ತಾಯ್ನೆಲಕ್ಕಾಗಿ ಶೌರ್ಯದಿಂದ ಹೋರಾಡಿದ ವೀರವನಿತೆ ಒನಕೆ ಓಬವ್ವ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಅವರು ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಇತಿಹಾಸವನ್ನು ಗಮನಿಸಿದಾಗ ದೇಶದ ರಕ್ಷಣೆಗಾಗಿ ಅನೇಕ ವೀರ ಮಹಿಳೆಯರು ತಮ್ಮ ಪ್ರಾಣವನ್ನು ಮುಡುಪಾಗಿಟ್ಟಿದ್ದನ್ನು ಸ್ಮರಿಸಬಹುದಾಗಿದೆ. ಅಂತಹ ವೀರ ಮಹಿಳೆಯರ ಸಾಲಿನಲ್ಲಿ ಒನಕೆ ಓಬವ್ವ ಸಹಿತ ವಿರಾಜಮಾನರಾಗಿದ್ದಾರೆ. ಒನಕೆ ಓಬವ್ವ ಅವರ ಸಾಹಸ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿರುಪಾಕ್ಷ ಉಪನ್ಯಾಸ ನೀಡಿ, ‘ಚಿತ್ರದುರ್ಗದ ನಾಯಕರ ಬಳಿ ಕಹಳೆಗಾರನಾಗಿ ಸೇವೆ ಸಲ್ಲಿಸುತ್ತಿದ್ದ ಮುದ್ದಹನುಮಪ್ಪನ ಹೆಂಡತಿಯೇ ಓಬವ್ವ. ಹೈದರ್ ಅಲಿಯು ಚಿತ್ರದುರ್ಗ ಕೋಟೆಯನ್ನು ಅಕ್ರಮಿಸಲು ವಿಫಲ ನಾದನು. ನಂತರ ಹೈದರ್ ಅಲಿಯು ಕುಟಿಲ ಮಾರ್ಗದಿಂದ ಕೋಟೆಯನ್ನು ಭೇದಿಸಲು ಗೂಢಚಾರರನ್ನು ನೇಮಿಸಿ, ತಯಾರಿ ನಡೆಸಿದರು. ಮುದ್ದಹನುಮಪ್ಪನು ಮಧ್ಯಾಹ್ನ ಮನೆಗೆ ಬಂದಾಗ ಓಬವ್ವಳು ಆತನಿಗೆ ಊಟಕ್ಕೆ ಬಡಿಸಿ ಕುಡಿಯುವ ನೀರು ತರಲು ಸಿಹಿ ನೀರಿನ ಕೊಳಕ್ಕೆ ಬಂದಳು. ಕಳ್ಳಗಿಂಡಿಯ ಕಡೆ ಯಿಂದ ಶತ್ರುಗಳ ಅಸ್ಪಷ್ಟ ಮಾತುಗಳು, ಸುಳಿವು ಸಿಕ್ಕ ತಕ್ಷಣವೇ ಕಳ್ಳಗಿಂಡಿಯ ಬಳಿಗೆ ಶತ್ರುಗಳನ್ನು ಎದುರಿಸಲು ಸಿದ್ಧಳಾದಳು. ಒನಕೆಯನ್ನು ಹಿಡಿದು ಒಬ್ಬೊಬ್ಬರಾಗಿ ನುಸುಳಿ ಬಂದವರ ತಲೆಗೆ ಒನಕೆ ಪೆಟ್ಟು ಕೊಟ್ಟು ಕೊಂದು ಹಾಕತೊಡಗಿದಳು’ ಎಂದು ತಿಳಿಸಿದರು.
‘ಊಟ ಮುಗಿಸಿದ ಮುದ್ದಹನುಮಪ್ಪನು ಕುಡಿಯುವ ನೀರು ತರಲು ಹೋದ ಓಬವ್ವಳನ್ನು ಕಾಣಲು ಕೊಳದ ಬಳಿಗೆ ಬಂದಾಗ ಅಲ್ಲಿಯ ಸನ್ನಿವೇಶವನ್ನು ನೋಡಿ ತನ್ನ ಕಹಳೆ ಮೊಳಗಿಸಿದನು. ದುರ್ಗದ ಸೈನಿಕರು ಧಾವಿಸಿ ಬಂದು ಶತ್ರುಗಳನ್ನು ಹೊಡೆದೋಡಿಸಿದರು. ಹೀಗೆ ಶತ್ರುಗಳ ಕುಟಿಲ ಆಕ್ರಮಣವನ್ನು ತಡೆದು ಓಬವ್ವಳು ತನ್ನ ಸಮಯ ಪ್ರಜ್ಞೆ ಹಾಗೂ ಧೈರ್ಯ ಶೌರ್ಯ ಮೆರೆದಿದ್ದು ಎಲ್ಲರಿಗೂ ಆದರ್ಶಪ್ರಾಯವಾಗಿದೆ’ ಎಂದು ಇತಿಹಾಸ ವಿವರಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭರತ್ ಎಸ್., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ಸಂಕದ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮಹೇಶ ಪೋತ ದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ., ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ವಿವಿಧ ಇಲಾ ಖೆಯ ಅಧಿಕಾರಿಗಳು, ಸಮುದಾಯದ ಮುಖಂಡರು, ಗಣ್ಯರು, ಹಾಜರಿದ್ದರು.