ರೈತ ದೇಶದ ಬೆನ್ನೆಲೆಬು ಎಂದು ಹೇಳುತ್ತಿರುವ ರಾಜಕಾರಣಿಗಳು ರೈತರ ಬೆನ್ನೆಲುಬನ್ನು ಮುರಿಯಲು ಯತ್ನಿಸುತ್ತಿದ್ದು, ಅವರ ಜಮೀನುಗಳನ್ನು ವಕ್ಫ್ ಬೋರ್ಡಿನ ಹೆಸರಿನಲ್ಲಿ ಮಾಡುತ್ತಿರುವುದು ತುಂಬಾ ಅನ್ಯಾಯದ ಕೆಲಸ ಎಂದು ಭಾರತೀಯ ಕಿಸಾನ್ ಸಂಘದ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ಅಜಯ ಕರಿಗೌಡ್ರ ಹೇಳಿದರು.
ರೈತರ ಜಮೀನಿನ ದಾಖಲೆಯಲ್ಲಿ ವಕ್ಪ್ ಹೆಸರು ತೆಗೆಯಲು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನೆ ನಡೆಸಿದ ಬಳಿಕ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜಕೀಯ ಕುತಂತ್ರ ನಡೆಸಿ, ಬಡ ರೈತರ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ, ರೈತರನ್ನು ಎದುರು ಹಾಕಿಕೊಂಡರೆ ಈ ಭೂಮಿಯಲ್ಲಿ ಯಾರೂ ಉಳಿಯುವುದಿಲ್ಲ. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ವಕ್ಪ್ ಬೋರ್ಡಿನ ಹೆಸರಿನಲ್ಲಿರುವ ರೈತರ, ಸಾರ್ವಜನಿಕರ, ಮಠಮಾನ್ಯಗಳ ಹೆಸರುಗಳನ್ನು ಪುನಃ ಅವರವರ ಉತಾರಗಳಲ್ಲಿ ಅವರವರ ಹೆಸರಿಗೆ ದಾಖಲಿಸಿ, ಬಡ ರೈತರಿಗೆ ನ್ಯಾಯವನ್ನು ಒದಗಿಸಿಕೊಡಬೇಕು. ಮುಂದಿನ ದಿನಮಾನದಲ್ಲಿ ಇದನ್ನು ಸರಿಪಡಿಸದೇ ಹೋದರೆ ರಾಜ್ಯಾದ್ಯಂತ ರೈತ ಚಳುವಳಿ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಟಾಕಪ್ಪ ಸಾತಪುತೆ, ರಮೇಶ ಕೋಳಿವಾಡ, ಗಂಗಪ್ಪ ನಾದಿಗಟ್ಟಿ, ಶಿವಣ್ಣ ಕೊಟಿಗಿ, ಚಂದ್ರಗೌಡ ಕರೆಗೌಡ್ರ, ಬಸವರಾಜ ಮೂಲಿಮನಿ, ಸೋಮಪ್ಪ ಮಜ್ಜಿಗುಡ್ಡದ ಅನೇಕರು ಉಪಸ್ಥಿತರಿದ್ದರು.
ವರದಿ : ಕೇಶವ ಕಟ್ಟಿಮನಿ, ಸಿಟಿಜನ್ ಜರ್ನಲಿಸ್ಟ್, ಲಕ್ಷ್ಮೇಶ್ವರ
