ಬೀದರ್ ನಗರದ ರಿಶೈನ್ ಆರ್ಗನೈಸೇಶನ್ ವತಿಯಿಂದ ಔರಾದ್ ತಾಲೂಕಿನ ಸಂತಪೂರ ಗ್ರಾಮದ ಸುಭಾಷ ಚಂದ್ರ ಬೋಸ್ ಪ್ರೌಢ ಶಾಲೆಯಲ್ಲಿ ಮಕ್ಕಳ ದಿನಾಚರಣೆ ದಿನದಂದು 30 ಮಕ್ಕಳಿಗೆ ಉತ್ತಮ ಗುಣಮಟ್ಟದ ಸ್ವೆಟರ್‌ಗಳನ್ನು ವಿತರಿಸಲಾಯಿತು.
ರಿಶೈನ್ ಆರ್ಗನೈಸೇಶನ್ (ಎನ್‌ಜಿಒ) ಅಧ್ಯಕ್ಷ ರೋಹನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಗ್ರಾಮೀಣ ಭಾಗದ ಬಡ ಪ್ರತಿಭಾವಂತ ಮಕ್ಕಳಿಗೆ ನಮ್ಮ ಸೇವೆ ಇರಬೇಕೆಂದು ಬಯಸಿ ಈ ಶಾಲೆ ಆಯ್ಕೆ ಮಾಡಿಕೊಂಡಿದ್ದೇವೆ. ಮಕ್ಕಳು ಶಾಲಾ ದಿನಗಳಲ್ಲೇ ಸತ್ಯ, ನಿಷ್ಠೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಬಡ, ಅನಾಥ, ನಿರ್ಗತಿಕರಿಗೆ ಸಂಕಷ್ಟಕ್ಕೆ ಸಹಕಾರ ನೀಡಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆʼ ಎಂದು ಹೇಳಿದರು.
ಪತ್ರಕರ್ತ ಬಾಲಾಜಿ ಕುಂಬಾರ್ ಮಾತನಾಡಿ, ʼವಿದ್ಯಾರ್ಥಿಗಳು ಕೇವಲ ಪಠ್ಯದ ಓದಿಗೆ ಸೀಮಿತರಾಗದೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಮಾಜಿಕ ಬದಲಾವಣೆಗೆ ಅಣಿಯಾಗಬೇಕು. ಮೌಲ್ಯಯುತ ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರ ಕಲಿಯುವುದು ಇಂದಿನ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ ಬಿತ್ತುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಉಚಿತವಾಗಿ ಸ್ವೆಟರ್ ವಿತರಿಸುವುದು ಶ್ಲಾಘನೀಯʼ ಎಂದರು.

ದೈಹಿಕ ಶಿಕ್ಷಣ ಶಿಕ್ಷಕ ಗುರುನಾಥ ದೇಶಮುಖ ಪ್ರಾಸ್ತಾವಿಕವಾಗಿ ಮಾತನಾಡಿ,ʼಇಂದಿನ ಮಕ್ಕಳು ಮೊಬೈಲ್ ಸೇರಿದಂತೆ ಅನೇಕ ದುಶ್ಛಟಗಳಿಗೆ ಬಲಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಇದರಿಂದ ಯುವ ಸಮೂಹ ತಮ್ಮ ಅಮೂಲ್ಯವಾದ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೋಷಕರ ಸಂಕಷ್ಟಗಳನ್ನು ಅರ್ಥೈಸಿಕೊಂಡು ಬದುಕಿನಲ್ಲಿ ಯಶಸ್ಸು ಕಾಣಲು ಹೆಚ್ಚಿನ ಅಧ್ಯಯನ ನಡೆಸಬೇಕುʼ ಎಂದು ಸಲಹೆ ನೀಡಿದರು.
