ಔರಾದ ತಾಲೂಕಿನ ಗಡಿ ಅಂಚಿನಲ್ಲಿರುವ ಕರಂಜಿ (ಬಿ, ಕರಂಜಿ (ಕೆ) ಹಾಗೂ ರಾಯಪಳ್ಳಿ ಗ್ರಾಮಗಳಿಗೆ ಸಮರ್ಪಕವಾದ ರಸ್ತೆಗಳೇ ಇಲ್ಲ. ಇದರಿಂದ ಈ ಭಾಗದ ವಾಹನ ಸವಾರರು ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.
ತಾಲೂಕಿನ ಚಿಂತಾಕಿಯಿಂದ ಕರಂಜಿ(ಬಿ), ಕರಂಜಿ(ಕೆ) ಮೂಲಕ ತೆಲಂಗಾಣ ಗಡಿ ಭಾಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 5 ರಿಂದ 6 ಕಿ.ಮೀ. ರಸ್ತೆಯಲ್ಲಿ ಸಂಪೂರ್ಣ ಗುಂಡಿಗಳದೇ ಕಾರುಬಾರು, ಡಾಂಬರ್ ಸಂಪೂರ್ಣ ಕಿತ್ತು ಹೋಗಿದ್ದು, ಇದು ರಸ್ತೆಯೋ ಅಥವಾ ಹಾಣಾದಿಯೋ ಎಂಬ ಪ್ರಶ್ನೆ ಈ ಮಾರ್ಗವಾಗಿ ಹಾದು ಹೋಗುವ ಸವಾರರಿಗೆ ಕಾಡದೇ ಇರದು.
ಕರಂಜಿ (ಬಿ), ಕರಂಜಿ (ಕೆ) ಗ್ರಾಮಗಳು ತಾಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ. ದೂರದಲ್ಲಿವೆ. ತಾಲೂಕಿನಿಂದ ತೆಗಂಪುರ, ಸುಂದಾಳ, ನಾಗಮಾರಪಳ್ಳಿ ಗ್ರಾಮಗಳ ಮೂಲಕ ಸಂಚರಿಸುವ ಮಾರ್ಗ ಇದೆ. ಇನ್ನು ಜಿಲ್ಲಾ ಕೇಂದ್ರದಿಂದ ಈ ಗ್ರಾಮಗಳಿಗೆ ತೆರಳಬೇಕಾದರೆ ಚಿಂತಾಕಿ ಮೂಲಕವೇ ಹೋಗಬೇಕು. ಆದರೆ, ಇದೇ ರಸ್ತೆ ಸಂಪೂರ್ಣ ಹಾಳಾಗಿ ಗುಂಡಿಮಯವಾಗಿದೆ.
ನಾಗಮಾರಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕರಂಜಿ(ಬಿ) ಗ್ರಾಮದಿಂದ ಕೇವಲ 1 ಕಿ.ಮೀ ದೂರದಲ್ಲಿ ತೆಲಂಗಾಣವಿದೆ. ಹೀಗಾಗಿ ಸುತ್ತಲಿನ ತೆಲಂಗಾಣ ಗ್ರಾಮಗಳ ವಾಹನಗಳು ಇದೇ ರಸ್ತೆಯಲ್ಲಿ ನಿತ್ಯ ತಿರುಗಾಡುತ್ತವೆ. ರಸ್ತೆ ಸಮರ್ಪಕವಾಗಿ ಇಲ್ಲ ಎಂಬ ಕಾರಣದಿಂದ ಬಸ್ ಸಂಚಾರಕ್ಕೆ ತೊಂದರೆಯಾಗಿದೆ. ಕರಂಜಿ, ರಾಯಪಳ್ಳಿ ಗ್ರಾಮಗಳಿಗೆ ನಿಗದಿತ ಸಮಯಕ್ಕೆ ಬಸ್‌ಗಳು ಇವೆ. ಉಳಿದ ಅವಧಿಯಲ್ಲಿ ಈ ಗ್ರಾಮಗಳ ಜನರು ದ್ವಿಚಕ್ರ ವಾಹನ, ಖಾಸಗಿ ವಾಹನಗಳಿಗೆ ಹಣ ಕೊಟ್ಟು ಹೋಗಬೇಕು. ಅವು ಸಮಯಕ್ಕೆ ಸಿಗದಿದಿದ್ದರೆ ಕಾಲ್ನಡಿಗೆ ಗತಿ ಎಂಬಂತಿದೆ.

ಚಿಂತಾಕಿ ಗ್ರಾಮದಿಂದ ಕರಂಜಿ (ಬಿ) ಗಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರ್ ಕಿತ್ತು ಹೋಗಿ ರಸ್ತೆಯುದ್ದಕ್ಕೂ ಭಾರಿ ಗಾತ್ರದ ಗುಂಡಿ ಬಿದ್ದು, ಜಲ್ಲಿ ಕಲ್ಲುಗಳು ತೇಲಿವೆ. ಇನ್ನು ಮಳೆಗಾಲದಲ್ಲಿ ರಸ್ತೆ ತಗ್ಗುಗಳಲ್ಲಿ ನೀರು ಸಂಗ್ರಹವಾಗಿ ಹೊಂಡಗಳಂತೆ ಕಾಣುತ್ತಿವೆ. ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಯಾತನೆ ಯಾರೊಬ್ಬರೂ ಕೇಳೋರಿಲ್ಲ ಎಂದು ಸವಾರರು ಅಳಲು ತೋಡಿಕೊಳುತ್ತಿದ್ದಾರೆ.
ರಾಜ್ಯ ಹಾಗೂ ಕೇಂದ್ರಕ್ಕೆ ಮಂತ್ರಿಗಳನ್ನು ಕೊಟ್ಟ ಔರಾದ್ ತಾಲೂಕು, ಇದೇ ತಾಲೂಕಿನ ಕೊನೆಯ ಗ್ರಾಮಗಳಿಗೆ ಸೂಕ್ತ ರಸ್ತೆ ಕಂಡಿಲ್ಲ. ನಂಜುಂಡಪ್ಪ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲೂಕು ಪಟ್ಟಿಯಲ್ಲಿರುವ ಔರಾದ್ ತಾಲೂಕಿನ ಈ ಗ್ರಾಮಗಳಿಗೆ ದಶಕ ಕಳೆದರೂ ರಸ್ತೆ ಸುಧಾರಣೆಗೆ ಇಚ್ಚಾಶಕ್ತಿ ತೋರದ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಸರ್ಕಾರ ರಸ್ತೆ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಅನುದಾನ ವೆಚ್ಚ ಮಾಡುತ್ತಿದೆ. ಆದರೆ, ಸಮಪರ್ಕವಾಗಿ ಅನುಷ್ಠಾನವಾಗದ ಕಾರಣ ಇಂದಿಗೂ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಸುಧಾರಣೆ ಕಂಡಿಲ್ಲ.ಗಡಿ ಭಾಗದ ರಸ್ತೆಗಳ ದುಸ್ಥಿತಿ ನೋಡಿದರೆ ಸರ್ಕಾರದ ಹಣ ನಿಜಕ್ಕೂ ನಿರ್ದಿಷ್ಷ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ ಎಂಬ ಸಣ್ಣ ಅನುಮಾನ ಕಾಡುತ್ತದೆ.
ʼನಮ್ಮೂರಿನಿಂದ ಚಿಂತಾಕಿ ಹೋಗುವ ರಸ್ತೆ ತೀವ್ರ ಹದಗೆಟ್ಟಿದೆ, ರಾತ್ರಿಯಲ್ಲಿ ಓಡಾಡಲು ತುಂಬಾ ಸಮಸ್ಯೆಯಾಗುತ್ತಿದೆ. ಹೊಸ ವಾಹನ ಸವಾರರು ಒಮ್ಮೆ ಈ ರಸ್ತೆಯಲ್ಲಿ ಸಂಚರಿಸಿದರೆ ತಿರುಗಿ ಇತ್ತ ಬರುವುದಿಲ್ಲ. ರಸ್ತೆ ಸಮಸ್ಯೆ ಬಗ್ಗೆ ಗ್ರಾಮಸ್ಥರು ಕ್ಷೇತ್ರದ ಶಾಸಕರಿಗೆ ಮೌಖಿಕವಾಗಿ ತಿಳಿಸಿದ್ದಾರೆ. ನಾನು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇನೆʼ ಎಂದು ಕರಂಜಿ(ಬಿ) ನಿವಾಸಿಯೂ ಆದ ನಾಗಮಾರಪಳ್ಳಿ ಗ್ರಾ.ಪಂ.ಅಧ್ಯಕ್ಷ ಸಂಗಾರೆಡ್ಡಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಒಗ್ಗರಣೆ ಅನ್ನ ಸೇವನೆ : 50 ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
ಈ ಕುರಿತು ʼಈದಿನ.ಕಾಮ್ ಔರಾದ್ ತಾಲೂಕು ಲೋಕೋಪಯೋಗಿ ಇಲಾಖೆ ಎಇಇ ಪ್ರೇಮಸಾಗರ ಹಮೀಲಪುರೆ ಅವರನ್ನು ವಿಚಾರಿಸಿದರೆ, ʼಕರಂಜಿ-ಚಿಂತಾಕಿ ರಸ್ತೆ ಹದಗೆಟ್ಟಿರುವುದು ಮಾಹಿತಿ, ಈಗಾಗಲೇ ಭೇಟಿ ನೀಡಿ ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದಾರೆ. ತಾತ್ಕಾಲಿಕವಾಗಿ ಈ ರಸ್ತೆಯಲ್ಲಿನ ಗುಂಡಿ, ತಗ್ಗು ಸರಿಪಡಿಸಲಾಗುವುದುʼ ಎಂದು ಹೇಳಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.