ಮಧ್ಯಪ್ರದೇಶದ ವಿಜಯಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಬೆನ್ನಲ್ಲೇ ಹಿಂಸಾಚಾರ ನಡೆದಿದೆ. ದುರುಳರು ದಲಿತರ ಪ್ರಾಬಲ್ಯವಿರುವ ಗ್ರಾಮಕ್ಕೆ ಬೆಂಕಿ ಹಚ್ಚಿದ್ದಾರೆ. ಬುಧವಾರ ತಡರಾತ್ರಿ ಮತದಾನ ಮುಗಿದ ಬಳಿಕ ಗೊಹ್ತಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ದುಷ್ಕರ್ಮಿಗಳು ಗ್ರಾಮದಲ್ಲಿ ಗಲಾಟೆ ಸೃಷ್ಟಿಸಿ, ಕಲ್ಲು ತೂರಾಟ ನಡೆಸಿ ಆಸ್ತಿ ಪಾಸ್ತಿಗಳನ್ನು ಧ್ವಂಸ ಮಾಡಿದ್ದಾರೆ. ಭಯಭೀತರಾದ ಅನೇಕ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನು ಪರಿಸ್ಥಿತಿ ಈ ಹಂತಕ್ಕೆ ತಲುಪಿದರೂ ಕೂಡಾ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯಪುರ ಪೊಲೀಸ್ ಠಾಣೆ ಪ್ರಭಾರಿ ಪಪ್ಪು ಸಿಂಗ್ ಯಾದವ್, “ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತಂದಿವೆ. ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ಬಳಿಕ ಹಿಂಸಾಚಾರ ನಡೆದಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ದಲಿತ ವ್ಯಕ್ತಿ ಕುರ್ಚಿಯಲ್ಲಿ ಕುಳಿತಿದ್ದಕ್ಕೆ ಬ್ರಾಹ್ಮಣನ ದಾಂಧಲೆ
ವಿಜಯಪುರದಲ್ಲಿ ಬುಧವಾರ ಹಿಂಸಾಚಾರ, ಪ್ರತಿಭಟನೆ, ಮತಗಟ್ಟೆ ವಶಪಡಿಸಿಕೊಂಡ ಆರೋಪದ ನಡುವೆಯೇ ಉಪಚುನಾವಣೆ ನಡೆದಿದೆ. ಮತದಾನ ಮಾಡುವ ನಿರಾಕರಿಸಲಾಗಿದೆ ಎಂಬ ಆರೋಪದಲ್ಲಿ ಬುಧವಾರ ರಾತ್ರಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಹಿಂಸಾಚಾರ ನಡೆದಿದೆ. ಮೂವರು ಗಾಯಗೊಂಡಿದ್ದಾರೆ.
ವಿಜಯಪುರದಲ್ಲಿ ಉಪಚುನಾವಣೆಗೆ ಎರಡು ದಿನಗಳ ಮೊದಲು ಹಿಂಸಾಚಾರ ಪ್ರಾರಂಭವಾಗಿದೆ. ಗುಂಪೊಂದು ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಮೂವರು ಗಾಯಗೊಂಡಿದ್ದಾರೆ. ಬಿಜೆಪಿ- ಕಾಂಗ್ರೆಸ್‌ನ ಹೊಡೆದಾಟಕ್ಕೆ ದಲಿತರು ನಷ್ಟ ಅನುಭವಿಸುವಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ವಿಜಯಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಮನಿವಾಸ್ ರಾವತ್ ಕಾಂಗ್ರೆಸ್‌ಗೆ ಮತ್ತು ರಾಜ್ಯ ವಿಧಾನಸಭೆಗೆ ರಾಜೀನಾಮೆ ನೀಡಿದ ಹಿನ್ನೆಲೆ ಈ ಕ್ಷೇತ್ರದಲ್ಲಿ ವಿಧಾನಸಭಾ ಉಪಚುನಾವಣೆ ನಡೆದಿದೆ. ಕಾಂಗ್ರೆಸ್ ತೊರೆದ ರಾಮನಿವಾಸ್ ರಾವತ್ ನಂತರ ಬಿಜೆಪಿಗೆ ಸೇರಿದ್ದು ಸದ್ಯ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಂಪುಟದಲ್ಲಿ ರಾಜ್ಯ ಅರಣ್ಯ ಸಚಿವರಾಗಿದ್ದಾರೆ.
