ರಾಜ್ಯ ಹೆದ್ದಾರಿ ಸಂಖ್ಯೆ 126ರ ಸೇತುವೆ ಕುಸಿತ ಉಂಟಾಗಿ ಎರಡು ತಿಂಗಳಾದರೂ ದುರಸ್ತಿ ಮಾಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ರಾಜ್ಯ ಹೆದ್ದಾರಿ ಸಂಖ್ಯೆ 126ರ ರಸ್ತೆಮಾರ್ಗ ಕಮಲಾಪುರದಿಂದ ಜೀವಣಗಿ, ರಟಗಲ್, ಟೆಂಗಳಿ ಕ್ರಾಸ್, ಚಿತ್ತಾಪುರ, ಚಿಂಚೋಳಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಾಜ್ಯ ಹೆದ್ದಾರಿಯಾಗಿದ್ದು, ಈ ರಸ್ತೆ ಮಧ್ಯೆ ಕಮಲಾಪುರದಿಂದ 500 ಮೀಟರ್ ದೂರದಲ್ಲಿ ಸೇತುವೆಯಿದೆ. ಆ ಸೇತುವೆ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ಜೀವಣಗಿ, ರಟಗಲ್, ಟೆಂಗಳಿ ಕ್ರಾಸ್, ಚಿತ್ತಾಪುರ, ಚಿಂಚೋಳಿ ಗ್ರಾಮ ತಾಲೂಕುಗಳಿಗೆ ಸಂಚರಿಸಲು ಅದೊಂದೇ ಮಾರ್ಗವಾಗಿತ್ತು. ಈ ರಸ್ತೆ ಮೂಲಕ ನಿರಂತರವಾಗಿ ಬೃಹತ್ ವಾಹನಗಳಾದ ಬಸ್, ಲಾರಿ, ಗೂಡ್ಸ್ ವಾಹನಗಳು ಮತ್ತು ದ್ವಿಚಕ್ರ ವಾಹನ ಸಾವಿರಾರು ಈ ರಸ್ತೆ ಮೂಲಕ ಸಂಚಾರ ಮಾಡುತ್ತಿದ್ದರೂ ಸೇತುವೆ ಕುಸಿದು ಬಿದ್ದು ವಾಹನ ಸಾವರರು ತುಂಬಾ ತೊಂದರೆ ಎದುರಿಸುತ್ತಿರುವುದು ಕಂಡುಬಂದಿತ್ತು.
ಸೇತುವೆ ಬಿದ್ದಾಗ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೇತುವೆ ವೀಕ್ಷಿಸಿ ಕಮಲಾಪುರ ತಹಶೀಲ್ದಾರ್ ಅವರಿಗೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಸೂಚಿಸಿದ್ದರು. ಆದರೆ ಎರಡೂವರೆ ತಿಂಗಳಾದರೂ ಸೇತುವೆ ನಿರ್ಮಾಣದ ಕುರಿತು, ತಾತ್ಕಾಲಿಕ ರಸ್ತೆ ಕುರಿತು ಅಧಿಕಾರಿಗಳು ಯಾವುದೇ ಕಾಮಗಾರಿ ನಡೆಸಿರುವುದಿಲ್ಲ. ಸೇತುವೆ ಬಿದ್ದು ತಿಂಗಳಾದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ” ಎಂದು ಗ್ರಾಮಸ್ಥರು ಆರೋಪಿಸಿದ್ದರು. ಅಲ್ಲದೇ, ಪ್ರತಿಭಟನೆ ನಡೆಸುವ ಎಚ್ಚರಿಕೆ ಕೂಡ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಈ ದಿನ. ಕಾಮ್ ಅಕ್ಟೋಬರ್ 25, 2024ರಂದು ವರದಿ ಮಾಡಿತ್ತು. ಬಳಿಕ ನವೆಂಬರ್ 6ರಂದು ವಿಶೇಷ ವಿಡಿಯೋ ಸ್ಟೋರಿ ಪ್ರಕಟಿಸಿತ್ತು. ವರದಿಯ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು, ಸಾರ್ವಜನಿಕರಿಗೆ ಸಂಚರಿಸಲು ತಾತ್ಕಾಲಿಕವಾಗಿ ರಸ್ತೆ ನಿರ್ಮಾಣ ಮಾಡಿ, ಅನುಕೂಲ ಮಾಡಿಕೊಟ್ಟಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ನೊಂದಿಗೆ ಮಾತನಾಡಿದ ಪಿಡಬ್ಲ್ಯೂಡಿ ಅಧಿಕಾರಿ ಶರಣಪ್ಪ ಪಾಟೀಲ ಮಾತನಾಡಿ “ಗುಮ್ಮಿ, ಮುರಮ ಹಾಕಿ ಬಸ್, ಲಾರಿ, ವಾಹನ ಸವಾರರು ಸಂಚರಿಸಲು ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಟ್ಟಿದ್ದೇವೆ. ಇನ್ನಷ್ಟು ಅನುದಾನ ಬಿಡುಗಡೆ ಮಾಡಿದ ತಕ್ಷಣವೇ ಶಾಶ್ವತ ಸೇತುವೆ ನಿರ್ಮಾಣ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಈ ದಿನ.ಕಾಮ್ನೊಂದಿಗೆ ಮಾತನಾಡಿದ್ದ ಕಮಲಾಪುರ ತಹಶೀಲ್ದಾರ್ ಮೊಹಮ್ಮದ್ ಮುಹ್ಸಿನ್, “ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ನಿರಂತರ ಸಂಪರ್ಕ ಮಾಡುತ್ತಿದ್ದೇವೆ. ಸಾಮಗ್ರಿಗಳನ್ನು ತಂದು ಹಾಕಿದ್ದಾರೆ. ಕೆಲಸಗಾರರು ಸಿಗುತ್ತಿಲ್ಲ. ಹಬ್ಬ ಮುಗಿದ ಬಳಿಕ ಮಾಡುತ್ತೇವೆಂದು ಕೆಲಸ ಆರಂಭಿಸುವುದಾಗಿ ಪಿಡಬ್ಲ್ಯೂಡಿ ಅಧಿಕಾರಿಗಳು ತಿಳಿಸಿದ್ದಾರೆ. ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಎಸ್ಟಿಮೇಟ್ ಹೆಚ್ಚಿಗೆ ಮಾಡಿರುವುದರಿಂದ ತಾತ್ಕಾಲಿಕ ಕಾಮಗಾರಿ ನಡೆಸದೆ ಶಾಶ್ವತ ಸೇತುವೆ ಮಾಡಲಾಗುವುದು” ಎಂದಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ರಾಜ್ಯ ಹೆದ್ದಾರಿ 126ರ ಸೇತುವೆ ಕುಸಿತ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ
ಸದ್ಯ, ತಾತ್ಕಾಲಿಕ ರಸ್ತೆಯನ್ನು ನಿರ್ಮಾಣ ಮಾಡಿರುವುದರಿಂದ ಕಡಿತಗೊಂಡಿದ್ದ ಸಂಪರ್ಕ ಮತ್ತೆ ಸಾಧ್ಯವಾಗಿದೆ. ಹೀಗಾಗಿ, ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದಷ್ಟು ಶೀಘ್ರವೇ ಶಾಶ್ವತ ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ. ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆದಿದ್ದಕ್ಕೆ ಈ ದಿನ.ಕಾಮ್ಗೆ ದಸಂಸ ತಾಲೂಕು ಸಂಚಾಲಕ ವಿಜಯಕುಮಾರ್ ಟೈಗರ್, ದಲಿತ ಮುಂಖಡ ವಿದ್ಯಾಧರ್ ಮಾಳಗೆ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಿರೆಪ್ಪ ಬೆಳಕೋಟಿ ಧನ್ಯವಾದ ತಿಳಿಸಿದ್ದಾರೆ.


