ಹೆಚ್ ಡಿ ಕುಮಾರಸ್ವಾಮಿ ಕುರಿತು ಸಚಿವ ಜಮೀರ್ ಅಹಮದ್ ನೀಡಿದ ಹೇಳಿಕೆ ಕ್ಷೇತ್ರದಲ್ಲಿ ಪರಿಣಾಮ ಬೀರಿದೆ. ಇದರಿಂದ ನನಗೆ ಬರುವ ಒಂದಿಷ್ಟು ಮತಗಳ ಬಂದಂತೆ ಕಾಣುತ್ತಿಲ್ಲ. ನಾನು ನಿರೀಕ್ಷಿಸಿದ ಮತಗಳಲ್ಲಿ ಹಿನ್ನಡೆಯಾಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಹೇಳಿದರು.
ಚನ್ನಪಟ್ಟಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಸಂಪೂರ್ಣವಾಗಿ ಹೋರಾಡಿದ್ದೇನೆ. ಆದರೆ, ದೇವೇಗೌಡರು ಮೊಮ್ಮಗನನ್ನು ಗೆಲ್ಲಿಸಿಕೊಂಡು ಬರಲು ಶಪಥ ಮಾಡಿದಂತೆ ಕಾಣುತ್ತಿದೆ. ಅವರ ಕೊನೆಗಳಿಗೆಯ ಪ್ರಚಾರ ಜೆಡಿಎಸ್‌ಗೆ ಲಾಭವಾಗಿದೆ” ಎಂದರು.
“ಕುಮಾರಸ್ವಾಮಿ ಅವರು ಕ್ಷೇತ್ರ ಉಳಿಸಿಕೊಳ್ಳಲು ಸಾಕಷ್ಟು ತಂತ್ರಗಳನ್ನು ಮಾಡಿದ್ದಾರೆ. ದೇವೇಗೌಡರ ಕಣ್ಣೀರು ಅದು ಬೇರೆಯೇ ಕೆಲಸ ಮಾಡುತ್ತದೆ. ದೇವೇಗೌಡರನ್ನು ಬೈದರೆ ಸಹಿಸಿಕೊಳ್ಳದೇ ಇರುವ ಮತದಾರರು ಇದ್ದಾರೆ. ಕಾಂಗ್ರೆಸ್ ಇಲ್ಲಿ ಗೆಲ್ಲುವ ವಾತಾವರಣ ಇರಲಿಲ್ಲ. ನಾನು ಪಕ್ಷೇತರವಾಗಿ ಗೆದ್ದಿದ್ದೇನೆ. ಇನ್ನೂ ಆತ್ಮಸಾಕ್ಷಿ ಕುಗ್ಗಿಲ್ಲ” ಎಂದು ತಿಳಿಸಿದರು.
“ಆಡಳಿತ ಪಕ್ಷ ನಮ್ಮದಿದೆ. ರಾಜ್ಯದಲ್ಲಿ ಸರ್ಕಾರದ ಗ್ಯಾರಂಟಿಗಳು ಕೂಡ ಕ್ಷೇತ್ರದಲ್ಲಿ ಪರಿಣಾಮ ಬೀರಿವೆ. ನಮ್ಮ ಕಾಂಗ್ರೆಸ್ ನಾಯಕರು ನನ್ನ ಬೆನ್ನಿಗೆ ನಿಂತು ಸಾಕಷ್ಟು ಹೋರಾಟ ಮಾಡಿದ್ದಾರೆ. ಫಲಿತಾಂಶ ಏನಾಗುತ್ತೋ ಕಾದು ನೋಡಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಧ್ವಂಸ ಸಂಸ್ಕೃತಿಗೆ ಸುಪ್ರೀಂ ಸುತ್ತಿಗೆ ಏಟು
“ಒಕ್ಕಲಿಗ ಜನರು ದೇವೇಗೌಡರ ಕುಟುಂಬಕ್ಕೆ ಅಂಟಿಕೊಂಡಿದ್ದಾರೆ. ಯಾವಾಗ ನಮ್ಮನ್ನು ಒಪ್ಪಿಕೊಳ್ಳುತ್ತಾರೋ ಅವಾಗ ನಾವು ಸಮುದಾಯದ ನಾಯಕರಾಗಲು ಸಾಧ್ಯ. ನೋಡೋಣ ಮುಂದೆ” ಎಂದು ತಿಳಿಸಿದರು.
ಚನ್ನಪಟ್ಟಣ ಚುನಾವಣೆ ಪ್ರಚಾರದ ವೇಳೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಅಹಮದ್ ಅವರು ಕಾಲಾ ಕುಮಾರಸ್ವಾಮಿ ಎಂದು ಲೇವಡಿ ಮಾಡಿದ್ದರು. ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಒಕ್ಕಲಿಗರನ್ನು ಜಮೀರ್ ನಿಂದಿಸಿದ್ದಾರೆ ಎಂದು ಪ್ರಚಾರ ಮಾಡಲಾಯಿತು. ನಂತರ ಮೈಸೂರಿನಲ್ಲಿ ಜಮೀರ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದರು.