ಮೂರು ಲಕ್ಷ ರೂಪಾಯಿಗಳ ನರೇಗಾ ಕೆಲಸಕ್ಕೆ ಶೇ. ನಾಲ್ಕರಂತೆ 12,000 ರೂ.ಗಳ ಹಣದ ರೂಪದ ಬೇಡಿಕೆ ಇಟ್ಟಿರುವ ವಿಡಿಯೋ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ಹಿನ್ನೆಲೆ ಹಾಗೂ ನರೇಗಾ ಬಿಲ್‌ಗಳಲ್ಲಿ ಅಕ್ರಮ ಎಸಗಿರುವ ವರದಿ ಆಧರಿಸಿ ಚಿತ್ರದುರ್ಗದಲ್ಲಿ ನರೇಗಾ ಯೋಜನೆಯ ತಾಂತ್ರಿಕ ಸಹಾಯಕರೊಬ್ಬರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮ ಪಂಚಾಯತಿಯ ತಾಂತ್ರಿಕ ಸಹಾಯಕ ವಿಜಯೇಂದ್ರ ಅವರು ವಜಾಗೊಂಡಿದ್ದು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್ ಜೆ ಸೋಮಶೇಖರ್ ಕೆಲಸದಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.
ಹಿರಿಯೂರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅವರು, ತಾಂತ್ರಿಕ ಸಹಾಯಕ ವಿಜಯೇಂದ್ರ ಅವರು, ನರೇಗಾ ಯೋಜನೆಯ ಕಾಮಗಾರಿಗಳ ಸಾಮಗ್ರಿ ಬಿಲ್ಲುಗಳ ಎಂಐಎಸ್ ಮಾಡಿ ಎಫ್‍ಟಿಒಗಳನ್ನು ಸೃಜಿಸಿದ್ದು, ಈ 33 ಕಾಮಗಾರಿಗಳ ಎಂ.ಬಿಯನ್ನು ದಾಖಲಿಸದೆ ಕರ್ತವ್ಯ ಲೋಪವೆಸಗಿದ್ದಾರೆ ಎಂದು ವರದಿ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೂ.3 ಲಕ್ಷದ ಕಾಮಗಾರಿ ಅನುಷ್ಠಾನಗೊಳಿಸುವಲ್ಲಿ ಶೇ.4 ನಂತೆ ರೂ.12,000/-ಗಳಿಗೆ ಹಣದ ಬೇಡಿಕೆ ಇಟ್ಟಿರುವ ದೃಶ್ಯ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನು ಓದಿದ್ದೀರಾ? ಮೈಸೂರು | ಸಾಲಗಾರರ ಕಿರುಕುಳ ಶಂಕೆ: ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾದ ರಿಯಲ್ ಎಸ್ಟೇಟ್ ಉದ್ಯಮಿ
ಕರ್ತವ್ಯಲೋಪ ಮತ್ತು ಹಣದ ಬೇಡಿಕೆ ಇಟ್ಟು ನರೇಗಾ ಯೋಜನೆಯ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿರುವುದರಿಂದ ಇವರ ಸೇವೆಯು ಇಲಾಖೆಗೆ ಅವಶ್ಯಕತೆ ಇಲ್ಲದೇ ಇರುವುದರಿಂದ ವಿಜಯೇಂದ್ರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
