ಕಾರು ಮತ್ತು ಸರಕು ಸಾಗಿಸುವ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಆರು ಮಂದಿ ವಿದ್ಯಾರ್ಥಿಗಳು ದುರ್ಮರಣ ಹೊಂದಿರುವ ಹೃದಯವಿದ್ರಾವಕ ಘಟನೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆದಿದೆ. ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಡೆಹ್ರಾಡೂನ್‌ನ ಒಎನ್ಜಿಸಿ ಕ್ರಾಸಿಂಗ್ ಬಳಿ ಬುಧವಾರ ಮುಂಜಾನೆ ದುರ್ಘಟನೆ ನಡೆದಿದೆ. ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತಕ್ಕೀಡಾದ ಕಾರು ಮರಕ್ಕೂ ಡಿಕ್ಕಿ ಹೊಡೆದುಕೊಂಡಿದೆ. ಪರಿಣಾಮ, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ಕ್ಯಾಂಟ್ ಪೊಲೀಸ್ ಠಾಣೆಯ ಪೊಲೀಸರು ಧಾವಿಸಿದ್ದು, ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹಗಳನ್ನು ಕಾರಿನಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತರನ್ನು ಗುನೀತ್, ಕುನಾಲ್, ನವ್ಯಾ ಗೋಯಲ್, ಅತುಲ್ ಅಗರ್ವಾಲ್, ಕುಮಾರ್ ಅಗರ್ವಾಲ್, ರಿಷಬ್ ಜೈನ್ ಎಂದು ಗುರುತಿಸಲಾಗಿದೆ.