ವಾಣಿಜ್ಯ ರಾಜಧಾನಿಯಾಗಿರುವ ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಅದಾನಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಬೇಕೆಂದರೆ, ಅದಕ್ಕೆ ಮೋದಿ ಸಹಕಾರ ಬೇಕು. ಮೋದಿ ನೆರವಿನೊಂದಿಗೆ ತನ್ನ ಎಲ್ಲ ವ್ಯವಹಾರಗಳು ಚಾಲ್ತಿಯಲ್ಲಿರಬೇಕು ಎಂದರೆ ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಅಧಿಕಾರದಲ್ಲಿರಬೇಕು. ಅದಕ್ಕಾಗಿ ಮೋದಿ-ಅದಾನಿ ಇಬ್ಬರೂ ಬೆವರು ಸುರಿಸುತ್ತಿದ್ದಾರೆ...
ಬಿಜೆಪಿಗೆ ಇಷ್ಟವಿದ್ದರೂ, ಇಲ್ಲದಿದ್ದರೂ ಈ ಬಾರಿಯ ಮಹಾರಾಷ್ಟ್ರ ಚುನಾವಣೆಯಲ್ಲಿ ಮೋದಿ ಅವರ ಅತ್ಯಾಪ್ತ ಎಂದೇ ಗುರುತಿಸಲಾಗಿರುವ ಉದ್ಯಮಿ ಗೌತಮ್ ಅದಾನಿ ಚುನಾವಣಾ ವಿಷಯವಾಗಿದ್ದಾರೆ. ಅಜಿತ್ ಪವಾರ್ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಹಾರಾಷ್ಟ್ರ ರಾಜಕಾರಣದಲ್ಲಿ ಅದಾನಿ ಪಾತ್ರವಿದೆ, ಪ್ರಭಾವವಿದೆ ಎಂಬುದನ್ನು ಪ್ರಸ್ತಾಪಿಸಿದ್ದು, ಭಾರೀ ಸಂಚಲನ ಸೃಷ್ಟಿಸಿದೆ.
ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಅವರು ‘ದಿ ನ್ಯೂಸ್ ಮಿನಿಟ್’ಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ ವಿವಾದಿತ ಕೈಗಾರಿಕೋದ್ಯಮಿ ಅದಾನಿ ಹೆಸರನ್ನು ಉಲ್ಲೇಖಿಸಿದ್ದಾರೆ. 2019ರ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಮತ್ತು ಎನ್‌ಸಿಪಿ ನಡುವಿನ ಮೈತ್ರಿಗಾಗಿ ಅದಾನಿ ಮಧ್ಯಸ್ಥಿಕೆ ವಹಿಸಿದ್ದರು ಎಂಬ ವಿಚಾರವನ್ನು ಅಜಿತ್ ಬಹಿರಂಗಪಡಿಸಿದ್ದಾರೆ.
”ಅದು ಹೈ-ಪ್ರೊಫೈಲ್ ಸಭೆಯಾಗಿತ್ತು. ಆ ಸಭೆ ಎಲ್ಲಿ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಅಮಿತ್ ಶಾ ಇದ್ದರು, ಗೌತಮ್ ಅದಾನಿ ಇದ್ದರು. ಪ್ರಫುಲ್ ಪಟೇಲ್, ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಹಾಗೂ ಪವಾರ್ ಸಾಹೇಬ್ (ಶರದ್ ಪವಾರ್) ಇದ್ದರು” ಎಂದು ಅಜಿತ್ ಪವಾರ್ ಹೇಳಿದ್ದಾರೆ. ಆ ಮೂಲಕ, ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಅದಾನಿ ವೈಯಕ್ತಿಕವಾಗಿ ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ.
ಆದಾಗ್ಯೂ, ಬಿಜೆಪಿ ವಿವಾದದಿಂದ ನುಣುಚಿಕೊಳ್ಳುವ ಜಾಣ ಮೌನದ ತಂತ್ರಕ್ಕೆ ಜಾರಿದೆ. ಕೇಂದ್ರ ಸರ್ಕಾರದ ಆಡಳಿತದಲ್ಲಿ ಅದಾನಿಯ ನೇರ ಹಸ್ತಕ್ಷೇಪವಿದೆ ಎಂಬ ಕಾಂಗ್ರೆಸ್‌ನ ಗಂಭೀರ ಆರೋಪಗಳಿಗೆ ಅಜಿತ್ ಅವರ ಹೇಳಿಕೆ ಮತ್ತಷ್ಟು ಬಲತಂದುಕೊಟ್ಟಿದೆ. ಮೋದಿ, ಅಮಿತ್ ಶಾ ಮತ್ತು ಅದಾನಿ ಸ್ನೇಹ ಮತ್ತು ಚುನಾವಣೆಗಳ ವಿಚಾರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತೆ ಹರಿಹಾಯುತ್ತಿದೆ. ಮಹಾರಾಷ್ಟ್ರದಲ್ಲಿ ಭಾರೀ ವಿವಾದ ಭುಗಿಲೆದ್ದಿದೆ. ಮಹಾರಾಷ್ಟ್ರದ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿಯೂ ಅದಾನಿಯ ಹೆಜ್ಜೆಗುರುತುಗಳಿವೆ ಎಂಬುದನ್ನು ಪ್ರತಿಪಕ್ಷಗಳು ಒತ್ತಿ ಹೇಳುತ್ತಿವೆ.