ಶಾಲೆಯ ಮುಖ್ಯಗುರು ಮನೋಹರ ಬಿರಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಅಡುಗೆ ಸಹಾಯಕಿಯರಿಗೆ ಸ್ವೆಟರ್ ವಿತರಿಸಿದ ರಿಶೈನ್ ಸಂಸ್ಥೆಯವರ ಕಾರ್ಯ ಅಪರೂಪವಾಗಿದೆ. ಬೀದರ್ ನಗರದಲ್ಲಿ ಬಡ, ಅನಾಥ, ನಿರ್ಗತಕರಿಗೆ ಅನ್ನದಾಸೋಹ ಮೂಲಕ ನೂರಾರು ಜನರ ಹೊಟ್ಟೆ ತಣಿಸುವ ಕಾರ್ಯ ಮಾನವೀಯತೆಗೆ ಸಾಕ್ಷಿಯಾಗಿದೆʼ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘದ ಔರಾದ್ ತಾಲೂಕು ಚುನಾವಣೆಯಲ್ಲಿ ಜಯ ಸಾಧಿಸಿದ ಶಿಕ್ಷಕ ಶಿವಾನಂದ ಸ್ವಾಮಿ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ವಾರಕ್ಕೆ 70 ಗಂಟೆ ದುಡಿಮೆ | ನಾನು ಸತ್ತರೂ ನನ್ನ ಅಭಿಪ್ರಾಯ ಬದಲಿಸಿಕೊಳ್ಳಲ್ಲ: ನಾರಾಯಣ ಮೂರ್ತಿ
ಕಾರ್ಯಕ್ರಮದಲ್ಲಿ ರಿಶೈನ್ ಸಂಸ್ಥೆಯ ಸಚಿನ್ ಕೆಂಚಾ, ಸ್ಟೀಫನ್ ಪಾಲ್ ಹಾಗೂ ಶಾಲೆಯ ಶಿಕ್ಷಕರಾದ ರಾಜಶೇಖರ ಕುಶನೂರೆ, ಈಶ್ವರ ಪವಾರ್, ಸಂಗೀತಾ ಪಾಟೀಲ್, ಶಶಿಕಲಾ ಜಾರ್ಜ್, ಸವಿತಾ ಕಾಂಬಳೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಭಾಷ ಚಂದ್ರ ಬೋಸ್ ನಂದಾದೀಪ ಬೋರಾಳೆ ನಿರೂಪಿಸಿ, ವಂದಿಸಿದರು.
ನಾಲಂದಾ ಶಾಲೆಯ ಮಕ್ಕಳಿಗೆ ಸ್ವೆಟರ್ ವಿತರಣೆ :
ಔರಾದ್ ಪಟ್ಟಣದ ನಾಲಂದಾ ಪ್ರೌಢ ಶಾಲೆಯ ಕನ್ನಡ ಹಾಗೂ ಮರಾಠಿ ಮಾಧ್ಯಮದ ವಿದ್ಯಾರ್ಥಿಗಳಿಗೆ ರಿಶೈನ್ ಆರ್ಗನೈಸೇಶನ್ ವತಿಯಿಂದ ಸ್ವೆಟರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ನಾಲಂದಾ ಪಿಯು ಕಾಲೇಜು ಪ್ರಾಚಾರ್ಯ ಡಾ.ಮನ್ಮಥ ಡೋಳೆ, ಹಣೆಗಾಂವ ಹಿರೇಮಠದ ಶಂಕರಲಿಂಗ ಶಿವಚಾರ್ಯ, ವೈದ್ಯರಾದ ಡಾ.ಧನರಾಜ ರಾಗಾ, ಡಾ. ಕಿರಣ ಉಪ್ಪೆ, ನರಸಿಂಗ್ ಬೆಲ್ದಾರ್, ದಿಲೀಪ ಮೇತ್ರಿ, ಮುಖಂಡ ಶರಣಪ್ಪಾ ಪಾಟೀಲ್ ಸೇರಿದಂತೆ ಶಾಲಾ, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.