ಸಿರಿಧಾನ್ಯಗಳು ಒಳ್ಳೆಯ ಪೋಷಕಾಂಶ ಹೊಂದಿದ್ದು, ಸಿರಿಧಾನ್ಯಗಳ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸೌಲಭ್ಯಕ್ಕೆ ಉತ್ತಮ ವೇದಿಕೆ ಒದಗಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಓ ಎಸ್ ಜೆ ಸೋಮಶೇಖರ್ ತಿಳಿಸಿದರು.
ಚಿತ್ರದುರ್ಗ ನಗರದ ಎಪಿಎಂಸಿ ಆವರಣದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಿದ್ದ ಸಿರಿಧಾನ್ಯಗಳ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
“ಇಂದಿನ ದಿನಗಳಲ್ಲಿ ಎಲ್ಲಾ ಬೆಳೆಗಳಿಗೆ ರಾಸಾಯನಿಕಗಳನ್ನು ಅತಿ ಹೆಚ್ಚು ಬಳಸಲಾಗುತ್ತಿದ್ದು, ರಾಸಾಯನಿಕಯುಕ್ತ ಆಹಾರಗಳಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಆಹಾರ ಪದಾರ್ಥಗಳು ಕಲುಷಿತಗೊಂಡಿದ್ದು ಈ ನಿಟ್ಟಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಿರಿಧಾನ್ಯಗಳ ಬಳಕೆಯಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿ, ಈ ಸ್ಪರ್ಧೆಯನ್ನು ಸಿರಿಧಾನ್ಯ ಸಿಹಿವಿಭಾಗ , ಮರೆತು ಹೋದ ಖಾದ್ಯ ವಿಭಾಗ ಮತ್ತು ಖಾರದ ವಿಭಾಗ ಎಂದು ಮೂರು ಭಾಗಗಳಾಗಿ ಸ್ಪರ್ಧೆ ಏರ್ಪಡಿಸಲಾಗಿದೆ. 2017ರಿಂದಲೂ ರಾಜ್ಯಮಟ್ಟದ ಸ್ಪರ್ಧೆಯೂ ಸೇರಿ ಸಿರಿಧಾನ್ಯ ಪಾಕ ಸ್ಪರ್ಧೆಯನ್ನು ಆಚರಿಸಲಾಗುತ್ತದೆ. ಜಾಗತೀಕರಣ ಮತ್ತು ಜಾಗತಿಕ ಮಟ್ಟದಲ್ಲಿ ಆದ ಬದಲಾವಣೆಗಳಿಂದ ನಮ್ಮ ಆಹಾರ ಪದ್ಧತಿ ಮತ್ತು ಆಹಾರ ಧಾನ್ಯಗಳಲ್ಲಿ ಬದಲಾವಣೆಗಳಾಗಿದ್ದು ನಮ್ಮವರ ರೂಢಿಗತ ಆಹಾರ ಪದ್ಧತಿಯಿಂದ ಹಿಮ್ಮುಖರಾಗುತ್ತಿದ್ದೇವೆ. ಹೀಗಾಗಿ, ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದೇವೆ. ಸಿರಿಧಾನ್ಯಗಳ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚು ಮಾಡಬೇಕು ಎಂದು ಸಲಹೆ ನೀಡಿದರು.
ಸಿರಿಧಾನ್ಯ ಸಿರಿಧಾನ್ಯ ಪಾಕ ಸ್ಪರ್ಧೆಯ ಮೂರು ವಿಭಾಗಳಿಂದ ಒಟ್ಟು 9 ಮಂದಿ ವಿಜೇತರಿಗೆ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಗುವುದು. ಸಿಹಿ, ಖಾರ ಸಿರಿಧಾನ್ಯ ಖಾದ್ಯಗಳಿಗೆ ಮತ್ತು ಮರೆತು ಹೋದ ಖಾದ್ಯಗಳ ತಿನಿಸಿಗೆ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ವಿಜೇತರಿಗೆ ಕ್ರಮವಾಗಿ ರೂ.5000/-, 3000/- ಹಾಗೂ 2000/- ಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯಮಟ್ಟದ ಸ್ಪರ್ಧೆಯನ್ನು ಮುಂಬರುವ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲಾಗುತ್ತದೆ. ರಾಜ್ಯ ಮಟ್ಟದ “ಸಿರಿಧಾನ್ಯ” ಮತ್ತು “ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ”ಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ವಿಜೇತರು ಸ್ವತಃ ತಿನಿಸನ್ನು ತಯಾರಿಸಲು ಅವಶ್ಯವಿರುವ ಸಾಮಗ್ರಿಗಳೊಂದಿಗೆ ಸಿದ್ಧರಿರಬೇಕು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮೈಸೂರು | ನ.15 ರಿಂದ 25ರವರೆಗೆ ರೈತ, ಕಾರ್ಮಿಕ ವಿರೋಧಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಬಡಗಲಪುರ ನಾಗೇಂದ್ರ
ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಒಟ್ಟು 41 ಜನರು ಭಾಗವಹಿಸಿ, ಸಿರಿಧಾನ್ಯಗಳ ಸಿಹಿ ಹಾಗೂ ಖಾರದ ಖಾದ್ಯಗಳು ಹಾಗೂ ಮರೆತುಹೋದ ವಿವಿಧ ಖಾದ್ಯಗಳಾದ ರಾಗಿಪೇಡ, ರಾಗಿ ಬಿಸ್ಕತ್, ನವಣಕ್ಕಿ ಉಪ್ಪಿಟ್ಟು, ಸಜ್ಜೆ ಕಡಬು, ನವಣೆ ಪೇಡಾ, ಸಾವೆ ಕಿಚಡಿ, ಉದಲೂ ಪಾಯಸ, ಸಜ್ಜೆ ಲಾಡು, ನವಣಕ್ಕಿ ಪಲಾವ್, ಚಿನ್ನಕುರುಳಿ, ಮಾಲ್ದಿ, ಒತ್ತುಶಾವಿಗೆ, ರಾಗಿ ಹಲ್ವ, ಆರ್ಕದ ಅಕ್ಕಿ ಉಂಡೆ, ಸಿರಿಧಾನ್ಯ ಉಂಡೆ, ಒತ್ತುಶಾವಿಗೆ ಕಾಯಿರಸ, ಸಜ್ಜೆರೊಟ್ಟಿ, ಕುಂಬಳಕಾಯಿ ಕಡಬು, ರಾಗಿ ಕಿಲ್ಸ್, ಸಿಹಿ ಪೊಂಗಲ್, ಸಿರಿಧಾನ್ಯ ಹಲ್ವ, ರಾಗಿ ದೋಸೆ, ನವಣಕ್ಕಿ ತಂಬಿಟ್ಟು, ರಾಗಿ ಬೆಲ್ಲದ ಬರ್ಫಿ, ಸಾಮೆ ಬಿಸಿ ಬೇಳೆಬಾತ್, ನವಣಕ್ಕಿ ಚಕ್ಕುಲಿ, ಸಾವೆಅಕ್ಕಿ ನಿಪ್ಪಟ್ಟು, ಸಜ್ಜೆ ಮಸಾಲೆ ರೊಟ್ಟಿ, ಸಾಮೆ ಅಕ್ಕಿಯ ಚಕ್ಕುಲಿ, ಹಾರಕ ಪಲಾವ್, ಬರಗು, ಅರ್ಕ, ಸಾವಯವ ಬೆಲ್ಲದಿಂದ ತಯಾರಿಸಿದ ಕೇಕ್ ಸೇರಿದಂತೆ ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯ ಪ್ರದರ್ಶಿಸಿದರು.

