ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕಲ್ಲೂರ್ ರಸ್ತೆಯಲ್ಲಿರುವ ಬಸವತೀರ್ಥ ವಿದ್ಯಾಪೀಠ ಗುರುಕುಲ ವಸತಿ ಶಾಲೆಯಲ್ಲಿ ವಿಷಪೂರಿತ ಆಹಾರ ಸೇವನೆಯಿಂದಾಗಿ 50 ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ಬೆಳಗ್ಗೆ ಘಟನೆ ಸಂಭವಿಸಿದ್ದು, ರಾತ್ರಿ ಉಳಿದ ಅನ್ನಕ್ಕೆ ಒಗ್ಗರಣೆ ಹಾಕಿ ಮುಂಜಾನೆ ಮಕ್ಕಳಿಗೆ ಉಣಬಡಿಸಿದ ಹಿನ್ನಲೆ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ವಿದ್ಯಾರ್ಥಿಗಳು ವಾಂತಿ, ಸುಸ್ತು, ತಲೆ ಸುತ್ತಿನಿಂದ ಬಳಲಿದ್ದರು. ಕೂಡಲೇ ಮಕ್ಕಳನ್ನು ವಸತಿ ನಿಲಯದ ಸಿಬ್ಬಂದಿ, ಸ್ಥಳೀಯರು ಹುಮನಾಬಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್ ಭೇಟಿ ನೀಡಿ ಮಕ್ಕಳ ಅರೋಗ್ಯ ವಿಚಾರಿಸಿದ್ದಾರೆ. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆ ಮುಖ್ಯ ಆರೋಗ್ಯ ಅಧಿಕಾರಿ ಡಾ.ನಾಗನಾಥ ಹುಲಸೂರೆ ಹಾಗೂ ಸಿಬ್ಬಂದಿ ಇದ್ದರು.
ಈ ಸುದ್ದಿ ಓದಿದ್ದೀರಾ? ವಯನಾಡ್ ಉಪಚುನಾವಣೆ | ಪ್ರಿಯಾಂಕಾ ಗಾಂಧಿ ರಾಜಕೀಯ ಭವಿಷ್ಯ ಇಂದು ನಿರ್ಧಾರ!
ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ಮಕ್ಕಳ ಪೋಷಕರು ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದರು.