ಗೃಹಿಣಿಯೋರ್ವರು ತನ್ನ ಮೂರುವರೆ ವರ್ಷದ ಗಂಡು ಮಗುವಿನೊಂದಿಗೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯಕಲಕುವ ಘಟನೆ ವರದಿಯಾಗಿದೆ
ತುರುವೇಕೆರೆ ತಾಲೂಕಿನ ಮೇಲಿನವರಗೇನಹಳ್ಳಿಯ ನಿವಾಸಿ ಬಸವರಾಜು ಎಂಬುವವರ ಪತ್ನಿ ಡಿ.ಶಶಿಕಲಾ (37) ರವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ತನ್ನೊಂದಿಗೆ ಮೂರುವರೆ ವರ್ಷದ ಗಂಡುಮಗು ಗೋಕುಲ್ ನ ಹೊಟ್ಟೆಗೆ ವೇಲ್ ಕಟ್ಟಿಕೊಂಡು ನೀರಿಗೆ ಒಟ್ಟಿಗೆ ಜಿಗಿದಿದ್ದಾರೆ. ಇಬ್ಬರು ಸಹ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಶಶಿಕಲಾ
ಕಳೆದ ಶನಿವಾರದಂದು ಮನೆಯಿಂದ ಹೊರ ಬಂದಿದ್ದರು.
ಶಶಿಕಲಾ ಮೂರು ದಿನಗಳಿಂದ ಕಾಣಿಯಾಗಿರುವ ಬಗ್ಗೆ ಮೃತಳ ಅಣ್ಣ ರೇಣುಕಪ್ಪ ತುರುವೇಕೆರೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಂಗಳವಾರ ಬೆಳಗ್ಗೆ ದಾರಿ ಹೋಕರು ಅಪರಿಚಿತ ಶವ ಕೆರೆಯಲ್ಲಿ ತೇಲುತ್ತಿರುವ ಬಗ್ಗೆ ಪಟ್ಟಣದ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಲೋಹಿತ್ ಭೇಟಿ ನೀಡಿ ಪರಿಶೀಲಿಸಿದರು.
ಆ ವೇಳೆ ಶಶಿಕಲಾ ರವರು ತಾವು ತಂದಿದ್ದ ಕೈ ಚೀಲದಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನನ್ನು ಕ್ಷಮಿಸಿ ಬಿಡಿ. ನನ್ನ ಮತ್ತು ನನ್ನ ಮಗ ಗೋಕುಲ್ ನ ಶವವನ್ನು ನನ್ನ ತಂದೆ ತಾಯಿಯವರ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ಮಾಡಿ ಎಂದು ಬರೆದಿರುವ ಡೆತ್ ನೋಟ್ ಸಿಕ್ಕಿದೆ ಎಂದು ತಿಳಿದುಬಂದಿದೆ. ಅಗ್ನಿ ಶಾಮಕ ಸಿಬ್ಬಂದಿಗಳ ಸಹಾಯದಿಂದ ಇಬ್ಬರ ಶವವನ್ನು ಕೆರೆಯಿಂದ ಹೊರತೆಗೆಯಲಾಯಿತು.
ಅಗ್ನಿಶಾಮಕ ದಳದ ಸಿಬ್ಬಂದಿ ಸಿದ್ದಪ್ಪ ನವರು ಕೆರೆಯೊಳಗೆ ಸುಮಾರು ಐದುನೂರಕ್ಕೂ ಹೆಚ್ಚು ಮೀಟರ್ ದೂರ ಹೊಟ್ಟೆಗೆ ಹಗ್ಗ ಕಟ್ಟಿಕೊಂಡು ತಾಯಿ, ಮಗುವಿನ ಶವವನ್ನು ದಡಕ್ಕೆ ಸಾಗಿಸಿದ ಕ್ರಮ ಸಾರ್ವಜನಿಕರ ಮೆಚ್ಚುಗೆಗಳಿಸಿತು.
ತಮ್ಮ ಸಹೋದರಿ ಕಾಣೆಯಾಗಿದ್ದಾಳೆಂದು ದೂರು ಸಲ್ಲಿಸಿದ್ದ ರೇಣುಕಪ್ಪ ತನ್ನ ಸಹೋದರಿಯ ಸಾವಿಗೆ ಪತಿ ಬಸವರಾಜು ಕೊಡುತ್ತಿದ್ದ ಕಿರುಕುಳವೇ ಕಾರಣ ಎಂದು
ತುರುವೇಕೆರೆ ಪೋಲಿಸರಿಗೆ ದೂರು ಸಲ್ಲಿಸಿದ್ದಾರೆ.
ಮೃತಳ ಗಂಡ ಬಸವರಾಜು ಕುಡಿದು ಬಂದು ಹೆಂಡತಿಯೊದಿಗೆ ಜಗಳವಾಡುತ್ತಿದ್ದನು. ಈ ಬಗ್ಗೆ ಎರಡೂ ಕುಟುಂಬದವರೂ ಕೂಡಿ ರಾಜಿ, ಸಂಧಾನ ಕೂಡ ಮಾಡಿದ್ದರು. ಆದರೂ ಸಹ ಗಂಡನ ಕಿರುಕುಳ ಮಿತಿಮೀರಿದ್ದರಿಂದ ತನ್ನ ಸಹೋದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರೇಣುಕಪ್ಪ ದೂರಿದ್ದಾರೆಂದು ತಿಳಿದುಬಂದಿದೆ.
ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
