ಸತತ ನಾಲ್ಕು ದಿನಗಳ ಕಾಲ ಯುಪಿಎಸ್‌ಸಿ ಆಕಾಂಕ್ಷಿಗಳು ನಡೆಸಿದ ಪ್ರತಿಭಟನೆಗೆ ಕೊನೆಗೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮಣಿದಿದೆ. ಒಂದೇ ದಿನದಲ್ಲಿ ಉತ್ತರ ಪ್ರದೇಶ ಲೋಕಸೇವಾ ಆಯೋಗ (ಯುಪಿಪಿಎಸ್‌ಸಿ) ಪೂರ್ವಭಾವಿ ಪರೀಕ್ಷೆಯನ್ನು ನಡೆಸಲು ಯೋಗಿ ಸರ್ಕಾರ ಅಸ್ತು ಎಂದಿದೆ.
ಪಿಸಿಎಸ್ ಮತ್ತು ಆರ್‌ಒ/ಎಆರ್‌ಒ ಪರೀಕ್ಷೆಗಳನ್ನು ಒಂದು ದಿನ ಮತ್ತು ಒಂದೇ ಪಾಳಿಯಲ್ಲಿ ನಡೆಸಬೇಕು ಎಂದು ಒತ್ತಾಯಿಸಿ ಪ್ರಯಾಗ್‌ರಾಜ್‌ನಲ್ಲಿ ಹಲವು ಆಕಾಂಕ್ಷಿಗಳು ಯುಪಿಪಿಎಸ್‌ಸಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ನಾಲ್ಕು ದಿನಗಳ ಪ್ರತಿಭಟನೆಯ ಬಳಿಕ ಸರ್ಕಾರವು ಈ ನಿರ್ಧಾರವನ್ನು ತಳೆದಿದೆ.
ಯುಪಿಎಸ್‌ಸಿ ಕಾರ್ಯದರ್ಶಿ ಅಶೋಕ್‌ಕುಮಾರ್ ಗುರುವಾರ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು. ಅದಾದ ಬಳಿಕ ಆರ್‌ಒ/ಎಆರ್‌ಒ ಪರೀಕ್ಷೆಗಾಗಿ ಆಯೋಗದಿಂದ ಸಮಿತಿಯನ್ನು ರಚಿಸಲಾಗಿದೆ ಎಂದು ಸಿಎಂ ಕಚೇರಿ ಹೇಳಿದೆ.
ಇದನ್ನು ಓದಿದ್ದೀರಾ? ಬ್ರೇಕಿಂಗ್ ನ್ಯೂಸ್ | ‘ಬುಲ್ಡೋಜರ್ ನ್ಯಾಯ’ ನಿಷೇಧ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು; ಯೋಗಿ ಸರ್ಕಾರಕ್ಕೆ ತರಾಟೆ
प्रयागराज में प्रतियोगी छात्रों के साथ यूपी सरकार और उत्तर प्रदेश लोकसेवा आयोग का रवैया बेहद असंवेदनशील और दुर्भाग्यपूर्ण है।
— Rahul Gandhi (@RahulGandhi) November 14, 2024
नॉर्मलाइजेशन के नाम पर गैर-पारदर्शी व्यवस्था अस्वीकार्य है और एक पाली में परीक्षा की छात्रों की मांग बिल्कुल न्यायपूर्ण है।
शिक्षा व्यवस्था को ध्वस्त… pic.twitter.com/XYOdwq98oR
ಈ ಬಗ್ಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಪ್ರಯಾಗ್‌ರಾಜ್‌ನಲ್ಲಿರುವ ಯುಪಿಎಸ್‌ಸಿ ವಿದ್ಯಾರ್ಥಿಗಳ ಬಗ್ಗೆ ಯುಪಿ ಸರ್ಕಾರ ಮತ್ತು ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗದ ವರ್ತನೆ ಅತ್ಯಂತ ಸಂವೇದನಾರಹಿತ ಮತ್ತು ದುರದೃಷ್ಟಕರವಾಗಿದೆ. ಸಾಮಾನ್ಯೀಕರಣದ ಹೆಸರಿನಲ್ಲಿ ಪಾರದರ್ಶಕವಲ್ಲದ ವ್ಯವಸ್ಥೆ ಸ್ವೀಕಾರಾರ್ಹವಲ್ಲ. ಒಂದೇ ಪಾಳಿಯಲ್ಲಿ ಪರೀಕ್ಷೆಗೆ ವಿದ್ಯಾರ್ಥಿಗಳ ಬೇಡಿಕೆಯು ಸಂಪೂರ್ಣವಾಗಿ ಸಮರ್ಥನೀಯವಾಗಿದೆ” ಎಂದು ಹೇಳಿದ್ದಾರೆ.
“ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವುತ್ತಿರುವ ಬಿಜೆಪಿ ಸರ್ಕಾರದ ಅದಕ್ಷತೆಗೆ ವಿದ್ಯಾರ್ಥಿಗಳೇಕೆ ಬೆಲೆ ತೆರಬೇಕು? ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಬೀದಿಗಿಳಿದು ಹೋರಾಟ ಮಾಡುವಂತಾಗಿದೆ. ಇದೀಗ ಪೊಲೀಸರಿಂದ ಕಿರುಕುಳ ಅನುಭವಿಸುವಂತಾಗಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ತಮ್ಮ ಮತ್ತು ತಮ್ಮ ಕುಟುಂಬದ ಕನಸುಗಳನ್ನು ನನಸಾಗಿಸಲು ಮನೆ ಬಿಟ್ಟು ಅಭ್ಯಾಸ ಮಾಡುತ್ತಿರುವ ಯುವಕರಿಗೆ ಆಗುತ್ತಿರುವ ಈ ಅನ್ಯಾಯವನ್ನು ನಾವು ಒಪ್ಪುವುದಿಲ್ಲ. ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಬೇಡಿಕೆಯನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಅವರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸರ್ವಾಧಿಕಾರದಿಂದ ಹತ್ತಿಕ್ಕಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
