ಭಾರತವೂ ಸೇರಿದಂತೆ ನಾನಾ ರಾಷ್ಟ್ರಗಳಿಂದ ಅಮೆರಿಕಗೆ ಹೋಗುವ ಸರಕುಗಳ ಮೇಲೆ 10% ಆಮದು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. H1B ವೀಸಾಗಳನ್ನು ಬಿಗಿಗೊಳಿಸುವ ಸಾಧ್ಯತೆಗಳೂ ಇವೆ. ಅಮೆರಿಕದಿಂದ ತಂತ್ರಜ್ಞಾನ ವರ್ಗಾವಣೆಯ ಮೇಲೆ ಬಲವಾದ ನಿಯಂತ್ರಣ ಸಾಧಿಸಲು ಟ್ರಂಪ್ ಮುಂದಾಗಿದ್ದಾರೆ. ಅಮೆರಿಕದಲ್ಲಿ ಹೂಡಿಕೆ ಮಾಡಲು ಅನ್ಯರಿಗೆ ಹೆಚ್ಚಿನ ಅವಕಾಶ ನೀಡುವುದಿಲ್ಲ ಎಂದೂ ಟ್ರಂಪ್ ಹೇಳುತ್ತಿದ್ದಾರೆ. ಇದೆಲ್ಲವೂ ಭಾರತದ ಮೇಲೆ ಪರಿಣಾಮ ಬೀರಬಹುದು.
ಅಮೆರಿಕದಲ್ಲಿ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧಿಕಾರಕ್ಕೆ ಟ್ರಂಪ್ ಅವರ ಮರಳುವಿಕೆಯು ಮಿತ್ರರಾಷ್ಟ್ರಗಳು, ಸ್ನೇಹಿತರು ಹಾಗೂ ವಿರೋಧಿಗಳು ಸೇರಿದಂತೆ ಎಲ್ಲ ದೇಶಗಳಿಗೆ ಆತಂಕ ಸೃಷ್ಟಿಸಿದೆ. ಆದಾಗ್ಯೂ, ಅವರ ಆಡಳಿತದಲ್ಲಿ ಭಾರತದ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಏನನ್ನು ನಿರೀಕ್ಷಿಸಬಹುದು ಎಂಬುದರ ಬಗ್ಗೆ ಭಾರತದ ವಿದೇಶಾಂಗ ನೀತಿ ರಚನಾಕಾರರು ಮತ್ತು ವ್ಯಾಖ್ಯಾನಕಾರರು ಚಿಂತಿಸುತ್ತಿದ್ದಾರೆ. ಉಭಯ ರಾಷ್ಟ್ರಗಳ ಸಂಬಂಧಗಳಲ್ಲಿ ಮುಂದುವರಿದ ಪ್ರಗತಿಯನ್ನು ಎದುರು ನೋಡುತ್ತಿದ್ದು, ಟ್ರಂಪ್ ಮೇಲೆ ಪ್ರಧಾನಿ ಮೋದಿ ವಿಶ್ವಾಸ ಇಟ್ಟಿದ್ದಾರೆ.
‘ಟ್ರಂಪ್ ಅಧಿಕಾರಕ್ಕೆ ಮರಳುವ ಬಗ್ಗೆ ಕೆಲವು ದೇಶಗಳು ಆತಂಕಕ್ಕೊಳಗಾಗಬಹುದು. ಆದರೆ, ಭಾರತ ಹಾಗಲ್ಲ’ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದರು. ಅವರ ಹೇಳಿಕೆಯು ಟ್ರಂಪ್‌ರ ಮರುಆಯ್ಕೆಯನ್ನು ಭಾರತ ಉತ್ಸಾಹದಿಂದ ಸ್ವಾಗತಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಟ್ರಂಪ್‌ಗೆ ಮೋದಿ ಆತ್ಮೀಯರಾಗಿದ್ದಾರೆ. ಇಬ್ಬರೂ ಬಲಪಂಥೀಯ ಸಿದ್ಧಾಂತ ಒಪ್ಪುವ ಸಂಪ್ರದಾಯವಾದಿಗಳೂ ಕೂಡ. ಇದು ಪಾಶ್ಚಿಮಾತ್ಯ ಪ್ರಗತಿಪರ, ಎಡಪಂಥೀಯ, ಮಾನವ ಹಕ್ಕುಗಳು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರರಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಹಾಗೆ ನೋಡಿದರೆ, ಮೋದಿ ಅವರು ನಿಸ್ಸಂದೇಹವಾಗಿ ಟ್ರಂಪ್ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ. ಹಿಂದಿನ ಅಧ್ಯಕ್ಷ ಬೈಡೆನ್ ಜೊತೆಗೂ, ಅದಕ್ಕೂ ಮುಂಚೆ ಒಬಾಮಾ ಜೊತೆಗೂ ಮೋದಿ ಆತ್ಮೀಯತೆ ಹೊಂದಿದ್ದರು. ಆದರೆ, ಟ್ರಂಪ್ ಜೊತೆಗಿನ ಮೋದಿ ಬಾಂಧವ್ಯ ಕೇವಲ ವ್ಯಾವಹಾರಿಕವಾಗಿ ಮಾತ್ರವಲ್ಲ, ಸೈದ್ಧಾಂತಿಕವಾಗಿಯೂ ಇದೆ.
ಟ್ರಂಪ್ ತನ್ನ ಆಡಳಿತದಲ್ಲಿ ಪ್ರಮುಖ ಸ್ಥಾನಗಳಿಗೆ ಮಾಡುವ ನೇಮಕಾತಿಗಳ ವಿಚಾರದಲ್ಲಿ ಭಾರತಕ್ಕೆ ಕುತೂಹಲಕಾರಿ ಆಸಕ್ತಿ ಇದೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿಯಾಗಿ ಮಾರ್ಕ್ ರೂಬಿಯೊ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮೈಕ್ ವಾಲ್ಟ್ಜ್ ಅವರನ್ನು ಟ್ರಂಪ್ ನೇಮಿಸಿದ್ದಾರೆ. ಈ ನೇಮಕಾತಿಗಳ ವಿಚಾರದಲ್ಲಿ ಭಾರತ ತೃಪ್ತವಾಗಿದೆ. ರುಬಿಯೊ ಭಾರತದೊಂದಿಗೆ ಹೆಚ್ಚು ದೃಢವಾದ ರಕ್ಷಣೆ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಸಂಬಂಧಗಳನ್ನು ಬಲವಾಗಿ ಬೆಂಬಲಿಸುವವರು. CAATSA (ಅಮೆರಿಕದ ವಿರೋಧಿಗಳನ್ನು ನಿರ್ಬಂಧಗಳ ಮೂಲಕ ಎದುರಿಸುವುದು) ಶಾಸನದಿಂದ ಭಾರತಕ್ಕೆ ವಿನಾಯಿತಿ ಮತ್ತು ಪಾಕಿಸ್ತಾನಕ್ಕೆ ಅಮೆರಿಕ ಸಹಾಯ ನಿರ್ಬಂಧ ಹಾಗೂ ಚೀನಾಕ್ಕೆ ಪ್ರತಿಯಾಗಿ ಭಾರತವನ್ನು ರೂಬಿಯೊ ನೋಡುತ್ತಿದ್ದಾರೆ. ಮೈಕ್ ವಾಲ್ಟ್ಜ್ ಕೂಡ ಭಾರತಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತಿಳಿವಳಿಕೆ ಹೊಂದಿದ್ದಾರೆ. ಯುಎಸ್-ಭಾರತ ಸಂಬಂಧಗಳು ಗಟ್ಟಿಗೊಳ್ಳಬೇಕೆಂದು ಪ್ರತಿಪಾದಿಸುವವರಾಗಿದ್ದಾರೆ.
ಆದಾಗ್ಯೂ, ನೀತಿ ನಿರೂಪಣೆ ಮತ್ತು ವಿವೇಚನಾಶೀಲ ಹಂತಗಳಲ್ಲಿ ಭಾರತವು ಎಚ್ಚರಿಕೆಯಿಂದ ನೋಡಬೇಕಿದೆ. ಈ ಇಬ್ಬರೂ ಭಾರತದ ಜೊತೆಗಿನ ಸಂಬಂಧಕ್ಕೆ ಹೆಚ್ಚು ಒತ್ತುಕೊಡುತ್ತಿರುವುದು ಭಾರತದ ಮೇಲಿನ ಪ್ರೀತಿಯಿಂದಲ್ಲ, ಚೀನಾ ಮೇಲಿನ ಹಗೆಯಿಂದ. ಅವರಿಗೆ ಚೀನಾವನ್ನು ಎದುರಿಸಲು ಒಂದು ನೆಲೆ ಬೇಕು. ಭಾರತವನ್ನು ಆ ನೆಲೆಯಾಗಿ ನೋಡುತ್ತಿದ್ದಾರೆ. ಚೀನಾದ ಮೇಲಿನ ಟ್ರಂಪ್ ಹಗೆತನಕ್ಕೆ ಭಾರತ ಚಂದಾದಾರಿಕೆ ಪಡೆಯುತ್ತಿದೆ.
ಈ ಸಮಯದಲ್ಲಿ ಭಾರತವು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಇತ್ತೀಚಿಗೆ, ಭಾರತ-ಚೀನಾ ಗಡಿಯಲ್ಲಿ ಕೆಲವು ಸಕಾರಾತ್ಮಕ ಬೆಳವಣಿಗೆಗಳು ಕಂಡುಬರುತ್ತಿವೆ. ಲಡಾಕ್ ಭಾಗದಲ್ಲಿ ಚೀನಾ ಅತಿಕ್ರಮಣ ಮಾಡಿದ್ದ ಪ್ರದೇಶದಿಂದ ವಾಪಸ್ ಹೋಗಿದೆ. ಇದು ಗಡಿ ಉದ್ವಿಗ್ನತೆಯನ್ನು ಸ್ವಲ್ಪ ಕಡಿಮೆ ಮಾಡಿದೆ. ಆದರೆ, ಅದೇ ಅಂತ್ಯವಲ್ಲ. ಮುಂದೆಯೂ ಸವಾಲುಗಳು ಇರಲಿವೆ. ಜೊತೆಗೆ, ಹಲವು ಕ್ಷೇತ್ರಗಳಲ್ಲಿ ಭಾರತ ಈಗಲೂ ಚೀನಾವನ್ನು ಅವಲಂಬಿಸಿದೆ. ನಮ್ಮ ವಿದೇಶಾಂಗ ನೀತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ಮತ್ತು ಕಾರ್ಯತಂತ್ರದ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಲು ಅಗತ್ಯವಿದೆ. ಅದಕ್ಕಾಗಿ ಬ್ರಿಕ್ಸ್ ಮತ್ತು ಶಾಂಘೈ ಸಹಕಾರ ಸಂಸ್ಥೆಯಲ್ಲಿ (SCO) ಭಾರತವು ಪಾಲುದಾರಿಕೆ ಹೊಂದಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಸಿ ಗಾಳಿ ಬೀಸುತ್ತಿದೆ – ತಾಪಮಾನ ಏರುತ್ತಿದೆ; ಪ್ರಕೃತಿ ತಿರುಗಿ ಬೀಳಲಿದೆ!
ಉಕ್ರೇನ್-ರಷ್ಯಾ ಸಂಘರ್ಷವನ್ನು ಪರಿಹರಿಸಲು ಟ್ರಂಪ್ ಒಲವು ತೋರಿದರೆ, ಬಿಕ್ಕಟ್ಟು ಶಮನಕ್ಕಾಗಿ ರಷ್ಯಾದ ಮೇಲೆ ಹೆಚ್ಚಿನ ಒತ್ತಡ ಬೀರಿದರೆ, ಅಮೆರಿಕ ಮತ್ತು ರಷ್ಯಾ ನಡುವೆ ನೇರ ಮಾತುಕತೆ ಪ್ರಾರಂಭವಾದರೆ, ರಷ್ಯಾ-ಉಕ್ರೇನ್ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಸಿಗುತ್ತಿದ್ದ ನೆಲೆಯನ್ನು ಭಾರತದ ಪ್ರಧಾನಿ ಮೋದಿ ಕಳೆದುಕೊಳ್ಳುತ್ತಾರೆ. ವಿಶ್ವಗುರು ಮೂಲೆಗುಂಪಾಗುತ್ತಾರೆ. ಭಾರತೀಯರನ್ನು ಕರೆತರಲು ಯುದ್ಧವನ್ನೇ ನಿಲ್ಲಿಸಿದೆ ಎಂಬಂತಹ ಸುಳ್ಳು ಹೇಳಿಕೆಗಳನ್ನೇ ಮೋದಿ ಆಶ್ರಯಿಸಬೇಕಾಗುತ್ತದೆ.
ಇದೆಲ್ಲದೆ, ಟ್ರಂಪ್ ಮತ್ತು ಅವರ ವಿದೇಶಾಂಗ ಇಲಾಖೆ, ಎನ್‌ಎಸ್‌ಎ ಹಾಗೂ ಪೆಂಟಗನ್ ಅಧಿಕಾರಿಗಳು ಇಸ್ರೇಲ್ ಪರವಾಗಿದ್ದಾರೆ. ಇದು ಪಶ್ಚಿಮ ಏಷ್ಯಾದಲ್ಲಿನ ಶಾಂತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಟ್ರಂಪ್ ಅವರ ಇರಾನ್ ವಿರೋಧಿ ನಿಲುವು ಪಶ್ಚಿಮ ಏಷ್ಯಾಕ್ಕಾಗಲಿ ಅಥವಾ ಭಾರತಕ್ಕಾಗಲಿ ಒಳ್ಳೆಯದನ್ನು ಮಾಡುವುದಿಲ್ಲ.
ಟ್ರಂಪ್ ಅವರ ಮೊದಲ ಅವಧಿಯಲ್ಲಿ ‘ಆದ್ಯತೆಗಳ ಸಾಮಾನ್ಯೀಕೃತ ವ್ಯವಸ್ಥೆ’ಯಿಂದ (ಜಿಎಸ್‌ಪಿ) ಭಾರತವನ್ನು ಹೊರಗಿಟ್ಟಿದ್ದರು. ಭಾರತದ ಉಕ್ಕು ಮತ್ತು ಅಲ್ಯೂಮಿನಿಯಂ ರಫ್ತುಗಳ ಮೇಲೆ ಸುಂಕಗಳನ್ನು ವಿಧಿಸಿದ್ದರು. ಇದು ಭಾರತದ ಮೇಲೆ ಹೆಚ್ಚಿನ ಆರ್ಥಿಕ ಒತ್ತಡವನ್ನು ಉಂಟುಮಾಡಿದೆ. ಈ ಹಿಂದೆ, ಅವರು ತಮ್ಮ ಪ್ರಚಾರದಲ್ಲಿ ಭಾರತವನ್ನು ‘ಸುಂಕದ ರಾಜ’, ‘ವ್ಯಾಪಾರ ದುರುಪಯೋಗ ಮಾಡುವವರು’ ಹಾಗೂ ‘ಭಾರತ ಕೊಳಕು ರಾಷ್ಟ್ರ. ಅಲ್ಲಿನ ಕೆಲ ನಗರಗಳಲ್ಲಿ ಉಸಿರಾಡಲೂ ಸಾಧ್ಯವಿಲ್ಲ’ ಎಂದೆಲ್ಲ ಅಪಹಾಸ್ಯ ಮಾಡಿದ್ದಾರೆ. ಈಗ ಅವರು ಭಾರತವೂ ಸೇರಿದಂತೆ ನಾನಾ ರಾಷ್ಟ್ರಗಳಿಂದ ಅಮೆರಿಕಗೆ ಹೋಗುವ ಸರಕುಗಳ ಮೇಲೆ 10% ಆಮದು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. H1B ವೀಸಾಗಳನ್ನು ಬಿಗಿಗೊಳಿಸುವ ಸಾಧ್ಯತೆಗಳೂ ಇವೆ. ಅಮೆರಿಕದಿಂದ ತಂತ್ರಜ್ಞಾನ ವರ್ಗಾವಣೆಯ ಮೇಲೆ ಬಲವಾದ ನಿಯಂತ್ರಣ ಸಾಧಿಸಲು ಟ್ರಂಪ್ ಮುಂದಾಗಿದ್ದಾರೆ. ಅಮೆರಿಕದಲ್ಲಿ ಹೂಡಿಕೆ ಮಾಡಲು ಅನ್ಯರಿಗೆ ಹೆಚ್ಚಿನ ಅವಕಾಶ ನೀಡುವುದಿಲ್ಲ ಎಂದೂ ಟ್ರಂಪ್ ಹೇಳುತ್ತಿದ್ದಾರೆ. ಇದೆಲ್ಲವೂ ಭಾರತದ ಮೇಲೆ ಪರಿಣಾಮ ಬೀರಬಹುದು.
ಈ ಸಮಸ್ಯೆಗಳ ನಡುವೆಯೂ ಸಹ, ಮೋದಿ ಮತ್ತು ಟ್ರಂಪ್ ನಡುವಿನ ವೈಯಕ್ತಿಕ ಬಾಂಧವ್ಯ ಮತ್ತು ರಾಜಕೀಯ ಬೆಂಬಲ ಗಟ್ಟಿಯಾಗಿದೆ. ಭಾರತವು 2025ರಲ್ಲಿ ನಡೆಯುವ ಕ್ವಾಡ್ ಶೃಂಗಸಭೆಯನ್ನು ಆಯೋಜಿಸಲಿದೆ. ಟ್ರಂಪ್ ಅಧಿಕಾರಕ್ಕೇರುತ್ತಲೇ ಭಾರತಕ್ಕೆ ಭೇಟಿ ನೀಡಬೇಕೆಂಬ ಧಾವಂತ ಭಾರತಕ್ಕಿದೆ. ಮೋದಿ-ಟ್ರಂಪ್ ವೈಯಕ್ತಿಕ ಬಾಂಧವ್ಯದಿಂದ ಭಾರತಕ್ಕೆ ಯಾವುದಾದರೂ ಪ್ರಯೋಜನ ಸಿಗಬಹುದೇ?