್ 25ರಂದು ಐತಿಹಾಸಿಕ ತೀರ್ಪು ಕೊಟ್ಟಿದೆ. 49 ವರ್ಷಗಳ ದೀರ್ಘ ಇತಿಹಾಸದ ನಂತರದಲ್ಲಿ ಈ ಕಾನೂನನ್ನು ಇವರಿಗೆ ಅನ್ವಯಿಸಲಾಗಿದೆ. ಗುಜರಾತ್ ಸರ್ಕಾರಕ್ಕೆ ನೇರ ಆದೇಶವಿದ್ದುದರಿಂದ ಜಾರಿಯಾಗಿದೆ. ಕರ್ನಾಟಕದಲ್ಲಿ ಆದೇಶವಾಗಿದೆ, ಉಳಿದಡೆ ಜಾರಿಯಾಗಿಲ್ಲ.
  • ಈ ನೌಕರರಿಗೆ ಇಂದಿಗೂ ತಿಂಗಳಿಗೊಮ್ಮೆ ಗೌರವಧನ ಸಿಗುತ್ತಿಲ್ಲ. ಸಹಜ ನ್ಯಾಯ, ಸಾಮಾಜಿಕ ನ್ಯಾಯ,
    ಸಮಾನತೆಯ ಬದುಕನ್ನು ಕಟ್ಟಿಕೊಡುವ ಸಂವಿಧಾನಿಕ ನ್ಯಾಯ ಇವರ ಕೈಗಟುಕುತ್ತಿಲ್ಲ. 45ನೇ ILC (Indian Labour Conference)ಇವರನ್ನು ಉದ್ಯೋಗಸ್ಥರೆಂದು ಪರಿಗಣಿಸಿ ಶಾಸನಬದ್ಧ ಸೌಲಭ್ಯಗಳನ್ನು ಕೊಡಬೇಕು ಎಂದು ಶಿಫಾರಸ್ಸು ಆಗಿ ಹಲವು ವರ್ಷಗಳೇ ಕಳೆದಿದ್ದರೂ ಅದರ ಜಾರಿಯಿಲ್ಲ.
    (ಪೂರಕ ಮಾಹಿತಿ: ಎಸ್‌. ವರಲಕ್ಷ್ಮಿ)
07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X