ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡದ ಸಮಸ್ಯೆ ಪರಿಹರಿಸದೆ ಹೋದರೆ ಮುಂಬರುವ ನ. 17ಕ್ಕೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಬರುವುದನ್ನು ಮುತ್ತಿಗೆ ಹಾಕಿ ಗದ್ದನಕೇರಿ ಕ್ರಾಸ್‌ನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಬಾಗಲಕೋಟೆ ಜಿಲ್ಲಾ ರೈತ ಸಂಘದ ಮುಖಂಡ ಮುತ್ತಪ್ಪ ಕೋಮರ ಎಚ್ಚರಿಕೆ ನೀಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಹಾಗೂ ಸಕ್ಕರೆ ಕಾರ್ಖಾನೆಯ ಮಾಲೀಕರೊಂದಿಗೆ ಈ ಮೊದಲು ಮುಧೋಳ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಸಭೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡದೆ ಹೋದರೆ, ನ. 17ರ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುತ್ತೇವೆ ಎಂದರು.
ಗೋದಾವರಿ ಸಕ್ಕರೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ ₹3 ಸಾವಿರ ಬೆಲೆ ನೀಡುವುದಾಗಿ ಘೋಷಿಸಿದ್ದು ಅದನ್ನು ರೈತರು ಒಪ್ಪಿಕೊಳ್ಳುವುದಿಲ್ಲ. ಕನಿಷ್ಠ ಪ್ರತಿ ಟನ್‌ಗೆ ₹3,500 ನೀಡಬೇಕು. ಅದನ್ನು ಎಲ್ಲ ಕಾರ್ಖಾನೆಯವರು ಕೂಡಲೇ ಘೋಷಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮುಧೋಳ ಸೇರಿದಂತೆ ಎಲ್ಲೆಡೆಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ತಿಂಗಳಿಂದ ಸಭೆ ನಡೆಸುವಂತೆ ಆಗ್ರಹಿಸುತ್ತಿದ್ದರೂ ಸಚಿವರೂ ರೈತರ ಪರವಾಗಿ ಬಾಯಿ ಬಿಡುತ್ತಿಲ್ಲ ಎಂದು ದೂರಿದರು.
ಪಕ್ಕದ ಜಿಲ್ಲೆಗಳಿಂದ ಕಬ್ಬು ತರುವ ಕಾರ್ಖಾನೆಗಳವರು, ಕಬ್ಬು ಕಟಾವು, ಸಾಗಾಣಿಕೆಗಾಗಿ ಪ್ರತಿ ಟನ್‌ಗೆ ₹900 ರಿಂದ ₹1,000 ವಿಧಿಸುತ್ತಿದ್ದಾರೆ. ಇಲ್ಲಿಯವರೆಗೆ ಇಳುವರಿ ಪ್ರಮಾಣ ಅಳೆಯುವುದನ್ನು ರೈತರು ಕಂಡಿಲ್ಲ. ಮತ್ತು ಇಳುವರಿ ಪ್ರಮಾಣವೂ ಕಡಿಮೆ ಆಗಿದೆ. ಇನ್ನು ಕಬ್ಬನ್ನು ನೆರೆ ಜಿಲ್ಲೆಗಳಿಂದ ತಂದರೂ ಅಧಿಕಾರಿಗಳು ಸುಮ್ಮನಿದ್ದು, ಕಾರ್ಖಾನೆಗಳೊಂದಿಗೆ ಶಾಮೀಲು ಆಗಿದ್ದಾರೆಂದು ಆರೋಪಿದರು.
ಮುಖಂಡ ಈರಪ್ಪ ಹಂಚಿನಾಳ ಮಾತನಾಡಿ, ಕಾರ್ಖಾನೆಯವರು ಹಿಂದಿನ ಬಾಕಿ ನೀಡಿಲ್ಲ. ವಾಣಿಜ್ಯ ಉದ್ದೇಶಕ್ಕೆ ಬಹುತೇಕ ಸಕ್ಕರೆ ಬಳಸಲಾಗುತ್ತದೆ. ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ ₹3,100 ಇದ್ದು, ಅದನ್ನು ₹4,100ಕ್ಕೆ ಏರಿಸಬೇಕು. ಬೆಂಬಲ ಬೆಲೆ ನಿಗದಿಯೂ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.
ಈ ವರದಿ ಓದಿದ್ದೀರಾ? ಬೆಳಗಾವಿ | ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ; ಅಪಾರ ಪ್ರಮಾಣದ ವಸ್ತುಗಳು ಭಸ್ಮ
ಸುದ್ಧಿಗೋಷ್ಠಿಯಲ್ಲಿ ಗೋವಿಂದಪ್ಪ ಮೆಟಗುಡ್ಡ, ಗಂಗಪ್ಪ ಮಾದರ, ಬಸವರಾಜ ಗೋನಾಳ, ರಾಜೇಂದ್ರ ಪಾಟೀಲ ಇದ್ದರು.