ಈ ದಿನ ಸಂಪಾದಕೀಯ | ಬಿಜೆಪಿಯ ಧ್ವಂಸ ಸಂಸ್ಕೃತಿಗೆ ಸುಪ್ರೀಂ ಸುತ್ತಿಗೆ ಏಟು

Date:

Advertisements
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಯಲ್ಲಿರುವ ಧ್ವಂಸ ಸಂಸ್ಕೃತಿಯ ಹಿಂದೆ ದ್ವೇಷಾಸೂಯೆಯ ರಾಜಕಾರಣವಿದೆ. ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡುವ, ಹದ್ದುಬಸ್ತಿನಲ್ಲಿಡುವ, ಭಾರತ ಬಿಟ್ಟು ಓಡಿಸುವ ಕುತ್ಸಿತ ಬುದ್ಧಿ ಇದೆ. ಇಂತಹ ಧ್ವಂಸ ಸಂಸ್ಕೃತಿಯನ್ನು ಜಾರಿಗೆ ತಂದ ಸರ್ಕಾರಗಳ ಬಗ್ಗೆ ಸುಪ್ರೀಂ ಕೋರ್ಟ್ ತಳೆದ ನಿಲುವು ಸೂಕ್ತ, ಸಕಾಲಿಕ ಮತ್ತು ಶ್ಲಾಘನೀಯ.

‘ಕಾರ್ಯಾಂಗವು ನ್ಯಾಯಾಧೀಶನಂತೆ ವರ್ತಿಸಿ, ವ್ಯಕ್ತಿಯೊಬ್ಬ ಆರೋಪಿ ಎಂಬ ಕಾರಣಕ್ಕೆ ಆತನ ಮನೆ ಉರುಳಿಸುವ ಶಿಕ್ಷೆಯನ್ನು ವಿಧಿಸಿದರೆ, ಅದು ಅಧಿಕಾರವನ್ನು ಪ್ರತ್ಯೇಕಿಸುವ ತತ್ವಕ್ಕೆ ವಿರುದ್ಧ. ಅಧಿಕಾರಿಗಳು ಸಹಜ ನ್ಯಾಯದ ಮೂಲಭೂತ ತತ್ವಗಳನ್ನು ಪಾಲಿಸದೆ, ಸಹಜ ಪ್ರಕ್ರಿಯೆಯ ತತ್ವಕ್ಕೆ ಅನುಗುಣವಾಗಿ ವರ್ತಿಸದೆ, ಬುಲ್ಡೋಜರ್ ಬಳಸಿ ಕಟ್ಟಡವನ್ನು ಧ್ವಂಸಗೊಳಿಸುವ ಭೀತಿಯ ದೃಶ್ಯವು ಕಾನೂನಿಗೆ ಬೆಲೆಯೇ ಇಲ್ಲದ, ಬಲಿಷ್ಠನು ಮಾಡಿದ್ದೆಲ್ಲವೂ ಸರಿ ಎನ್ನುವ ಸ್ಥಿತಿಯನ್ನು ನೆನಪಿಸುತ್ತದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸುಪ್ರೀಂ ಕೋರ್ಟ್ ಹೀಗೆ ಖಡಕ್ಕಾದ ತೀರ್ಪು ನೀಡಲು ಕಾರಣ, ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವ್ಯಕ್ತಿಗಳ ಅಥವಾ ಅಂತಹ ವ್ಯಕ್ತಿಗಳ ಕುಟುಂಬದ ಸದಸ್ಯರ ಮನೆಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸುವ ಕಾರ್ಯವು ದೇಶದ ಕೆಲವು ರಾಜ್ಯಗಳಲ್ಲಿ ಚಾಲ್ತಿಯಲ್ಲಿದ್ದದ್ದು.

