ಬಾಗೇಪಲ್ಲಿ ತಾಲೂಕಿನ ಕಸಬಾ ಹೋಬಳಿಯ ದೇವರಡ್ಡಿಪಲ್ಲಿ ಗ್ರಾಮದಲ್ಲಿ ಮಂಗಸಂದ್ರ ಕೆರೆ ಕಾಲುವೆ ಮತ್ತು ಕೆರೆ ಅಭಿವೃದ್ಧಿ ಕಾಮಗಾರಿಗೆ ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಬರನಾಡು ಎಂದೇ ಖ್ಯಾತಿ ಪಡೆದಿರುವ ಬಾಗೇಪಲ್ಲಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರ ಭಾಗವಾಗಿ ಸುಮಾರು 3 ಕೋಟಿಗಳ ವೆಚ್ಚದಲ್ಲಿ ದೇವರೆಡ್ಡಿಪಲ್ಲಿ, ಪರಗೋಡು ಗ್ರಾಮದ ಹಳೆಯ ಮತ್ತು ಹೊಸ ಕೆರೆಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿದ್ದೇವೆ. ಈ ಮೂಲಕ ಸುಮಾರು 800 ರಿಂದ 1000 ಎಕರೆಗಳಷ್ಟು ರೈತರ ಭೂಮಿಗಳು ಹಸಿರಾಗಿ ಸಸ್ಯ ಶ್ಯಾಮಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಇದೆ ವೇಳೆ ಕೆಡಿಪಿ ನಾಮ ನಿರ್ದೇಶಿತ ಸದಸ್ಯ ಪಿ ಮಂಜುನಾಥ ರೆಡ್ಡಿ ಮಾತನಾಡಿ, ಶಾಸಕರು ಚುನಾವಣಾ ಪ್ರಚಾರದ ವೇಳೆ ಕೊಟ್ಟ ಮಾತಿನಂತೆ ಈ ಭಾಗದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಈ ಭಾಗದ ಜ್ವಲಂತ ಸಮಸ್ಯೆಗಳಲ್ಲೊಂದಾದ ನೀರಿನ ಸಮಸ್ಯೆ ನೀಗಿಸಲು ಹಂತಹಂತವಾಗಿ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳ ಮೂಲಕ ಶಾಶ್ವತ ಪರಿಹಾರ ಒದಗಿಸಲಿದ್ದಾರೆ ಎಂದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಓಬವ್ವಳಂತಹ ಆಳಿನ ಚರಿತ್ರೆ ಮಾತನಾಡಲಾಗದು : ಉಪನ್ಯಾಸಕ ಎಂ ಮುನಿರಾಜು
ಈ ಸಂಧರ್ಭದಲ್ಲಿ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ವಿ ನಾಗರಾಜ್, ಕಸಾಪ ತಾಲೂಕು ಅಧ್ಯಕ್ಷ ಡಿ.ಎನ್ ಕೃಷ್ಣಾರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.