ಹೊಸ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಲು ತಹಶೀಲ್ದಾರರು, ಬಿಎಲ್‌ಓಗಳು ಅಗತ್ಯ ಕ್ರಮವಹಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೂ (ವಿಪತ್ತು ನಿರ್ವಹಣೆ, ನೋಂದಣಿ ಮತ್ತು ಮುದ್ರಾಂಕ ಹಾಗೂ ಸಾಮಾಜಿಕ ಭದ್ರತೆ) ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ್ ತಿಳಿಸಿದರು.
ಅವರು ನ.15ರ ಶುಕ್ರವಾರ ನಗರದ ಜಿಲ್ಲಾ ಪಂಚಾಯಿತ್ ಮಿನಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025ರ ಸಂಬಂಧ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು 2ನೇ ಪಿ.ಯು.ಸಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ವಿವರಗಳನ್ನು ಶಿಕ್ಷಣ ಇಲಾಖೆಯಿಂದ ಪಡೆದು ಅವರನ್ನು ಮತಪಟ್ಟಿಗೆ ಸೇರಿಸಲು ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಹಾಗೂ ರಾಜಕೀಯ ಪಕ್ಷಗಳ ಸಹಕಾರವೂ ಬೇಕೆಂದರು.
ಮತದಾರರ ಕರಡು ಪಟ್ಟಿಯನ್ನು ತಾಲೂಕು ಕಚೇರಿಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಹಾಗೂ ಜಿಲ್ಲಾಧಿಕಾರಿಗಳ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಿಬೇಕು ಎಂದು ಸೂಚಿಸಿದರು.
ಅರ್ಹ ಮತದಾರರು ಮತದಾನದಿಂದ ಹೊರ ಉಳಿಯದಂತೆ ಕ್ರಮವಹಿಸುವುದು ಅಧಿಕಾರಿಗಳ ಕರ್ತವ್ಯ. ಆದುದರಿಂದ ಮತದಾರರಪಟ್ಟಿಗೆ ಸೇರಿಸಲು ಇನ್ನು ಕಾಲಾವಕಾಶವಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಚಾರ ಮಾಡಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ಕ್ರಮವಹಿಸುವಂತೆ ತಿಳಿಸಿದರು.
ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡಿಸುವುದು, ಮರಣ ಹೊಂದಿದವರನ್ನು ಮತಪಟ್ಟಿಯಿಂದ ಕೈಬಿಡಲು ಕ್ರಮವಹಿಸುವಂತೆ ತಿಳಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸ್ಯಾಂಜೋ ಆಸ್ಪತ್ರೆಯ ಹಿಂಭಾಗದ ಸ್ಥಳ ನಿಗದಿ: ಸಚಿವ ಚಲುವರಾಯಸ್ವಾಮಿ
ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಹಾಗೂ ಎಲ್ಲಾ ತಹಶೀಲ್ದಾರ್‌ಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಉಪಸ್ಥಿತರಿದ್ದರು.