”ಅದಾನಿ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಧರ್ಮದ ಆಧಾರದ ಮೇಲೆ ಒಗ್ಗಟ್ಟಾಗುವ ಶಕ್ತಿಗಳನ್ನು ಬೆಂಬಲಿಸುತ್ತಿದ್ದಾರೆ. ನರೇಂದ್ರ ಮೋದಿ-ಅಮಿತ್ ಶಾ ಅದಾನಿಯಂತಹ ಭಾರಿ ಬಂಡವಾಳಗಾರರಿಂದ ಹಣ ಪಡೆದು ಚುನಾವಣೆ ನಡೆಸುತ್ತಿದ್ದಾರೆ. ಮೋದಿ, ಶಾ ಇಂತಹ ಉದ್ಯಮಿಗಳನ್ನೇ ಬೆಳೆಸುತ್ತಿದ್ದಾರೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
2019ರಲ್ಲಿ ಚುನಾವಣೆ ಫಲಿತಾಂಶ ಪ್ರಕಟವಾದಾಗ ಅತಂತ್ರ ವಿಧಾನಸಭೆ ರಚನೆಯಾಗಿತ್ತು. ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಬಿಜೆಪಿ ಒಗ್ಗೂಡಿ ಸರ್ಕಾರ ರಚನೆ ಮಾಡಿದ್ದವು. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯೂ ಆಗಿದ್ದರು. ಆದರೆ, ಸರ್ಕಾರದಲ್ಲಿ ತಮ್ಮದೇ ಪ್ರಭಾವವನ್ನು ಬೆಳೆಸಲು ಬಿಜೆಪಿ ಜೊತೆಗಿನ ಸರ್ಕಾರದಲ್ಲಿ ಅವಕಾಶವಿಲ್ಲ ಎಂಬುದನ್ನು ಅರಿತ ಪವಾರ್, ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿದು, ಶಿವಸೇನೆ, ಕಾಂಗ್ರೆಸ್ ಜೊತೆಗೂಡಿ ಎಂವಿಎ ಸರ್ಕಾರ ರಚಿಸಿತು.
ಈ ಪ್ರಕ್ರಿಯೆಯೊಳಗೆ, ಬಿಜೆಪಿ ಜೊತೆ ಪವಾರ್ ಅವರ ಎನ್‌ಸಿಪಿ ಕೈಜೋಡಿಸಲು ನಡೆದ ಮಾತುಕತೆಗಳಲ್ಲಿ ಅದಾನಿಯ ಪಾತ್ರ ಮಹತ್ವದ್ದಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಯೇ ಸರ್ಕಾರ ರಚಿಸಬೇಕೆಂದು ಅದಾನಿ ಬಯಸಿದ್ದರು. ಅದಕ್ಕಾಗಿ, ತಾವೇ ಖುದ್ದು ಸಭೆಯನ್ನೂ ನಡೆಸಿದ್ದಾರೆ ಎಂಬುದು ಈಗ ಸ್ಪಷ್ಟವಾಗಿದೆ.
ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಮುಂಬೈನಲ್ಲಿರುವ ಏಷ್ಯಾದ ಅತಿ ದೊಡ್ಡ ಕೊಳೆಗೇರಿ ‘ಧಾರಾವಿ’ ಪುನರಾಭಿವೃದ್ಧಿ ಗುತ್ತಿಗೆಯನ್ನು ಅದಾನಿ ಪಡೆದುಕೊಂಡಿದ್ದಾರೆ. ಆ ಮೂಲಕ, 259 ಹೆಕ್ಟೇರ್ ಇರುವ ಧಾರಾವಿ ಸ್ಲಮ್‌ನ ಭಾಗಶಃ ಭೂಮಿಯನ್ನು ಕಬಳಿಸಲು ಅದಾನಿ ಯೋಜಿಸಿದ್ದಾರೆ ಎಂದು ಉದ್ಧವ್ ಠಾಕ್ರೆ ಇತ್ತೀಚೆಗೆ ಆರೋಪಿಸಿದ್ದರು. ಅಲ್ಲದೆ, ಈ ಬಾರಿಯ ಚುನಾವಣೆಯಲ್ಲಿ ಎಂವಿಎ ಅಧಿಕಾರಕ್ಕೆ ಬಂದರೆ, ಅದಾನಿಗೆ ನೀಡಲಾಗಿರುವ ಗುತ್ತಿಗೆಯನ್ನು ರದ್ದು ಮಾಡುವುದಾಗಿಯೂ ಭರವಸೆ ನೀಡಿದ್ದಾರೆ. ಠಾಕ್ರೆ ಅವರ ಆರೋಪಕ್ಕೆ ಪುರಾವೆ ಎಂಬಂತೆ, ಅಧಾನಿ ಗ್ರೂಪ್‌ನಿಂದ ಧಾರಾವಿಯ ಸರ್ವೇಗಾಗಿ ಹೋಗಿದ್ದವರು, ಅಲ್ಲಿನ ಜನರ ಮಾತುಗಳಿಗೆ ಕಿವಿಗೊಡದೆ, ತಮಗಿಷ್ಟ ಬಂದಂತೆ ಅಳತೆ ಮಾಡಿಕೊಂಡು ಹೋಗಿದ್ದಾರೆ ಎಂದು ಧಾರಾವಿ ನಿವಾಸಿಗಳು ಹೇಳಿಕೊಂಡಿದ್ದಾರೆ. ಆತಂಕ ವ್ಯಕ್ತಪಡಿಸಿದ್ದಾರೆ.
ಗಮನಾರ್ಹ ಸಂಗತಿ ಎಂದರೆ, ಅದಾನಿ ಮತ್ತು ಮೋದಿ ಸ್ನೇಹದ ವಿರುದ್ಧ ರಾಹುಲ್ ಗಾಂಧಿ ನಿರಂತರ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಪ್ರಧಾನಿ ಮೋದಿ ಅವರ ಬೇಷರತ್ ಬೆಂಬಲದಿಂದಾಗಿ ಅದಾನಿ ಸಮೂಹವು ವೇಗವಾಗಿ ಬೆಳೆಯುತ್ತಿದೆ. ದೇಶದ ಸಂಪತ್ತನ್ನು ಅದಾನಿ ಕ್ರೋಡೀಕರಿಸಲು ಮೋದಿ ನೆರವು ನೀಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳುತ್ತಲೇ ಬಂದಿದ್ದಾರೆ. ಅರವಿಂದ್ ಕೇಜ್ರಿವಾಲ್ ಕೂಡ ದೆಹಲಿ ಮುಖ್ಯಮಂತ್ರಿಯಾಗಿದ್ದಾಗ ಅದಾನಿ ವಿಚಾರವನ್ನು ದೆಹಲಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ‘ಮೋದಿ ಅದಾನಿಗಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.
ಈ ಆರೋಪಗಳು ಊಹಾಪೋಹ ಅಥವಾ ವದಂತಿಗಳಿಂದ ಕೂಡಿಲ್ಲ. ಲೋಕಸಭಾ ಚುನಾವಣೆಯ ಸಮಯದಲ್ಲಿ ದೇಶದ ಗಮನ ಸೆಳೆದಿದ್ದ ಚುನಾವಣಾ ಬಾಂಡ್‌ಗಳಲ್ಲಿ ಬಿಜೆಪಿಗೆ ಅತೀ ಹೆಚ್ಚು ದೇಣಿಗೆ ನೀಡಿದ ಉಮದ್ಯಗಳಲ್ಲಿ ಅದಾನಿ ಸಮೂಹವೂ ಒಂದು. ದೇಶಾದ್ಯಂತ ಬಿಜೆಪಿ ಸರ್ಕಾರ ರಚಿಸಲು ಅದಾನಿ ಹಣ ಕೊಟ್ಟರೆ, ಅದಕ್ಕೆ ಪ್ರತಿಯಾಗಿ ಮೋದಿ ಸರ್ಕಾರ ಅದಾನಿಗೆ ಭಾರೀ ಉಡುಗೊರೆಗಳನ್ನು ನೀಡಿದೆ. ರಫೇಲ್ ಯುದ್ಧ ವಿಮಾನದ ತಯಾರಿಕೆಯಂತಹ ಬೃಹತ್ ಗುತ್ತಿಗೆಯನ್ನೇ ಮೋದಿ ಸರ್ಕಾರ ಅದಾನಿಗೆ ಕೊಟ್ಟಿದೆ. ಹಲವಾರು ವಿಮಾನ ನಿಲ್ದಾಣ ಮತ್ತು ಬಂದರುಗಳ ನಿರ್ವಹಣೆ, ಕಲ್ಲಿದ್ದಲು ನಿಕ್ಷೇಪಗಳು, ಪೆಟ್ರೋಲಿಯಂ, ವಿದ್ಯುತ್, ರಸ್ತೆ ಕಾಮಗಾರಿಯಂತಹ ಪ್ರಮುಖ ಉದ್ಯಮಗಳಲ್ಲಿ ಅದಾನಿಗೆ ಹೆಚ್ಚು ಅವಕಾಶ ಮಾಡಿಕೊಟ್ಟಿದೆ.
