ಚಿತ್ರದುರ್ಗ ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಯನ್ನು ತಡೆಯುವ ಮೂಲಕ ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದ ಬಾಲಕಿಯನ್ನು ಶಿಶು ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಚಿತ್ರದುರ್ಗ ನಗರದ ಹೊರವಲಯದ ಮಾಳಪ್ಪನಹಟ್ಟಿಯ ತಿರುಮಲ ಕಲ್ಯಾಣ ಮಂಟಪದಲ್ಲಿ ಹೊಳಲ್ಕೆರೆ ನಗರದ 17 ವರ್ಷ 3 ತಿಂಗಳಿನ ಬಾಲಕಿಯನ್ನು ಚಿತ್ರದುರ್ಗ ನಗರದ ಹುಡುಗನೊಂದಿಗೆ ವಿವಾಹ ನೆರವೇರಿಸಲು ಪೋಷಕರು ಹಾಗೂ ಕುಟುಂಬಸ್ಥರು ಮದುವೆ ಆಯೋಜಿಸಿ ತಯಾರಿ ನಡೆಸಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿದ ಅಧಿಕಾರಿಗಳು ಜನ್ಮ ದಾಖಲೆ ಪರಿಶೀಲಿಸಿದಾಗ ಹುಡುಗಿ ಅಪ್ರಾಪ್ತೆಯೆಂದು ತಿಳಿದುಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಕಾನೂನಿನ ಪ್ರಕಾರ ಬಾಲ್ಯ ವಿವಾಹ ಜರುಗಿಸಿದರೆ ಕನಿಷ್ಠ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಲಾಗುತ್ತದೆ ಎಂದು ಪೋಷಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬಾಲಕಿಗೆ 18 ವರ್ಷ ತುಂಬಿ ಪ್ರಾಪ್ತ ವಯಸ್ಕಳಾಗುವವರೆಗೂ ಮದುವೆ ಮಾಡದಂತೆ ಬಾಲಕಿ ಹಾಗೂ ಹುಡುಗನ ಪೋಷಕರಿಂದ ಮುಚ್ಚಳಿಕೆ ಬರಸಿಕೊಂಡಿದ್ದು, ಮದುವೆಯನ್ನು ತಡೆದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಾರ್ಮಿಕರಿಗೆ ಲಭ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ ಕೆ ವಿದ್ಯಾಕುಮಾರಿ
“ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ. ಪೋಷಕರು ಹಾಗೂ ಕಲ್ಯಾಣ ಮಂಟಪದ ಮುಖ್ಯಸ್ಥರನ್ನು ಕರೆದು ಎಚ್ಚರಿಕೆ ಮತ್ತು ಮಾಹಿತಿ ನೀಡಲಾಗಿದೆ. ಬಾಲಕಿಗೆ 18 ವರ್ಷ ತುಂಬುವವರೆಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣದ ಬಗ್ಗೆ ನಿಗಾ ಇಡಲಾಗುತ್ತದೆ” ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಸಿ ತಿಳಿಸಿದ್ದಾರೆ.