ಹೊಲಕ್ಕೆ ಹೋಗುತ್ತಿದ್ದ ಮಹಿಳೆಯ ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ಮಹಿಳೆ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಸ್ತೂರಿಪುರ ಗ್ರಾಮದಲ್ಲಿ ನಡೆದಿದೆ.
45 ವರ್ಷದ ಹನುಮಕ್ಕ ಎಂಬುವರು ಕರಡಿ ದಾಳಿಗೊಳಗಾಗಿವವರು. ತೀವ್ರ ಗಾಯಗೊಂಡ ಅವರನ್ನು ಜಗಳೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ಸಂಬಂಧಿಕರೊಬ್ಬರು ಮಾಹಿತಿ ನೀಡಿದ್ದಾರೆ.
“ನಿತ್ಯದಂತೆ ಹೊಲದ ಕೆಲಸಕ್ಕೆ ತೆರಳುವಾಗ ಅದೇ ದಾರಿಯಲ್ಲಿ ತನ್ನ ಎರಡು ಮರಿಗಳೊಂದಿಗೆ ತೆರಳುತ್ತಿದ್ದ ಕರಡಿ ಹನುಮಕ್ಕನವರ ಮೇಲೆ ಏಕಾಏಕಿ ದಾಳಿ ಮಾಡಿದೆ. ದಾಳಿಯ ವೇಳೆ ಕಿರುಚಾಡಿದ ಹನುಮಕ್ಕನನ್ನು ನೋಡಿ ಅಲ್ಲೇ ಹತ್ತಿರದಲ್ಲಿದ್ದ ಕುರಿಗಾಹಿಗಳಿಬ್ಬರು ಓಡಿಬಂದು ಕೂಗಾಟ ನಡೆಸಿದ್ದರಿಂದ ಕರಡಿ ಓಡಿಹೋಗಿದೆ. ಕೂಡಲೇ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ಕಳಿಸಲಾಗಿದೆ” ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ರೈತರ ಜಮೀನಿನ ದಾಖಲೆಯಲ್ಲಿ ವಕ್ಪ್ ಹೆಸರು ತೆಗೆಯಲು ಆಗ್ರಹಿಸಿ ಕಿಸಾನ್ ಸಂಘದಿಂದ ಪ್ರತಿಭಟನೆ
ವಲಯ ಅರಣ್ಯ ಅಧಿಕಾರಿ ಶ್ರೀನಿವಾಸ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, “ಮಹಿಳೆ ಎಂದಿನಂತೆ ಜಮೀನಿಗೆ ತೆರಳುತ್ತಿರುವಾಗ ಕೊಣಚಿಕಲ್ ಗುಡ್ಡದ ಕಡೆಗೆ ತೆರಳುತ್ತಿರುವ ಕರಡಿ ತನ್ನ ಮರಿಗಳೊಂದಿಗೆ ಅದೇ ಮಾರ್ಗದಲ್ಲಿ ಹೋಗಿತ್ತಿದ್ದು, ಆ ಸಮಯದಲ್ಲಿ ಎದುರಾದ ಮಹಿಳೆ ಮೇಲೆ ದಾಳಿ ನಡೆಸಿದೆ. ದಾಳಿಯಿಂದ ಪಾರಾದ ವಿಷಯ ತಿಳಿದ ನಮ್ಮ ಅರಣ್ಯ ಇಲಾಖೆ ಸಿಬ್ಬಂದಿ ಕೆಲವೇ ಹೊತ್ತಿನಲ್ಲಿ ತೆರಳಿ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
“ಅರಣ್ಯ ಇಲಾಖೆ ವತಿಯಿಂದ ₹60,000ದವರೆಗೂ ಚಿಕಿತ್ಸಾ ವೆಚ್ಚ ಭರಿಸಲು ಅವಕಾಶವಿರುವುದರಿಂದ ಉತ್ತಮ ಚಿಕಿತ್ಸೆಯನ್ನು ಕೊಡಿಸಲಾಗುತ್ತದೆ. ಸದ್ಯ ವೈದ್ಯರು ಯಾವುದೇ ಜೀವಾಪಾಯವಿಲ್ಲವೆಂದು ತಿಳಿಸಿದ್ದಾರೆ” ಎಂದು ಉತ್ತರಿಸಿದರು.