ಈ ವರದಿ ಓದಿದ್ದೀರಾ?: ವಕ್ಫ್ ವಿವಾದದಲ್ಲಿ ಜೆಪಿಸಿ | ಹಿಂದು ವಿರೋಧಿ, ರೈತ ವಿರೋಧಿ ನೀತಿಗೇಕೆ ಬಿಜೆಪಿ ಅಂಟಿಕೊಳ್ಳುತ್ತಿದೆ?
ಈಗ, ಮಹಾರಾಷ್ಟ್ರದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಬೇಕೆಂದು ಅದಾನಿ ಬಯಸುತ್ತಿರುವುದು ಆ ರಾಜ್ಯದಲ್ಲಿ ತನ್ನ ಉದ್ಯಮವನ್ನು ಉಳಿಸಿಕೊಳ್ಳುವ ಮತ್ತು ವಿಸ್ತರಿಸುವ ಯೋಜನೆಯಿದೆ. ಎರಡು ತಿಂಗಳ ಹಿಂದೆಯಷ್ಟೇ (ಸೆಪ್ಟೆಂಬರ್-2024) ಮಹಾರಾಷ್ಟ್ರಕ್ಕೆ 6,600 ಮೆಗಾವ್ಯಾಟ್ ಸೌರವಿದ್ಯುತ್ ಮತ್ತು ಥರ್ಮಲ್ ವಿದ್ಯುತ್ ಪೂರೈಸುವ ಗುತ್ತಿಗೆಯನ್ನು ಅದಾನಿ ಗ್ರೂಪ್ ಪಡೆದುಕೊಂಡಿದೆ. ಮಹಾಯುತಿ ಸರ್ಕಾರವು ಮೋದಿ ಸೂಚನೆಯ ಮೇರೆಗೆ ಆ ಗುತ್ತಿಗೆಯನ್ನು ಅದಾನಿಗೆ ನೀಡಿದೆ ಎಂಬ ಆರೋಪಗಳಿವೆ.
ಅಲ್ಲದೆ, ಮುಂಬೈನಲ್ಲಿರುವ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನೂ ಅದಾನಿ ಗ್ರೂಪ್ ಪಡೆದುಕೊಂಡಿದೆ. ಮಹಾರಾಷ್ಟ್ರದಲ್ಲಿ ಪವರ್ ಪ್ಲಾಂಟ್, ಸಿಮೆಂಟ್ ಪ್ಲಾಂಟ್, ಸಿಎನ್‌ಜಿ-ಪೆಟ್ರೋಲಿಯಂ ಪ್ಲಾಂಟ್‌ಗಳು ಸೇರಿದಂತೆ ಹಲವಾರು ಉದ್ದಿಮೆಗಳನ್ನು ಅದಾನಿ ಹೊಂದಿದ್ದಾರೆ. ಇತರ ಉದ್ದಿಮೆಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೇ ಇತ್ತೀಚೆಗೆ ಅಂಬುಜಾ ಸಿಮೆಂಟ್ ಉದ್ದಿಮೆಯನ್ನು ತಮ್ಮ ಸಮೂಹಕ್ಕೆ ವಿಲೀನ ಮಾಡಿಕೊಂಡಿದ್ದಾರೆ.
ವಾಣಿಜ್ಯ ರಾಜಧಾನಿಯಾಗಿರುವ ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಅದಾನಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಬೇಕೆಂದರೆ, ಅದಕ್ಕೆ ಮೋದಿ ಸಹಕಾರ ಬೇಕು. ಮೋದಿ ನೆರವಿನೊಂದಿಗೆ ತನ್ನ ಎಲ್ಲ ವ್ಯವಹಾರಗಳು ಚಾಲ್ತಿಯಲ್ಲಿರಬೇಕೆಂದರೆ, ಮಹಾರಾಷ್ಟ್ರ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದಲ್ಲಿರಬೇಕು. ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಲು ಅದಾನಿ ನೇರವಾಗಿ ಕಣಕ್ಕಿಳಿದಿದ್ದಾರೆ, ಹಣವನ್ನು ನೀರಿನಂತೆ ಹರಿಸುತ್ತಿದ್ದಾರೆ.