ಅಸಲಿಗೆ, ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವವರೆಗೆ ಯಾರನ್ನೂ ಅಪರಾಧಿ ಎಂದು ಬಿಂಬಿಸುವ ಅಧಿಕಾರ ಪೊಲೀಸರಿಗಿಲ್ಲ. ಕಾನೂನು ವ್ಯವಸ್ಥೆ ಪ್ರಕರಣದ ತನಿಖೆ ನಡೆಸಿ ಆರೋಪಿಗಳ ಮೇಲೆ ಆರೋಪಗಳನ್ನಷ್ಟೇ ಹೊರಿಸುತ್ತದೆ. ಅದರ ಸತ್ಯಾಸತ್ಯತೆ ತೀರ್ಮಾನವಾಗುವುದು ನ್ಯಾಯಾಲಯದಲ್ಲಿ. ನ್ಯಾಯಾಲಯದಲ್ಲಿ ಸಾಬೀತಾದ ಬಳಿಕವಷ್ಟೇ ಆತನಿಗೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಬುಲ್ಡೋಜರ್ ನ್ಯಾಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮತ್ತು ಕೆಲವು ಅಧಿಕಾರಿಗಳು ಸೇರಿ ಆರೋಪಿಯನ್ನು ಅಪರಾಧಿ ಎಂದು ಘೋಷಿಸುತ್ತಿದ್ದರು. ಅವರೇ ಕಾನೂನನ್ನು ಕೈಗೆತ್ತಿಕೊಂಡು ಶಿಕ್ಷೆ ವಿಧಿಸುತ್ತಿದ್ದರು.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮತ್ತೊಂದು ಮಹಾ ಮರಮೇಧಕ್ಕೆ ಕೇಂದ್ರದ ಅನುಮತಿ ಅಮಾನುಷ

ಅದರಲ್ಲೂ ಬಿಜೆಪಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆವಿಷ್ಕಾರವಾಗಿ ಉತ್ತರ ಪ್ರದೇಶದಲ್ಲಿ, ದೇಶದ ನ್ಯಾಯ ವ್ಯವಸ್ಥೆಗೆ ಪರ್ಯಾಯವಾಗಿ ‘ಬುಲ್ಡೋಜರ್ ನ್ಯಾಯ’ವನ್ನು ಬಳಸಲಾಗುತ್ತಿತ್ತು. ಇದೊಂದು ಮಾದರಿ ನ್ಯಾಯ ವ್ಯವಸ್ಥೆ ಎಂಬಂತೆ, ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಹರಿಯಾಣ ಮತ್ತು ಅಸ್ಸಾಂ ರಾಜ್ಯಗಳಲ್ಲೂ ಅಳವಡಿಸಿಕೊಳ್ಳಲಾಗಿತ್ತು.

ಬುಲ್ಡೋಜರ್ ಬಳಸಿ ವಾಸವಿರುವ ಮನೆ ನೆಲಸಮಗೊಳಿಸುವುದು ಧ್ವಂಸ ಸಂಸ್ಕೃತಿ. ಅಮಾನವೀಯ ಕ್ರೌರ್ಯ. ದುರದೃಷ್ಟಕರ ಸಂಗತಿ ಎಂದರೆ, ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜ್ಯಗಳಲ್ಲಿ, ಇದು ರಾಜಕಾರಣದೊಂದಿಗೆ ತಳಕು ಹಾಕಿಕೊಂಡಿತ್ತು. ಅದರಲ್ಲೂ ಮುಸ್ಲಿಮರನ್ನು ಮತ್ತು ಬಿಜೆಪಿಯನ್ನು ವಿರೋಧಿಸುವವರನ್ನು ಮುಖ್ಯವಾಗಿ ಗುರಿಯಾಗಿಸಿಕೊಂಡಿತ್ತು. ಅವರ ವಿರುದ್ಧ ಪ್ರತೀಕಾರ ಅಥವಾ ಹಗೆ ತೀರಿಸಿಕೊಳ್ಳುವ ಉದ್ದೇಶದಿಂದ ನಡೆಯುವ ಧ್ವಂಸ ಪ್ರಕ್ರಿಯೆಯು ಸರ್ಕಾರದ ನೀತಿಯೇ ಆಗಿಹೋಗಿತ್ತು.

ನಾಚಿಕೆಗೇಡಿನ ಸಂಗತಿ ಎಂದರೆ, ಇದನ್ನು ಶಿಕ್ಷೆಯ ರೂಪದಲ್ಲಿ ಎಲ್ಲೆಡೆಯೂ ಜಾರಿಗೆ ತರಬೇಕು, ನಮ್ಮಲ್ಲೂ ಒಬ್ಬ ಆದಿತ್ಯನಾಥ್ ಇರಬೇಕು ಎಂಬ ಒತ್ತಾಯ ಬಿಜೆಪಿಯ ಕೆಲ ನಾಯಕರಿಂದ ಕೇಳಿಬಂದಿತ್ತು. ಕೆಲ ಸುದ್ದಿ ಮಾಧ್ಯಮಗಳೂ ಬುಲ್ಡೋಜರ್ ನ್ಯಾಯ ಬೆಂಬಲಿಸಿ ಬರೆದಿದ್ದೂ ಇತ್ತು. ಅಲ್ಲದೆ, ಈ ಧ್ವಂಸ ಸಂಸ್ಕೃತಿಯನ್ನು ವೈಭವೀಕರಿಸುವ ಹಾಗೂ ಅಂತಹ ದಿಢೀರ್ ನ್ಯಾಯಕ್ಕೆ ಒಪ್ಪಿಗೆ ನೀಡುವ ದೊಡ್ಡ ವರ್ಗವೊಂದು ಸಮಾಜದಲ್ಲೂ ಸೃಷ್ಟಿಯಾಗಿತ್ತು.

ಇಂತಹ ಸಂದರ್ಭದಲ್ಲಿ, ಈ ದೇಶದಲ್ಲಿನ್ನೂ ನ್ಯಾಯಾಂಗ ವ್ಯವಸ್ಥೆ ಜೀವಂತವಿದೆ ಎಂಬುದನ್ನು ತೋರುವ ತೀರ್ಪೊಂದು ಸುಪ್ರೀಂ ಕೋರ್ಟಿನಿಂದ ಹೊರಬಿದ್ದಿದೆ. ಬಿಜೆಪಿಗರ ‘ಬುಲ್ಡೋಜರ್ ನ್ಯಾಯ’ವನ್ನು ‘ಅರಣ್ಯ ನ್ಯಾಯ’ದೊಂದಿಗೆ ಹೋಲಿಸಿರುವ ಸುಪ್ರೀಂ ಕೋರ್ಟ್, ‘ಅಪರಾಧ ಪ್ರಕರಣದ ಕಾರಣಕ್ಕೆ ಆರೋಪಿ ಮನೆ ತೆರವು ಮಾಡುವುದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಆಶ್ರಯ ಪಡೆಯುವ ಹಕ್ಕಿನ ಉಲ್ಲಂಘನೆಯಾಗುತ್ತದೆ’ ಎಂದಿದೆ. ಅಲ್ಲದೆ, ಕಟ್ಟಡಗಳ ಧ್ವಂಸಕ್ಕೆ ಸಂಬಂಧಿಸಿದಂತೆ ಇಡೀ ದೇಶಕ್ಕೆ ಅನ್ವಯವಾಗುವ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆ ಮೂಲಕ ಬಲಿಷ್ಠ ಬಿಜೆಪಿಗರ ಧ್ವಂಸ ಸಂಸ್ಕೃತಿಗೆ ಸುತ್ತಿಗೆ ಏಟು ಕೊಟ್ಟಿದೆ.

ಈ ಐತಿಹಾಸಿಕ ತೀರ್ಪು ಬಡವರು, ಅಸಹಾಯಕರು ಮತ್ತು ಅಲ್ಪಸಂಖ್ಯಾತರಿಗೆ ಬದುಕುವ ಭರವಸೆ ಮೂಡಿಸಿದೆ. ದಮನಿತರ ದನಿಯನ್ನು ಆಲಿಸುವ ಕಿವಿಗಳು ಇನ್ನೂ ಈ ದೇಶದಲ್ಲಿವೆ ಎಂಬುದನ್ನು ಸಾಬೀತುಪಡಿಸಿದೆ.

ಇದು ಹೇಳಿಕೇಳಿ ಬಡ ಭಾರತ. ಮೋದಿ ಹೇಳಿರುವಂತೆ 80 ಕೋಟಿ ಬಡವರಿರುವ ದೇಶ. ಅಭಿವೃದ್ಧಿ ಹೊಂದುತ್ತಿರುವ ದೇಶ. ಇಲ್ಲಿ ಸ್ವಂತ ಮನೆ ಹೊಂದುವುದು ಅಷ್ಟು ಸುಲಭದ ಸಂಗತಿಯಲ್ಲ. ಜೀವನಪರ್ಯಂತ ಹಗಲಿರುಳು ಬೆವರು ಹರಿಸಿ ದುಡಿದರೂ ಸಣ್ಣ ಸೂರು ಕಟ್ಟಿಕೊಳ್ಳಲಾಗದ ಕೋಟ್ಯಂತರ ಜನ ಇನ್ನೂ ಈ ದೇಶದಲ್ಲಿದ್ದಾರೆ. ಅಂಥದ್ದರಲ್ಲಿ, ಮನೆಯ ಯಾರೋ ಒಬ್ಬ ಒಂದು ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದರೆ, ಇಡೀ ಮನೆಯನ್ನೇ ಬುಲ್ಡೋಜರ್‍‌ನಿಂದ ಧ್ವಂಸ ಮಾಡಿ, ಮನೆಯವರನ್ನೆಲ್ಲ ಬೀದಿ ಪಾಲು ಮಾಡುವುದು ಯಾವ ಸಂಸ್ಕೃತಿ? ಇದು ಯಾವ ಧರ್ಮದಲ್ಲಿದೆ?

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸಾರ್ವಜನಿಕ ಸಂಯಮವೂ, ಸುದ್ದಿ ಮಾಧ್ಯಮಗಳೂ

ಅಕಸ್ಮಾತ್, ಆ ಆರೋಪಿ, ಕಾನೂನಿನ ಹೋರಾಟಕ್ಕೆ ಮುಂದಾದರೆ, ಅಲ್ಲಿಯವರೆಗೂ ಆತನ ಕುಟುಂಬದವರು ಬೀದಿಯಲ್ಲಿಯೇ ಬದುಕಬೇಕಾ? ಮುಂದೊಂದು ದಿನ ಆತ ನಿರಪರಾಧಿ ಎಂದು ಘೋಷಿಸಲ್ಪಟ್ಟರೆ, ಸರ್ಕಾರ ಮುಂದೆ ನಿಂತು ಮನೆ ನಿರ್ಮಿಸಿಕೊಡುತ್ತದೆಯೇ?

ಒಟ್ಟಾರೆ, ಈ ಧ್ವಂಸ ಸಂಸ್ಕೃತಿಯ ಹಿಂದೆ ದ್ವೇಷಾಸೂಯೆಯ ರಾಜಕಾರಣವಿದೆ. ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡುವ, ಹದ್ದುಬಸ್ತಿನಲ್ಲಿಡುವ, ಭಾರತ ಬಿಟ್ಟು ಓಡಿಸುವ ಕುತ್ಸಿತ ಬುದ್ಧಿ ಇದೆ. ಇಂತಹ ಧ್ವಂಸ ಸಂಸ್ಕೃತಿಯನ್ನು ಜಾರಿಗೆ ತಂದ ಸರ್ಕಾರಗಳ ಬಗ್ಗೆ ಸುಪ್ರೀಂ ಕೋರ್ಟ್ ತಳೆದ ನಿಲುವು ಸೂಕ್ತ, ಸಕಾಲಿಕ ಮತ್ತು ಶ್ಲಾಘನೀಯ. ಸುಪ್ರೀಂ ಕೋರ್ಟ್ ಒಂದು ಹೆಜ್ಜೆ ಮುಂದೆ ಹೋಗಿ, ಅಂತಹ ಸರ್ಕಾರಗಳನ್ನು ವಜಾಗೊಳಿಸುವುದು, ಇನ್ನೂ ಉತ್ತಮ.    

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X