ಚಿತ್ರದುರ್ಗದಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ನಿಜಲಿಂಗಪ್ಪ ಅವರ ಮನೆಯನ್ನು ಖರೀದಿಸಿ, ಅಭಿವೃದ್ದಿಪಡಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ 5 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.
ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಪರ ಕಾರ್ಯದರ್ಶಿ ಎನ್ ಶಾರದಾಂಬ ಅವರು ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ಟಿ ಅವರಿಗೆ ಪತ್ರ ಬರೆದಿದ್ದಾರೆ. ಮನೆ ಖರೀಸುವ ಕುರಿತು ನಿರ್ದೇಶನ ನೀಡಿದ್ದಾರೆ.”ನಿಜಲಿಂಗಪ್ಪ ಅವರ ಮನೆಯನ್ನು 4.18 ಕೋಟಿ ರೂ. ಹಣ ಕೊಟ್ಟು ವಿನಯ್ ಅವರಿಂದ ಖರೀದಿಸಬೇಕು. ಮನೆಯನ್ನು ಸಂರಕ್ಷಿಸಿ, ಅಭಿವೃದ್ದಿಪಡಿಸಬೇಕು” ಎಂದು ಸೂಚಿಸಿದ್ದಾರೆ.
ಈ ಹಿಂದೆ, 2020ರಲ್ಲಿಯೇ ನಿಜಲಿಂಗಪ್ಪ ಅವರ ಮನೆಯನ್ನು ಖರೀದಿಸಲು 5 ಕೋಟಿ ರೂ. ಅನುದಾನ ಒದಗಿಸುವುದಾಗಿ ಅಂದಿನ ಸರ್ಕಾರ ಘೋಷಿಸಿತ್ತು. ಆದರೆ, ಅದು ಕಾರ್ಯಗತಕ್ಕೆ ಬಂದಿರಲಿಲ್ಲ. ಇದೀಗ, ಸರ್ಕಾರವು ಅನುದಾನ ಮಂಜೂರು ಮಾಡಿದೆ.
“ಈಗಾಗಲೇ 2 ಕೋಟಿ ರೂ. ಅನುದಾನಕ್ಕೆ ಮಂಜೂರಾತಿ ನೀಡಲಾಗಿದೆ. ಉಳಿದ 3 ಕೋಟಿ ರೂ. ಹಣವನ್ನು ಮಂಜೂರು ಮಾಡಲು ಆದೇಶಿಸಲಾಗಿದೆ. ನಿಜಲಿಂಗಪ್ಪನವರ ಮನೆಯನ್ನು ಸಂರಕ್ಷಿಸಿ, ಅಭಿವೃದ್ಧಿಗೊಳಿಸುವ ಜವಾಬ್ದಾರಿಯನ್ನು ಚಿತ್ರದುರ್ಗ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಿಗೆ ವಹಿಸಲಾಗಿದೆ. ಅನುಮೋದಿತ ಅನುದಾನದಲ್ಲಿ ಅಂದಾಜುಪಟ್ಟಿ ಅನುಸಾರ ಸದರಿ ಮನೆಯನ್ನು 4,18,49,017 ರೂ.ಗಳ ಮೊತ್ತದಲ್ಲಿ ವಿನಯ್ ಅವರಿಂದ ಖರೀದಿಸಬೇಕು” ಎಂದು ಸೂಚನೆ ನೀಡಿದ್ದಾರೆ.
ಎಸ್ ನಿಜಲಿಂಗಪ್ಪ ಅವರು 2000ರ ಆಗಸ್ಟ್ 8ರಂದು ನಿಧನರಾದರು. ಅವರ ಎಲ್ಲ ಆಸ್ತಿಯು ಅವರ ಮಕ್ಕಳ ಹೆಸರಿಗೆ ವರ್ಗಾವಣೆ ಯಾಗಿತ್ತು. ಈಗ, ನಿಜಲಿಂಗಪ್ಪ ಅವರ ಮನೆಯು ಅವರ ಮೊಮ್ಮಗ ಎಸ್.ಕೆ ವಿನಯ್ ಸ್ವಾಧೀನದಲ್ಲಿದೆ. ವಿನಯ್ ಅವರಿಂದ ಮನೆಯನ್ನು ಖರೀದಿ, ಅಭಿವೃದ್ಧಿ ಪಡಿಸಬೇಕೆಂಬ ಒತ್ತಾಯಗಳು ಹಿಂದಿನಿಂದಲೂ ಇದ್ದವು. ಇದೀಗ, ಆ ಮನೆಯ ಖರೀದಿಗೆ ಸರ್ಕಾರ ಮುಂದಾಗಿದೆ.