ಹಣ ಕೊಟ್ಟು ಮತ ಕೇಳುವವರು ಹಾಗೂ ಹಣ ಪಡೆದು ಮತ ಹಾಕುವವರು ಇರುವವರೆಗೂ ಪ್ರಜಾಪ್ರಭುತ್ವ ಸುಭದ್ರವಾಗಿರುದಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಇತಿಹಾಸ, ರಾಜ್ಯಶಾಸ್ತ್ರ ಹಾಗೂ ಪತ್ರಿಕೋದ್ಯಮ ವಿಭಾಗಗಳು ಮತ್ತು ರಾಜ್ಯ ಪತ್ರಾಗಾರ ಇಲಾಖೆಯ ವಿಭಾಗೀಯ ಕಚೇರಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮೈಸೂರು ಪ್ರಜಾಪ್ರತಿನಿಧಿ ಸಭೆ: ಚಾರಿತ್ರಿಕ ಅವಲೋಕನ’ ಕುರಿತ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
“ಎಲ್ಲ ಕ್ಷೇತ್ರಗಳಂತೆಯೇ ರಾಜಕಾರಣದಲ್ಲೂ ಗುಣಮಟ್ಟ ಕುಸಿದಿದೆ. ಪ್ರತಿ ಪಕ್ಷದಲ್ಲೂ ಜಾತಿ ನೋಡುತ್ತಾರೆ, ಟಿಕೆಟ್ ಕೊಡುವಾಗ ಹಣವೆಷ್ಟಿದೆ; ಎಷ್ಟು ಕೋಟಿ ಖರ್ಚು ಮಾಡಬಲ್ಲ ಎಂಬುದನ್ನೇ ಪ್ರಮುಖವಾಗಿ ಗಮನಿಸುವುದು ನಡೆಯುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
“ವಿಧಾನಮಂಡಲ ಅಧಿವೇಶನದಲ್ಲಿ ಬಹಳಷ್ಟು ಶಾಸಕರು-ವಿಧಾನಪರಿಷತ್ ಸದಸ್ಯರು ಸಕ್ರಿಯವಾಗಿ ಭಾಗವಹಿಸುವುದಿಲ್ಲ. ಪ್ರಶ್ನೆ ಕೇಳುತ್ತಾರೆ, ಉತ್ತರ ತೆಗೆದುಕೊಂಡು ಹೋಗಿ ಬಿಡುತ್ತಾರೆ. ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ” ಎಂದು ತಿಳಿಸಿದರು.
“ಯುವಜನರು ರಾಜಕೀಯ ಕ್ಷೇತ್ರದಿಂದ ಹಿಂದೆ ಸರಿಯಬಾರದು. ರಾಜಕಾರಣ ಹಾಳಾಗಿದೆ ಎಂದು ಎಲ್ಲರೂ ದೂರಹೋದರೆ ಮುಂದೇನು? ಪ್ರಜಾಪ್ರಭುತ್ವದಲ್ಲಿ ಒಳ್ಳೆಯದೂ ಆಗುತ್ತಿದೆ. ಕೆಟ್ಟದ್ದೂ ಆಗುತ್ತಿದೆ. ಪ್ರಜ್ಞಾವಂತರು, ಆದ್ದರಿಂದ ಒಳ್ಳೆಯ ಜನರು ರಾಜಕಾರಣಕ್ಕೆ ಬರಬೇಕು. ಶಾಸನಸಭೆಗಳನ್ನು ಪ್ರವೇಶಿಸಬೇಕು. ಸರ್ಕಾರಿ ನೌಕರಿ ಪಡೆದುಕೊಂಡರೆ ಸಾಕು ಎಂದು ಭಾವಿಸಬಾರದು” ಎಂದು ಹೇಳಿದರು.
ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.