ಮಕ್ಕಳ ಮಾನಸಿಕತೆ, ಬೌದ್ಧಿಕ ಜ್ಞಾನದ ಮೇಲೆ ಮೊಬೈಲ್ ತರಂಗಗಳು ದುಷ್ಪರಿಣಾಮ ಬೀರುತ್ತವೆ. ಭಾವಿ ಪ್ರಜೆಗಳ ನಿರ್ಮಾಣಕ್ಕಾಗಿ ನಾವೆಲ್ಲರೂ ಮೊಬೈಲ್ ಬಳಕೆಯ ದುಷ್ಪರಿಣಾಮದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಸುಳ್ಯದ ಕೆವಿಜಿ ವೈದ್ಯಕೀಯ ಆಸ್ಪತ್ರೆಯ ಡಾ ಸೌರೇಶ್ ಹೆಗಡೆ ಕರೆ ನೀಡಿದರು.
ಕೊಡಗು ಜಿಲ್ಲೆಯ ಮಡಿಕೇರಿ ನಗರದ ಹೊಸ ಬಡಾವಣೆ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಇತ್ತೀಚಿನ ದಿನಗಳಲ್ಲಿ ಹಿರಿಯರಿಂದ ಹಿಡಿದು ಕಿರಿಯರವರೆಗೆ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಮೊಬೈಲ್ ಬಳಕೆಯನ್ನು ಆದಷ್ಟು ಕಡಿಮೆಗೊಳಿಸಬೇಕು, ಅದರಲ್ಲೂ ಸಣ್ಣ ಮಕ್ಕಳಿಗೆ ಮೊಬೈಲ್ ನೀಡದಿರುವುದೇ ಲೇಸು” ಎಂದರು.
ಆರ್ಥಿಕ ಸಲಹೆಗಾರ್ಥಿ ಗೀತ ಗಿರೀಶ್ ಮಾತನಾಡಿ, “ಮಕ್ಕಳ ಪೋಷಣೆಯಲ್ಲಿ ಪೋಷಕರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು. ಮಕ್ಕಳ ಆರೋಗ್ಯದ ಬಗ್ಗೆ ಅಂಗನವಾಡಿ ಕೇಂದ್ರಗಳಲ್ಲೂ ಕೂಡ ಹೆಚ್ಚಿನ ಜಾಗೃತಿಯಾಗಬೇಕು. ಕೊಡಗಿನ ಬಹುತೇಕ ಅಂಗನವಾಡಿಗಳಲ್ಲಿ ಮಕ್ಕಳ ಪೌಷ್ಟಿಕಾಂಶದ ಬಗ್ಗೆ ಹೆಚ್ಚಿನ ಕಾಳಜಿ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ. ಇದು ಪ್ರಶಂಸನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ನ್ಯಾ. ರವೀಂದ್ರ ಹೆಗಡೆಯವರಿಗೆ ಆತ್ಮೀಯ ಬೀಳ್ಕೊಡುಗೆ
“ಇಂದಿನ ಆಹಾರ ಪದ್ಧತಿ ಮಕ್ಕಳ ಬೆಳವಣಿಗೆಗೆ ತೊಂದರೆಯನ್ನುಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ನಾವು ತೆಗೆದುಕೊಳ್ಳುವ ಪ್ರತಿಯೊಂದು ಆಹಾರ ನೈಸರ್ಗಿಕವಾಗಿರುವುದನ್ನು ಗಮನಿಸಿ ಅಂತಹ ಆಹಾರಗಳನ್ನು ಸೇವಿಸಿದರೆ ನಮ್ಮ ದೇಹಕ್ಕೆ ಒಳಿತಾಗುತ್ತದೆ. ಇಂದು ಆಧುನಿಕ ಯುಗದಲ್ಲಿ ಎಲ್ಲರಿಗೂ ಸುಲಭವಾಗಿ ಸಿಗುವ ದಿಢೀರ್ ಆಹಾರ ಪದಾರ್ಥಗಳತ್ತ ಚಿತ್ತ ಹರಿಸುತ್ತಿರುವುದನ್ನು ನಿಲ್ಲಿಸಬೇಕಾಗಿದೆ. ನೈಸರ್ಗಿಕವಾಗಿರುವ ಆಹಾರ ಸೇವಿಸದ್ದಿದ್ದರೆ ಮುಂದೆ ನಾವು ಭಾರೀ ಬೆಲೆ ತೆತ್ತೆಬೇಕಾಗುತ್ತದೆ” ಎಂದರು.
ಹೊಸ ಬಡಾವಣೆಯ ಅಂಗನವಾಡಿ ಶಿಕ್ಷಕಿ ಮುತ್ತಮ್ಮ ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಇದ್ದರು.