ಸಹಕಾರ ಸಂಘಗಳು ಆರ್ಥಿಕ ಪ್ರಗತಿಯನ್ನು ಮತ್ತಷ್ಟು ವೃದ್ಧಿಸಿಕೊಂಡು, ಕೃಷಿಕರು ಹಾಗೂ ಬಡವರಿಗೆ ಸಾಲ ಸೌಲಭ್ಯ ಕಲ್ಪಿಸಿ ಆರ್ಥಿಕ ಬೆಳವಣಿಗೆಗೆ ಸಹಕರಿಸಬೇಕು ಎಂದು ಮಾಜಿ ಸಚಿವ ಎಂ ಸಿ ನಾಣಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯ ಮಡಿಕೇರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆವರಣದಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಪಂದ್ಯಂಡ ಬೆಳ್ಯಪ್ಪ ಸಭಾಂಗಣದಲ್ಲಿ ಮಾತನಾಡಿದರು.
“ಸಹಕಾರ ಕ್ಷೇತ್ರದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಇರಬಾರದು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇದ್ದಲ್ಲಿ ಸಹಕಾರ ಸಂಘಗಳ ಬಲವರ್ಧನೆ ಸಾಧ್ಯ. ಸಹಕಾರ ಸಂಘಗಳಿಗೆ ದೇಶದಲ್ಲಿ ತಮ್ಮದೇ ಆದ ಸ್ಥಾನವಿದ್ದು, ಸಂಪತ್ತನ್ನು ಎಲ್ಲರೂ ಹಂಚಿಕೊಂಡು ಸಮಾನವಾಗಿ ಬದುಕುವುದು ಸಹಕಾರದ ಧ್ಯೇಯೋದ್ದೇಶವಾಗಿದೆ” ಎಂದು ಹೇಳಿದರು.
“ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆ ಇದ್ದಲ್ಲಿ ಸಹಕಾರ ಸಂಘಗಳನ್ನು ಮತ್ತಷ್ಟು ಬಲಪಡಿಸಬಹುದಾಗಿದೆ. ಆ ನಿಟ್ಟಿನಲ್ಲಿ ಸಹಕಾರ ಸಂಘಗಳು ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು. ಲಕ್ಷಾಂತರ ಜನರು ಸದಸ್ಯತ್ವವನ್ನು ಹೊಂದಿದ್ದಾರೆ. ಸಹಕಾರ ಕ್ಷೇತ್ರಗಳು ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಬೇಕು. ಸಹಕಾರ ಸಂಘಗಳು ರಾಜಕೀಯ ರಹಿತವಾಗಿರ ಕೆಲಸ ಮಾಡಬೇಕು” ಎಂದರು.
“ರಾಜ್ಯದಲ್ಲಿ 21 ಕೇಂದ್ರ ಸಹಕಾರ ಬ್ಯಾಂಕ್‌ಗಳು ಇದ್ದು, ಕೊಡಗು ಜಿಲ್ಲೆಯ ಸಹಕಾರ ಬ್ಯಾಂಕ್ ಅತ್ಯುತ್ತಮವಾಗಿ ಆರ್ಥಿಕ ಚಟುವಟಿಕೆ ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, “ಕೊಡಗು ಡಿಸಿಸಿ ಬ್ಯಾಂಕ್ ವತಿಯಿಂದ 3 ರಿಂದ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿಕರಿಗೆ ಸಾಲ ನೀಡಲಾಗುತ್ತಿದ್ದು, ಕೃಷಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಸಹಕಾರ ಕಾಯ್ದೆ ತಿದ್ದುಪಡಿಯಿಂದ ಸಹಕಾರ ಸಂಘಗಳ ಬೆಳವಣಿಗೆ ಕಷ್ಟಸಾಧ್ಯ. ನೂತನ ಸಹಕಾರ ಕಾಯ್ದೆ ಜಾರಿಗೊಂಡಲ್ಲಿ ಸಹಕಾರ ಸಂಘಗಳು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಸಂಸ್ಥೆಯ ನಿವೃತ್ತ ಪ್ರಾಂಶುಪಾಲೆ ಎಂ ಎಂ ಶ್ಯಾಮಲ ಮಾತನಾಡಿ, “ಸಹಕಾರ ಸಪ್ತಾಹದಲ್ಲಿ ಸಹಕಾರ ಸಂಘಗಳ ಪ್ರಗತಿ ಬಗ್ಗೆ ವಿಮರ್ಶೆಗಳು ನಡೆಯಬೇಕು. ಸಹಕಾರ ಚಳುವಳಿಯನ್ನು ಬಲಪಡಿಸಿ ಸಾಮೂಹಿಕ ಪ್ರಯತ್ನದಿಂದ ಪ್ರಗತಿ ಸಾಧಿಸುವುದು ಸಹಕಾರದ ತತ್ವವಾಗಿದೆ. ಸಹಕಾರ ಕ್ಷೇತ್ರದ ಆರ್ಥಿಕ ಬೆಳವಣಿಗೆಗೆ ಸಾಕಷ್ಟು ಕಾರ್ಯಕ್ರಮ ರೂಪಿಸಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ವಿಶ್ವಜ್ಞಾನಿ ಅಂಬೇಡ್ಕರ್ ಸಂಘದಿಂದ ಕಡತನಾಳು ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ
“ಸಹಕಾರ ಕ್ಷೇತ್ರದಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಹೀಗೆ ವಿವಿಧ ರೀತಿಯ ಉದ್ಯೋಗಾವಕಾಶಗಳು ದೊರೆಯಲಿವೆ. ಆ ನಿಟ್ಟಿನಲ್ಲಿ ಸಹಕಾರ ಕ್ಷೇತ್ರ ಬಲಪಡಿಸಲು ಮುಂದಾಗಬೇಕಿದೆ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಹಕಾರ ಕ್ಷೇತ್ರವನ್ನು ಮತ್ತಷ್ಟು ಸುಧಾರಿಸಬೇಕು. ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಬೇಕು” ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಎಸ್ ಪೂವಯ್ಯ, ನಿರ್ದೇಶಕ ಹೊಟ್ಟೆಂಗಡ ಎಂ ರಮೇಶ್, ಹೊಸೂರು ಸತೀಶ್ ಕುಮಾರ್, ಕೆ ಅರುಣ್ ಭೀಮಯ್ಯ, ಕಾಂಗೀರ ಎನ್ ಸತೀಶ್, ಪೂಳಂಡ ಪಿ ಪೆಮ್ಮಯ್ಯ, ಎಚ್ ಕೆ ಮಾದಪ್ಪ, ಎಸ್ ಸಿ ಶರತ್ ಶೇಖರ್, ಶರವಣ ಕುಮಾರ್ ಟಿ ಆರ್, ಗುಮ್ಮಟ್ಟೀರ ಎಸ್ ಕಿಲನ್ ಗಣಪತಿ, ಜಲಜಾ ಶೇಖರ್, ವೃತ್ತಿಪರ ನಿರ್ದೇಶಕ ಮುಂಡಂಡ ಸಿ ನಾಣಯ್ಯ, ಡಿಸಿಸಿ ಬ್ಯಾಂಕಿನ ಸಿಇಒ ಪ್ರವೀಣ್ ಬಿ ನಾಯಕ್, ಪ್ರಧಾನ ವ್ಯವಸ್ಥಾಪಕಿ ಬೋಜಮ್ಮ ಜಿ ಎಂ ಸೇರಿದಂತೆ ಮತ್ತಿತರರು ಇದ್ದರು.