2019ರಲ್ಲಿಯೂ ಹೀಗೆಯೇ ಬಿಜೆಪಿ ಅಧಿಕಾರದಿಂದ ಕೆಳಗಿಳಿಯದಂತೆ ನೋಡಿಕೊಳ್ಳಲು ಅದಾನಿ ಖುದ್ದು ಬಿಜೆಪಿ ಮತ್ತು ಎನ್‌ಸಿಪಿ ಮೈತ್ರಿ ಮಾಡಿಸಲು ಗುಪ್ತ ಸಭೆ ನಡೆಸಿದ್ದರು. ಅದಾನಿಯೇ ಕಣಕ್ಕಿಳಿದು ಸಭೆ ನಡೆಸಲು ಮತ್ತೊಂದು ಕಾರಣ, ಅದಾನಿ ಮತ್ತು ಶರದ್ ಪವಾರ್ ನಡುವಿನ ನಿಕಟ ಬಾಂಧವ್ಯ. ಈ ಇಬ್ಬರೂ ದೀರ್ಘಕಾಲದ ಗೆಳೆಯರು. ಆದ್ದರಿಂದಲೇ, ಈಗಲೂ ಶರದ್ ಪವಾರ್, ಆ ಗುಪ್ತ ಸಭೆಯನ್ನು ಅದಾನಿ ಆಯೋಜಿಸಿದ್ದರು. ಆದರೆ, ಅವರು ಸಭೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಇದ್ದಕ್ಕಿದ್ದಂತೆ, ಅಜಿತ್ ಪವಾರ್ ಅವರು 2019ರಲ್ಲಿ ನಡೆದಿದ್ದ ಸಭೆಯ ಬಗ್ಗೆ ಮಾತನಾಡುತ್ತಿರುವುದು ಮಹಾಯುತಿಯಲ್ಲಿ ಬಿಜೆಪಿ ಮತ್ತು ಎನ್‌ಸಿಪಿ (ಅಜಿತ್ ಬಣ) ನಡುವಿನ ಸಾಮರಸ್ಯ ಹದಗೆಟ್ಟಿರುವುದನ್ನು ಸೂಚಿಸುತ್ತದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಒಂದು ಭಾಗವು ಅಜಿತ್ ಜೊತೆಗಿನ ಬಿಜೆಪಿ ಮೈತ್ರಿಯನ್ನು ವಿರೋಧಿಸುತ್ತಿದೆ. ಈಗ ಅದು ಬಹಿರಂಗವಾಗಿದೆ. ಅಜಿತ್ ಅವರನ್ನು ಬಿಜೆಪಿಗರು ಭ್ರಷ್ಟ ಎಂದು ಕರೆಯುತ್ತಿದ್ದಾರೆ.
ಇದೆಲ್ಲವೂ, ಮಹಾಯುತಿ ಒಳಗೇ ನಡೆಯುತ್ತಿರುವ ಬಿಜೆಪಿಯ ತಂತ್ರ-ಕುತಂತ್ರಗಳನ್ನು ಬಯಲು ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ಚುನಾವಣೆ ಸಮೀಪಿಸಿದಂತೆಲ್ಲ, ಒಂದೊಂದೇ ಆಘಾತಕಾರಿ, ಆಶ್ಚರ್ಯಕರ ವಿಚಾರಗಳು ಹೊರಬರುತ್ತಿವೆ. ಮೋದಿ-ಶಾ ನೇತೃತ್ವದ ಬಿಜೆಪಿಗೆ ಮುಜುಗರವಾಗುವಂತೆ ಮಾಡುತ್ತಿವೆ. ಆದಾಗ್ಯೂ, ಮೋದಿ-ಶಾ ಮಹಾರಾಷ್ಟ್ರದ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ವಿಪಕ್ಷಗಳ ವಿರುದ್ಧ ಸುಳ್ಳು-ಪೊಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ, ಮಹಾರಾಷ್ಟ್ರ ರಾಜಕಾರಣದಲ್ಲಿ ಅದಾನಿ ಪಾತ್ರದ ಬಹಿರಂಗಗೊಳ್ಳುವಿಕೆಯು ವಿಪಕ್ಷಗಳಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ.