ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು, ರಸ್ತೆಗೆ ಓಡಾಡುವ ವಾಹನಗಳ ಸವಾರರ ಮೇಲೆ ಹಾಗೂ ಶಾಲಾ ಮಕ್ಕಳ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿರುವುದಾಗಿ ನಾಗರಿಕರು ದೂರಿದ್ದಾರೆ.
ಮಂಗಗಳ ಕಾಟ ತಾಳಲಾರದೇ ಸಾರ್ವಜನಿಕರು ಮನೆಯಿಂದ ಹೊರಗಡೆ ಹೋಗಲೂ ಹಿಂಜರಿಯುವಂತಾಗಿದೆ. ಪಟ್ಟಣದಲ್ಲಿ ಹಿಂದೆ ಒಂದು ವಾರದೊಳಗೆ ಸುಮಾರು 9 ಜನರ ಮೇಲೆ ಮಂಗಗಳು ದಾಳಿ ಮಾಡಿದ್ದರಿಂದ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು.
ಪಟ್ಟಣದ ಸಬೇರ ಬೇಗಂ (62), ಸಂತೋಷಿ (42), ವಿದ್ಯಾರ್ಥಿ ಸನಾ(7), ವಿದ್ಯಾರ್ಥಿ ಮಸ್ಕಾನ್ ತಂದೆ ರಫಿ (16) ಸೇರಿ ಅನೇಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಮಂಗಗಳು ಏಕಾಏಕಿ ಹಿಂಡು ಹಿಂಡಾಗಿ ವಾಹನ ಸವಾರರ ಮೇಲೆ ಎಗರುತ್ತಿದೆ. ನಡೆದುಕೊಂಡು ಹೋಗುವ ಪಾದಚಾರಿಗಳನ್ನು ಬಿಡದೇ ಕಾಟಕೊಡುತ್ತಿದೆ. ಗ್ರಾಮದಲ್ಲಿನ ಮೊಬೈಲ್ ಟವರ್ ಮೇಲೆಯೇ ರಾತ್ರಿ ಕಾಲ ಕಳೆಯುವ ಮಂಗಗಳು ಹಗಲಿನಲ್ಲಿ ಮನೆಗಳ ಮಾಳಿಗೆಯಿಂದ ಮಾಳಿಗೆಗೆ ಜಿಗಿಯುತ್ತ ನೆಮ್ಮದಿ ಹಾಳು ಮಾಡಿದೆ ಎನ್ನುತ್ತಾರೆ ಗ್ರಾಮಸ್ಥರು.
ಇದನ್ನು ಓದಿದ್ದೀರಾ? ಬೆಳಗಾವಿ ಡಿಸಿಸಿ ಬ್ಯಾಂಕ್ ಮೇಲಿನ ಸುದೀರ್ಘ ವರ್ಷಗಳ ಹಿಡಿತ ಕಳೆದುಕೊಂಡ ಕತ್ತಿ ಕುಟುಂಬ
ಈ ಬಗ್ಗೆ ಸ್ಥಳೀಯ ನಿವಾಸಿ ಅಮ್ಜದ್ ಅಲಿ ಮಾತನಾಡಿ, ಮಂಗಗಳ ಹಾವಳಿಯಿಂದ ಬೇಸತ್ತ ಪಟ್ಟಣದ ಮಕ್ಕಳು ಮುಂಜಾನೆ ಶಾಲೆಗೆ ಹೋಗುವುದಕ್ಕೂ ಹೆದರುತ್ತಿದ್ದಾರೆ. ರಸ್ತೆಯ ಮೇಲೆ ಎಲ್ಲೆಂದರಲ್ಲಿ ಗುಂಪಾಗಿ ಕುಳಿತುಕೊಳ್ಳುತ್ತಿರುವ ಮಂಗಗಳಿಗೆ ಹೆದರುತ್ತಿದ್ದಾರೆ. ರಸ್ತೆಯಲ್ಲಿ ದ್ವಿಚಕ್ರ ಸವಾರರು ಸಂಚರಿಸುವುದಕ್ಕೂ ಕಷ್ಟವಾಗುತ್ತಿದೆ. ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಮಂಗಗಳು ಜಿಗಿಯುತ್ತ ಬರುವುದರಿಂದ ಹಲವರು ಬೈಕ್‌ನಿಂದ ಬಿದ್ದಿದ್ದು, ಗಾಯಗಳು ಆಗಿವೆ ಎಂದು ತಿಳಿಸಿದರು.
ಸಂಬಂಧಪಟ್ಟ ಇಲಾಖೆ ಮಂಗಗಳನ್ನು ತಕ್ಷಣ ಸೆರೆ ಹಿಡಿದು ಸ್ಥಳಾಂತರಿಸಬೇಕು. ಮುಂದೆ ಭಯಾನಕ ಘಟನೆಗಳು ಸಂಭವಿಸಿದರೆ ಪುರಸಭೆ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
