ಶಿಂದೆಯ ಶಿವಸೇನೆ ಬಣದ ಸಚಿವರು ಚುನಾವಣೆಯ ಫಲಿತಾಂಶ ವ್ಯತಿರಿಕ್ತವಾದರೆ ಉದ್ಧವ್ ಬಣಕ್ಕೂ ಬರಬಹುದು ಅಥವಾ ಉದ್ಧವ್ ಶಿವಸೇನೆಯ ಕಾರ್ಯಕರ್ತರು ಉದ್ಧವ್ ಸೇನೆಯನ್ನು ತೊರೆದು ಶಿಂದೆಯ ಸೇನೆಗೂ ಸೇರಬಹುದು. NCP ಕಥೆಯೂ ಇದೆ ಆಗಿದೆ. ಈಗಾಗ್ಲೇ NCP ಅಜಿತ್ ಪವಾರ್ ಮಹಾಯುತಿ ಬಣದೊಂದಿಗೆ ಮುನಿಸಿಕೊಂಡಿದ್ದಾರೆ. ಪ್ರಾದೇಶಿಕ ಪಕ್ಷಗಳನ್ನು ಛಿದ್ರ ಛಿದ್ರ ಮಾಡಿದ ಬಿಜೆಪಿ ಮಾತ್ರ ಮತ್ತೊಮ್ಮೆ ಕಾಂಗ್ರೆಸ್ ಹೊರತುಪಡಿಸಿದ ಎಂತಹ ಮೈತ್ರಿಗೂ ಸಿದ್ದವಾಗಲಿದೆ.
ನಾವೆಲ್ಲಾ ರಾಜ್ಯದ ಉಪಚುನಾವಣೆ ಬಗ್ಗೆ ತಲೆ ಕೆಡಿಸಿಕೊಂಡು ಪಕ್ಕದ ಮಹಾರಾಷ್ಟ್ರದ ರಾಜ್ಯ ದೊಡ್ಡ ತಮಾಷೆಯನ್ನ ಮಿಸ್ ಮಾಡ್ಕೋತಾ ಇದ್ದೀವಿ. (ತಮಾಷಾ ಅನ್ನೋದು ಮಹಾರಾಷ್ಟ್ರದ ಜನಪ್ರಿಯ ಕಲಾ ಪ್ರಕಾರವೂ ಹೌದು) ಅಲ್ಲಿನ ಮತದಾರರ ಗೊಂದಲ ನಮಗೂ ನಿಮಗೂ ಎಂದಿಗೂ ಬಾರದಿರಲಿ.
ಮಹಾರಾಷ್ಟ್ರದಲ್ಲಿ ಬಾಳಾಠಾಕ್ರೆ ಕಟ್ಟಿ ಬೆಳೆಸಿದ ಶಿವಸೇನೆ ಎಂಬ ಪ್ರಬಲ ಪಕ್ಷವಿತ್ತು. ಅವರ ಕಾಲಾನಂತರ ಅದರ ಹೊಣೆಗಾರಿಕೆ ಅವರ ಮಗ ಉದ್ಧವ್ ಠಾಕ್ರೆ ಹೆಗಲೇರಿತು. ಬಾಳಾ ಠಾಕ್ರೆ ಮತ್ತು ಉದ್ಧವ್ ಮೊದಲಿನಿಂದಲೂ NDA ಭಾಗವಾಗಿಯೇ ಇದ್ದರು. ಬಿಜೆಪಿಗೆ ಸದಾ ಬೆಂಬಲಿಸಿದರು. ಇಬ್ಬರದ್ದೂ ಉಗ್ರ ಹಿಂದುತ್ವ ಪ್ರತಿಪಾದಿಸಿದ ಪಕ್ಷಗಳೇ ಆಗಿದ್ದವು. ಆದರೆ 2019ರಲ್ಲಿ ಉದ್ಧವ್ ಬಿಜೆಪಿ ನೇತೃತ್ವದ NDA ತೊರೆದು ಯುಪಿಎ ಬಣ ಸೇರಿದರು! “ಬಿಜೆಪಿ ರಾಷ್ಟ್ರ ರಾಜಕಾರಣ ನೋಡಿಕೊಳ್ಳುತ್ತದೆ, ನಾವು ರಾಜ್ಯದಲ್ಲಿ ರಾಜಕಾರಣ ನೋಡಿಕೊಳ್ಳುವೆವು ಎಂದುಕೊಂಡಿದ್ದೆವು. ಆದರೆ ನಮ್ಮ ಮನೆಯಲ್ಲೇ ನಮ್ಮನ್ನು ಮುಗಿಸಿಬಿಡುವ ಪಿತೂರಿಗಳನ್ನು ಬಿಜೆಪಿ ಮಾಡಿತು. ನಾವು ಹೋರಾಟ ಮಾಡಲೇಬೇಕಿತ್ತು NDA ಬಣದಿಂದ ಹೊರಬರಬೇಕಿತ್ತು” ಎಂದರು ಉದ್ಧವ್.
ದೇವೇಂದ್ರ ಫಡ್ನವೀಸ್ ನಾಯಕತ್ವದ ಬಿಜೆಪಿ ಆಡಳಿತಾವಧಿಯಲ್ಲಿ ಶಿವಸೇನೆಯನ್ನು ಕುಗ್ಗಿಸುವ ಎಲ್ಲ ಪ್ರಯತ್ನಗಳು ನಡೆದಿದ್ದರಿಂದ ಉದ್ಧವ್ ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು NDA ಮೈತ್ರಿಕೂಟದಿಂದ ಹೊರಬರಲೆಬೇಕಿತ್ತು ಎಂಬ ವಾದ ಒಂದಡೆಯಾದರೆ, ಉದ್ಧವ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವ ಆಸೆಯಿಂದ ಹೊಸ ಮೈತ್ರಿ ಮಾಡಿಕೊಂಡರು ಎನ್ನುವ ವಾದ ಇನ್ನೊಂದೆಡೆ. ವಾದಗಳು ಏನೇ ಇರಲಿ ಉದ್ಧವ್ NDA ತೊರೆದರು, ಚುನಾವಣೆಯ ನಂತರ ಶರದ್ ಪವಾರ್ NCP ಜೊತೆ ಮೈತ್ರಿ ಮಾಡಿಕೊಂಡು ರಾಜ್ಯದ ಮುಖ್ಯಮಂತ್ರಿಯೂ ಆದರೂ.
2019ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ಅವರು ಯಶಸ್ವಿಯಾಗಿ ಕೆಲ ವರುಷ ಆಡಳಿತ ನಡೆಸಿದರು. 2021ರ ಸಮೀಕ್ಷೆಯ ಪ್ರಕಾರ ದೇಶದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯೂ ಆಗಿದ್ದರು. ಆದರೆ 2022ರಲ್ಲಿ ಉದ್ಧವ್ ಎಂದೂ ಊಹಿಸಿರದ ದಂಗೆಯೊಂದು ನಡೆದೇ ಹೋಗಿತ್ತು. ಉದ್ಧವ್ ಠಾಕ್ರೆಯ ಬಲಗೈ ಬಂಟ, ನಗರಾಭಿವೃದ್ದಿ ಸಚಿವ, ಗೃಹ ಖಾತೆ ನೋಡಿಕೊಳ್ಳುತ್ತಿದ್ದ ಏಕನಾಥ್ ಶಿಂದೆಯನ್ನು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಏಕನಾಥ್ ಶಿಂದೆ ಮತ್ತವರ ಬೆಂಬಲಿಗರನ್ನು ಬಿಜೆಪಿ ಮೊದಲು ಸೂರತ್ ನಗರಕ್ಕೆ ಕೊಂಡೊಯ್ದು ನಂತರ ಅಸ್ಸಾಂ ಸುತ್ತಾಡಿಸಿ ಒಂದು ಒಪ್ಪಂದ ಮಾಡಿಕೊಂಡು ಮುಂಬೈಗೆ ಕರೆ ತಂದಿತ್ತು!
ವಾಪಸ್ ಬಂದ ಏಕನಾಥ್ ಶಿಂದೆ ಬಳಗ ತಮ್ಮದೇ ನಿಜವಾದ ಶಿವಸೇನೆ ಎಂದು ಹೇಳಿಕೊಂಡಿತು. ಬಿಜೆಪಿಗೆ ಬೆಂಬಲಿಸಿದ ಏಕನಾಥ್ ಶಿಂದೆ ಮುಖ್ಯಮಂತ್ರಿಯಾದರು, ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾದರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಫಡ್ನವೀಸ್ ಒಲ್ಲದ ಮನಸ್ಸಿನಿಂದ ಉಪ ಮುಖ್ಯಮಂತ್ರಿಯ ಪಟ್ಟಕ್ಕೆ ಹಿಂಬಡ್ತಿ ಪಡೆದರು. ಚುಪ್ ಚಾಪ್ ನಾವು ಹೇಳಿದ ಹಾಗೆ ಮಾಡಬೇಕು ಎಂಬ ರಾಷ್ಟ್ರೀಯ ನಾಯಕರ ಆದೇಶಕ್ಕೆ ಅವರು ತಲೆ ಬಾಗಲೇಬೇಕಾಯಿತು. ಮತ್ತೊಂದೆಡೆ ಶರದ್ ಪವಾರ್ ಅವರ NCP ಯಲ್ಲೂ ಭಿನ್ನಮತದ ಗಾಳಿ ಸುಳಿದಾಡತೊಡಗಿತ್ತು. NCPಯ ಅಜಿತ್ ಪವಾರ್ ಕೂಡ ತಮ್ಮ ಬೆಂಬಲಿಗರನ್ನು ಕರೆದುಕೊಂಡು ಶಿಂದೆ, ಫಡ್ನವೀಸ್ ಅವರ ಬಣ ಸೇರಿ ರಾಜ್ಯದ ಮತ್ತೊಬ್ಬ ಉಪಮುಖ್ಯಮಂತ್ರಿಯಾದರು! ಈ ಮೂವರ ಬಳಗ ಈಗ ಮಹಾಯುತಿ ಬಳಗವಾಗಿದೆ. ಆಘಾತದಿಂದ ಹೊರಬಂದ ಉದ್ಧವ್ ಮತ್ತು ಶರದ್ ಪವಾರ್, ಕಾಂಗ್ರೆಸ್ ಜೊತೆಗೂಡಿ ಮಹಾ ವಿಕಾಸ್ ಅಘಾಡಿ ರಚಿಸಿದೆ. ಈ ಚುನಾವಣೆ ಮಹಾ ವಿಕಾಸ್ ಅಘಾಡಿ ಮತ್ತು ಮಹಾಯುತಿಯ ನಡುವಿದೆ. ಮಹಾರಾಷ್ಟ್ರದ ಮತದಾರ ಇಂದು ನಿಜವಾದ ಶಿವಸೇನೆ, ನಿಜವಾದ NCP ಯಾವುದೆಂಬುದನ್ನ ನಿರ್ಧರಿಸಬೇಕಿದೆ. ಅಧಿಕಾರಕ್ಕಾಗಿ ನೇರ ಕುದುರೆ ವ್ಯಾಪಾರಕ್ಕಿಳಿದು ಇಷ್ಟೆಲ್ಲಾ ಗೊಂದಲ ಸೃಷ್ಟಿಸಿದ ಬಿಜೆಪಿ ಮಾತ್ರ ತೆರೆಯ ಮರೆಯ ಸೂತ್ರಧಾರನ ಪಾತ್ರವಹಿಸಿದೆ.
ಇದನ್ನು ಓದಿದ್ದೀರಾ?: ಬಲಪಂಥದ ಬಲದಿಂದ ಬಾಣ ಬಿಡುವ ಮೋದಿ, ಉತ್ತರ ಎಂದಾಗ ಕುಮಾರನಾಗುವುದೇಕೆ?
ಶಿವಸೇನೆಯ ಬಿಲ್ಲು ಬಾಣದ ಚುನಾವಣಾ ಗುರುತು/ಚಿಹ್ನೆ ಏಕನಾಥ್ ಶಿಂದೆಯ ಬಳಗಕ್ಕೆ ಸೇರಿದ್ದು ಎಂದು ಚುನಾವಣಾ ಆಯೋಗ ಮತ್ತು ದೇಶದ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿ ಆಗಿದೆ.
ಈ ನಡುವೆ ಹೊಸದೊಂದು ಬೆಳವಣಿಗೆಯಾಯಿತು. ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದೆ ಮಹಾ ವಿಕಾಸ್ ಅಘಾಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಮತ ನೀಡಿದ್ದರಿಂದ ಮಹಾಯುತಿ ಬಲ ಅಡಗಿಹೋಗಿತ್ತು. ಕುಗ್ಗಿ ಹೋಗಿದ್ದ ಮಹಾಯುತಿಗೆ ಚುನಾವಣಾ ಆಯೋಗದ ಅಚ್ಚರಿಯ ನಿರ್ಧಾರ ಜೀವ ನೀಡಿತು. ಚುನಾವಣಾ ಆಯೋಗ ಏಕಾಏಕಿ ಚುನಾವಣೆಯನ್ನು ಎರಡು ತಿಂಗಳ ಕಾಲ ಮುಂದೂಡಿತು!
ಹರಿಯಾಣ ಜಮ್ಮು ಕಾಶ್ಮೀರ ಮತ್ತು ಮಹಾರಾಷ್ಟ್ರದಲ್ಲಿ ಏಕಕಾಲಕ್ಕೆ ವಿಧಾನಸಭಾ ಚುನಾವಣೆಗಳು ನಡೆಯಬೇಕಿತ್ತು. ಆದರೆ ಆಗಸ್ಟ್ ಬದಲಾಗಿ ಮಹಾರಾಷ್ಟ್ರದ ಚುನಾವಣೆಗಳು ನವೆಂಬರ್‍ನಲ್ಲಿ ಫಿಕ್ಸ್ ಆಯಿತು! ಅಕ್ಟೋಬರ್ 15ರ ಹೊತ್ತಿಗೆ ಚುನಾವಣಾ ನೀತಿಸಂಹಿತೆ ಜಾರಿಯಾಗಬೇಕಿತ್ತು. ಮಹಾಯುತಿಗೆ ಈ ಎರಡು ತಿಂಗಳ ಮುಂದೂಡಿಕೆ ವರವಾಗಿತ್ತು. ಸುಮಾರು 50 ಜನಪರ ಕೆಲಸಗಳಿಗೆ ಒಂದೇ ದಿನದಲ್ಲಿ ಕ್ಯಾಬಿನೆಟ್ ಸಮ್ಮತಿ ನೀಡಿ ಆದೇಶ ಜಾರಿ ಮಾಡಿಯೇಬಿಟ್ಟಿತು! ಹೆಂಗಸರ ಖಾತೆಗೆ ಐದು ತಿಂಗಳ ಮುಂಗಡ ಹಣ ಹಾಕಲಾಯಿತು. ಶಿಕ್ಷಕರ ವೇತನ ಮೂರು ಪಟ್ಟು ಮಾಡಲಾಯಿತು. ಧಾರಾವಿ ಸ್ಲಂನಲ್ಲಿರುವ ಬಡವರಿಗೆ ವಸತಿಕಟ್ಟಡ ಕಟ್ಟಲು 255 ಎಕರೆಯನ್ನು ಅದಾನಿ ಕಂಪನಿಗೆ ನೀಡಲಾಯಿತು. ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳಿಗೆ ಹೊಸ ಯೋಜನೆಯ ಭರವಸೆ ನೀಡಲಾಯಿತು. ಇಷ್ಟೆಲ್ಲಾ ಪಾಪ್ಯುಲಿಸ್ಟ್ ಸ್ಕೀಂಗಳ ಘೋಷಣೆ ಬಳಿಕ ಚುನಾವಣೆಗಳು ದಿನಾಂಕ ಘೋಷಣೆಯಾದವು. ನಂಬಿ ಇದೆಲ್ಲವೂ mere co-incidence ಅಷ್ಟೆ.
ಶಿಂದೆಯ ಶಿವಸೇನೆ ಬಣದ ಸಚಿವರು ಚುನಾವಣೆಯ ಫಲಿತಾಂಶ ವ್ಯತಿರಿಕ್ತವಾದರೆ ಉದ್ಧವ್ ಬಣಕ್ಕೂ ಬರಬಹುದು ಅಥವಾ ಉದ್ಧವ್ ಶಿವಸೇನೆಯ ಕಾರ್ಯಕರ್ತರು ಉದ್ಧವ್ ಸೇನೆಯನ್ನು ತೊರೆದು ಶಿಂದೆಯ ಸೇನೆಗೂ ಸೇರಬಹುದು. NCP ಕಥೆಯೂ ಇದೆ ಆಗಿದೆ. ಈಗಾಗ್ಲೇ NCP ಅಜಿತ್ ಪವಾರ್ ಮಹಾಯುತಿ ಬಣದೊಂದಿಗೆ ಮುನಿಸಿಕೊಂಡಿದ್ದಾರೆ. ಪ್ರಾದೇಶಿಕ ಪಕ್ಷಗಳನ್ನು ಛಿದ್ರ ಛಿದ್ರ ಮಾಡಿದ ಬಿಜೆಪಿ ಮಾತ್ರ ಮತ್ತೊಮ್ಮೆ ಕಾಂಗ್ರೆಸ್ ಹೊರತುಪಡಿಸಿದ ಎಂತಹ ಮೈತ್ರಿಗೂ ಸಿದ್ದವಾಗಲಿದೆ. ಮಹಾರಾಷ್ಟ್ರದಲ್ಲಿ ಯಾರೆ ಗೆಲ್ಲಲಿ ಶಿವಸೇನೆ ಮತ್ತು NCPಯಂತೂ ಅಧಿಕಾರದಲ್ಲಿರಲಿವೆ… ಯಾವ ಬಣ ಎಂಬುದಷ್ಟೇ ಈಗ ನಿರ್ಧಾರವಾಗಬೇಕಿದೆ… ಮತದಾರ ಆಯ್ಕೆ ಮಾಡಿಯೂ ಆಯ್ಕೆ ಮಾಡದ ವಾತಾವರಣ ಸೃಷ್ಟಿಯಾದುದು ಪ್ರಜಾತಂತ್ರದ ಅತಿ ದೊಡ್ಡ ದುರಂತ.